ರಾಮ ರಾಜ್ಯದಲ್ಲಿ ಎಲ್ಲರೂ ಸೌಖ್ಯವಾಗಿದ್ದರು ಎಂಬುದನ್ನು ನಾವು ಪುರಾಣಗಳಲ್ಲಿ ಓದಿದ್ದೇವೆ. ಆದರೆ, ಅದನ್ನು ಜಾರಿಗೆ ತರುವಲ್ಲಿ ವಿಫಲರಾಗಿದ್ದೇವೆ : ಡಾ. ವಿನಯ್ ಗೌಡ ಅಸಮಾಧಾನ
ರಾಮನಗರ : ನಗರದ ಕನಕಪುರ ವೃತ್ತದ ಬಳಿ ಹಿಂದೂ ಜಾಗೃತಿ ಸೇನೆ ವತಿಯಿಂದ ಭಾನುವಾರ ಶ್ರೀರಾಮನವಮ ಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಹಿಂದೂ ಜಾಗೃತಿ ಸೇನೆ ರಾಜ್ಯಾಧ್ಯಕ್ಷ ಡಾ.ವಿನಯ್ ಗೌಡ ಹಾಗೂ ರಾಮನಗರ ಜಿಲ್ಲಾಧ್ಯಕ್ಷ ಕೆ.ರವಿ ಅವರು ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸೇನೆಯ ರಾಜ್ಯಾಧ್ಯಕ್ಷ ಡಾ. ವಿನಯ್ ಗೌಡ ಅವರು, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆಡಳಿತವು ಎಲ್ಲ ಕಾಲಕ್ಕೂ, ಎಲ್ಲಾ ಯುಗಕ್ಕೂ ಬಹುದೊಡ್ಡ ಮಾದರಿಯಾಗಿದ್ದು, ರಾಮ ರಾಜ್ಯದಲ್ಲಿ ಎಲ್ಲರೂ ಸೌಖ್ಯವಾಗಿದ್ದರು ಎಂಬುದನ್ನು ನಾವು ಪುರಾಣಗಳಲ್ಲಿ ಓದಿದ್ದೇವೆ. ಆದರೆ, ಅದನ್ನು ಜಾರಿಗೆ ತರುವಲ್ಲಿ ವಿಫಲರಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಿತೃ ಪರಿಪಾಲಕರಾದ ಶ್ರೀರಾಮ ಹಿಂದೂಗಳಲ್ಲಿ ಜಾಗೃತಿ ಮೂಡಿಸಿದ ಮೂಲ ಪುರುಷ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕಿದೆ. ಭಾರತೀಯತೆ ಹಾಗೂ ಹಿಂದೂ ಧರ್ಮ ವಿಶ್ವಾದ್ಯಂತ ಪಸರಿಸಬೇಕು ಎಂಬುದು ಹಿಂದೂ ಜಾಗೃತಿ ಸೇನೆಯ ಆಶಯವಾಗಿದೆ ಎಂದು ವಿನಯ್ ಗೌಡ ತಿಳಿಸಿದರು.
ಹಿಂದೂ ಜಾಗೃತಿ ಸೇನೆಯ ರಾಮನಗರ ಜಿಲ್ಲಾಧ್ಯಕ್ಷ ಕೆ.ರವಿ ಮಾತನಾಡಿ, ಹಿಂದೂ ಜಾಗೃತಿ ಸೇನೆಯ ಎಲ್ಲಾ ಪದಾಧಿಕಾರಿಗಳು ಒಗ್ಗಟ್ಟಿನ ಮಂತ್ರದೊಂದಿಗೆ ಸಮಾಜಮುಖಿ ಸೇವೆ ಮಾಡಲು ಬದ್ಧವಾಗಿದ್ದು, ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಅನೇಕ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಹಿಂದೂ ಜಾಗೃತಿ ಸೇನೆ ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜು, ಜಿಲ್ಲಾ ಉಪಾಧ್ಯಕ್ಷ ನಂದೀಶ್, ಖಜಾಂಚಿ ಕಿರಣ್, ಯುವ ಮುಖಂಡರಾದ ಪ್ರಮೋದ್ (ಮೋದಿ), ಶಶಿಧರ್ ಸೇರಿದಂತೆ ಹಲವಾರು ಪದಾಧಿಕಾರಿಗಳು ಭಾಗವಹಿಸಿ, ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದರು.