ಚಾಮರಾಜ ಸವಡಿ ಅವರ ಲೇಖನ : “ಥತ್, ಯಾವನಿಗೆ ಬೇಕು ಇದೆಲ್ಲ…”

ʼಥತ್, ಯಾವನಿಗೆ ಬೇಕು ಇದೆಲ್ಲ…ʼ

ಹಾಗಂತ ನಾವೆಲ್ಲ ಎಷ್ಟೋ ಸಲ ಅಂದುಕೊಳ್ಳುತ್ತೇವೆ. ಬದುಕು ನಮ್ಮನ್ನು ನಟ್ಟನಡು ರಸ್ತೆಯಲ್ಲಿ ನಿಲ್ಲಿಸಿ ಕೆನ್ನೆಗೆ ತಪರಾಕಿ ಕೊಟ್ಟಾಗೆಲ್ಲ, ಮನಸ್ಸಿನ ತುಂಬ ʼಥತ್…ʼ ಎಂಬ ಹಳಹಳಿಯೇ!

ಹೌದು, ಬದುಕು ಆವಾಗಾವಾಗ ಕೆಲವು ತಪರಾಕಿಗಳನ್ನು ಕೊಡುತ್ತಿರುತ್ತದೆ. ಮುರಿದು ಬೀಳುವ ಪ್ರೀತಿ, ಮೊಳೆತು ನಿಲ್ಲುವ ಅಪನಂಬಿಕೆ, ತಣ್ಣಗಿನ ವಂಚನೆ, ಕೈಕೊಟ್ಟ ನಂಬಿಕೆ ಹಾಗೂ ಜೊತೆಗಿದ್ದವರೇ ಬೆನ್ನಿಗೆ ಚೂರಿ ಹಾಕಿದಾಗೆಲ್ಲ, ಮನಸ್ಸಿನ ತುಂಬ ʼಥತ್…ʼಗಳೇ!

ನನಗೆ ಬುದ್ಧಿ ತಿಳಿದಾಗಿನಿಂದ ಇಂತಹ ಸಾಕಷ್ಟು ತಪರಾಕಿಗಳು ಬಿದ್ದಿವೆ. ಒಂದೊಂದು ಏಟು ಬಿದ್ದಾಗಲೂ, ಮನಸ್ಸು ʼಥತ್…ʼ ಎಂದು ಹಳಹಳಿಸಿದೆ. ಅದುವರೆಗಿನ ನಂಬಿಕೆ ಸೌಧ ಕ್ಷಣಾರ್ಧದಲ್ಲಿ ಕುಸಿದಂತೆ, ಇಡೀ ಜಗತ್ತಿನ ಬಗ್ಗೆ ಅಸಹ್ಯ, ತಿರಸ್ಕಾರ, ಅಪನಂಬಿಕೆಗಳು ಬಲಿತಂತೆ ಆಗಿದೆ. ಆದರೆ, ಅದು ಕೆಲ ಕಾಲ ಮಾತ್ರ. ಏಟಿನ ನೋವು ಇಳಿದು, ಅದು ಶಾಶ್ವತವಾಗಿ ಬಿಟ್ಟುಹೋಗುವ ಕಹಿ ಭಾವನೆಯಷ್ಟೇ ಉಳಿದಾಗ, ಒಬ್ಬನೇ ಕೂತು ಯೋಚಿಸಿದ್ದಿದೆ.

ಈ ತಪರಾಕಿ, ಈ ಘಟನೆ ನನಗೆ ಒಂದು ಪಾಠವಾಗಲಿ ಅಂತ ಅಂದುಕೊಂಡದ್ದಿದೆ. ಇಂತಹ ಒಂದು ತಪರಾಕಿ ಬೀಳಲು ತಪ್ಪೆಲ್ಲವೂ ನನ್ನೊಬ್ಬನದೇ ಆಗಿರಲಿಕ್ಕಿಲ್ಲ, ನಿಜ. ಆದರೆ, ನನ್ನದೂ ಒಂದಿಷ್ಟು ತಪ್ಪಿರಬಹುದಲ್ಲವೆ? ಎಂದು ಯೋಚಿಸಿದ್ದಿದೆ. ನನ್ನದಾಗಿರುವ ತಪ್ಪನ್ನು ಸರಿಪಡಿಸಿಕೊಳ್ಳುವ ದಾರಿಗಳನ್ನು ಹುಡುಕಿದ್ದಿದೆ. ತಪರಾಕಿ ಕಲಿಸಿದ ಪಾಠವನ್ನು ನೆನಪಿಸಿಕೊಂಡು, ಮತ್ತೆ ಹೊಸ ಪ್ರಯತ್ನಕ್ಕೆ ಮನಸ್ಸು ಸಿದ್ಧಪಡಿಸಿಕೊಂಡದ್ದಿದೆ.

ಅಲ್ಲವೆ? ತಪ್ಪೆಲ್ಲವೂ ನಮ್ಮೊಬ್ಬರದೇ ಆಗಿರಲಿಕ್ಕಿಲ್ಲ. ಆದರೆ, ನನ್ನದೂ ಒಂದಿಷ್ಟು ತಪ್ಪಿರಬಹುದಲ್ಲವೆ? ಈ ಒಂದು ನಿಷ್ಪಕ್ಷಪಾತ ಯೋಚನೆಯೇ ನಮ್ಮನ್ನು ಸುಲಭವಾಗಿ ಸರಿದಾರಿಗೆ ಹತ್ತಿಸಬಲ್ಲುದು. ಉಳಿದವರ ತಪ್ಪನ್ನು ನಾನು ಸರಿಪಡಿಸಲಿಕ್ಕೆ ಆಗಲಿಕ್ಕಿಲ್ಲ. ಆದರೆ, ನನ್ನ ತಪ್ಪನ್ನು ನಾನೇ ಸರಿಪಡಿಸಬೇಕು. ಅದೇ ನಿಜವಾದ ಪಾಠ. ಅದೇ ನಿಜವಾದ ಬೆಳವಣಿಗೆ.

ಏಕೆಂದರೆ, ಅತಿಯಾದ ಭಾವುಕತೆ ಅತಿ ದೊಡ್ಡ ದೌರ್ಬಲ್ಯ ಎಂಬ ಸರಳ ಸತ್ಯ ತಿಳಿದುಕೊಳ್ಳಲು ನನಗೆ ಐವತ್ತು ವರ್ಷಗಳೇ ಬೇಕಾದವು. ನಾನು ಸುಲಭವಾಗಿ ನಂಬುವ ಎಲ್ಲರೂ ಆ ನಂಬಿಕೆಗೆ ಅರ್ಹರಾಗಿರುವುದಿಲ್ಲ ಎಂಬ ಸರಳ ಸತ್ಯ ಜೀರ್ಣಿಸಿಕೊಳ್ಳಲೂ ನನಗೆ ಬೇಕಾಗಿದ್ದು ಅದೇ ಅರ್ಧ ಶತಕದ ಅವಧಿ. ದುಬಾರಿ ಬೆಲೆ ಕೊಟ್ಟು ಈ ಸರಳ ಸತ್ಯಗಳನ್ನು ತಿಳಿದುಕೊಂಡಾಗಷ್ಟೇ ಬದುಕು ಬದಲಿಸಿಕೊಳ್ಳಲು ಹಾಗೂ ಸಮೃದ್ಧಗೊಳಿಸಿಕೊಳ್ಳಲು ನನಗೆ ಸಾಧ್ಯವಾಗಿದ್ದು.

ಈ ಸರಳ ಸತ್ಯಗಳನ್ನು ಬೇರೆ ಯಾರೋ ಹೇಳಿದ್ದರೆ ಅದನ್ನು ನಾನು ಅರ್ಥ ಮಾಡಿಕೊಳ್ಳುತ್ತಿದ್ದೆನೋ ಇಲ್ಲವೋ. ಆದರೆ, ಒಂದಾದ ನಂತರ ಒಂದರಂತೆ ಬಿದ್ದ ತಪರಾಕಿಗಳು ಈ ಸರಳ ಸತ್ಯವನ್ನು ಮನದಟ್ಟು ಮಾಡಿಸಿದವು. ಹೀಗಾಗಿ, ಅವುಗಳಿಗೆ ಧನ್ಯವಾದ ಹೇಳಲೇಬೇಕು.

ನನ್ನ ಬೆನ್ನಿಗೆ ಚೂರಿಯಿಟ್ಟ ಪ್ರತಿಯೊಬ್ಬರೂ ಅಮೂಲ್ಯ ಪಾಠ ಕಲಿಸಿದ್ದಾರೆ. ನನ್ನ ಶ್ರಮದಿಂದ ಅನ್ನ ಮತ್ತು ಆತ್ಮಗೌರವ ಗಳಿಸಿದವರ ವಂಚನೆಗಳು ನನ್ನ ಬದುಕಿಗೆ ಅವಶ್ಯಕವಾದ ತಿರುವು ನೀಡಿವೆ. ಆ ಎಲ್ಲಾ ತಪರಾಕಿಗಳಿಗೆ ಹಾಗೂ ಅವನ್ನು ಮುಲಾಜಿಲ್ಲದೇ ನೀಡಿದ ಎಲ್ಲರಿಗೂ ನನ್ನ ಅನಂತ ಕೃತಜ್ಞತೆಗಳು ಸಲ್ಲುತ್ತವೆ.

ಬದುಕೇಕೆ ಹೀಗೆ ಎಂದು ಕೇಳುವವರಿಗೆ ನಾನು ಹೇಳಬಹುದಾದ ಸರಳ ಉತ್ತರವಿದು: ʼನಿನ್ನ ದಾರಿಯನ್ನು ಬದಲಿಸಿಕೋʼ.

ಹೌದು, ತಪರಾಕಿ ಬಿದ್ದಾಗೆಲ್ಲ ನಮ್ಮ ದಾರಿ ಬದಲಾಗಲೇಬೇಕು. ನಮ್ಮ ವಿಧಾನಗಳು ಬದಲಾಗಲೇಬೇಕು ಅಥವಾ ಪರಿಷ್ಕೃತಗೊಳ್ಳಲೇಬೇಕು. ತಪರಾಕಿಯ ಮೂಲಕ ಬದುಕು ಏನೋ ಸಂದೇಶ ಕೊಡುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಆ ಸೂಕ್ಷ್ಮತೆ ನಮ್ಮಲ್ಲಿಲ್ಲದೇ ಹೋದರೆ, ತಪರಾಕಿಗಳು ಹೆಚ್ಚಾಗುತ್ತಲೇ ಹೋಗುತ್ತವೆ.

ಸಂಶಯವಿದ್ದರೆ, ನಿಮಗೆ ಬಿದ್ದ ಏಟುಗಳನ್ನೊಮ್ಮೆ ನೆನಪಿಸಿಕೊಳ್ಳಿ! ಸತ್ಯ ಸ್ಪಷ್ಟವಾಗಿ ಕಾಣುತ್ತದೆ.

ಚಾಮರಾಜ ಸವಡಿ

ಲೇಖನ : ಚಾಮರಾಜ ಸವಡಿ | ಕೊಪ್ಪಳ ಮೊ : 98863 17901

Leave a Reply

Your email address will not be published. Required fields are marked *