ನಾನು ಗೂಂಡಾಗಿರಿ ನಡೆಸಿಲ್ಲ. ಯಾರ ಮನೆಮಠ ಹಾಳು ಮಾಡಿಲ್ಲ. ಗಿಡವಾಗಿದ್ದ ನನ್ನನ್ನು ಜನ ಮರವಾಗಿ ಬೆಳೆಸಿದ್ದಾರೆ. ನಾನು ನೆರಳು ಕೊಡುತ್ತೇನೆಯೇ ವಿನಾ ಯಾರ ಮೇಲೂ ಬೀಳುವುದಿಲ್ಲ : ಎಚ್.ಡಿ. ಕುಮಾರಸ್ವಾಮಿ

ರಾಮನಗರ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಪೂರ್ಣ ಅಧಿಕಾರ ಕೊಡಿ. ಇನ್ನೊಬ್ಬರ ಹಂಗಿಲ್ಲದ ಸರಕಾರ ನೀಡಿ. ನೀರಾವರಿ ಕ್ಷೇತ್ರದಲ್ಲಿ ರಾಜ್ಯಕ್ಕೆ 75 ವರ್ಷಗಳಿಂದ ಆಗಿರುವ ಅನ್ಯಾಯವನ್ನು ಕೇವಲ ಐದು ವರ್ಷಗಳಲ್ಲಿ ಸರಿಪಡಿಸುತ್ತೇನೆ. ಇಲ್ಲವಾದರೆ ನನ್ನ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರು ಶಪಥ ಮಾಡಿದರು.

ರಾಮನಗರದಲ್ಲಿ ಮಂಗಳವಾರ ಜನತಾ ಜಲಧಾರೆ ಗಂಗಾ ರಥಗಳಿಗೆ ಹಸಿರು ನಿಶಾನೆ ನೀಡಿದ ನಂತರ ನಡೆದ ಪಕ್ಷದ ಬೃಹತ್ ಸಮಾವೇಶವನ್ನು ಅವರು ಉದೇಶಿಸಿ ಮಾತನಾಡಿದರು.

ಈ ಜಲಧಾರೆ ಕಾರ್ಯಕ್ರಮವನ್ನು ಶುದ್ಧ ಮನಸು, ಮಹಾನ್ ಉದ್ದೇಶದಿಂದ ಕೈಗೊಂಡಿದ್ದೇನೆ. ಕೇವಲ ಮತಕ್ಕಾಗಿ ಆಯೋಜನೆ ಮಾಡಿಲ್ಲ ಎಂದರು ಅವರು.

ಕಳೆದ 75 ವರ್ಷಗಳಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ. ಕೇಂದ್ರದಲ್ಲಿ ಬಂದ ಎಲ್ಲ ಸರಕಾರಗಳಿಂದ ನೀರು, ಭಾಷೆ ಮತ್ತು ನೆಲದ ವಿಚಾರಗಳಲ್ಲಿ ನಮಗೆ ದ್ರೋಹ ಆಗಿದೆ. ರಾಷ್ಟ್ರೀಯ ಪಕ್ಷಗಳಿಗೆ ಪಾಠ ಕಲಿಸುವ ಸಮಯ ಬಂದಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಮುಂದಿನ ಚುನಾವಣೆಯಲ್ಲಿ ಜಾತಿ ವ್ಯಾಮೋಹ ಬಿಡಿ. ನಿಮ್ಮ ಹಣ ಲೂಟಿ ಹೊಡೆದು ನಿಮಗೇ ಕೊಡುತ್ತಾರೆ. ಅಂತಹ ಪಾಪದ ಹಣ ಪಡೆಯಬೇಡಿ. ನಾವು ಪ್ರಾಮಾಣಿಕವಾಗಿ ನಿಮ್ಮ ಕೆಲಸ ಮಾಡಲು ಸಿದ್ಧರಿದ್ದೇವೆ. ಒಮ್ಮೆ ನಮಗೆ ಐದು ವರ್ಷದ ಪೂರ್ಣ ಸರಕಾರ ನೀಡಿ. ಯಾವುದೇ ಸಮಸ್ಯೆ ಬಂದರೂ ಎಲ್ಲ ನೀರಾವರಿ ಯೋಜನೆಗಳನ್ನೂ ಪೂರ್ಣ ಮಾಡುತ್ತೇವೆ. ಈ ಮಾತಿಗೆ ನಾನು ತಪ್ಪಲಾರೆ. ಒಂದು ವೇಳೆ ತಪ್ಪಿದರೆ ಪಕ್ಷವನ್ನೇ ವಿಸರ್ಜಿಸುವ ಬಗ್ಗೆ ಮೀನಾ ಮೇಷ ಇಲ್ಲ ಎಂದರು ಕುಮಾರಸ್ವಾಮಿ.

ಮೇಕೆದಾಟು ಯೋಜನೆಗೆ ತಮಿಳುನಾಡಿನ ಒಪ್ಪಿಗೆಯು ಬೇಕಿಲ್ಲ. ಕೇಂದ್ರದ ಪರಿಸರ ಹಾಗೂ ಅರಣ್ಯ ಇಲಾಖೆ ಅನುಮತಿ ಕೊಟ್ಟರೆ ಸಾಕು. ನಾಳೆಯೇ ಕೆಲಸ ಶುರು ಮಾಡಬಹುದು. ಕೇವಲ ಪಾದಯಾತ್ರೆ ಮಾಡಿದರೆ ಏನಕ್ಕೂ ಪ್ರಯೋಜನ ಇಲ್ಲ. ಇಲ್ಲಿ ಅಣೆಕಟ್ಟು ಕಟ್ಟಿ ಕುಡಿಯಲು ನೀರು ಕೊಟ್ಟು ವಿದ್ಯುತ್ ಉತ್ಪಾದನೆ ಮಾಡಬೇಕು ಎನ್ನುವುದು ಗೌಡರ ಕನಸು. ಈ ಕನಸು ಈಡೇರಲು ಜೆಡಿಎಸ್ ಅಧಿಕಾರಕ್ಕೆ ಬರಲೇಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಸಾಲ ಮನ್ನಾ ಐತಿಹಾಸಿಕ:

ನಮ್ಮ ರೈತರ 25000 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ ನನ್ನ ನಿರ್ಧಾರ ಐತಿಹಾಸಿಕ ಎಂದ ಮಾಜಿ ಮುಖ್ಯಮಂತ್ರಿಗಳು, ಸಾಲಮನ್ನಾ ಮಾಡುವ ಒಂದೇ ಉದೇಶಕ್ಕೆ ನಾವು ಕಾಂಗ್ರೆಸ್ ಜತೆ ಸರ್ಕಾರ ಮಾಡಿದೆವು. ಇದರಿಂದ ಕನಕಪುರ ಕ್ಷೇತ್ರದ ಕಾರ‌್ಯಕರ್ತರಿಗೆ ನೋವಾಗಿದೆ. ಇದಕ್ಕಾಗಿ ಬಹಿರಂಗವಾಗಿ ಕ್ಷಮೆ ಕೇಳುತ್ತೆನೆ. ಮುಂದಿನ ದಿನಗಳಲ್ಲಿ ಕನಕಪುರದಲ್ಲಿ ಪಕ್ಷ ಬಲಗೊಳಿಸಲು ಎಲ್ಲ ರೀತಿಯ ಶಕ್ತಿ ತುಂಬುತ್ತೆನೆ ಎಂದು
ಅವರು ಹೇಳಿದರು.

ನನ್ನ ಸರಕಾರವನ್ನು ಕೆಡವಿದರೂ ನಾನು ಮೌನವಾಗಿದ್ದೆ. ಬಿಜೆಪಿ ಜನರಿಗೆ ಒಳ್ಳೆ ಕೆಲಸ ಮಾಡಲಿ ಎಂದು ಸುಮ್ಮನಿದ್ದೆ. ನಾನು ಮಾತನಾಡಿ, ಅವರ ಗಮನ ಬೇರೆಡೆ ಹೋಗುವುದು ಬೇಡ ಎಂದಿದ್ದೆ. ಶೇ.40ರಷ್ಟು ಕಮಿಷನ್ ಸರಕಾರ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಾರೆ. ರಾಜ್ಯವನ್ನು ಧರ್ಮದ ಹೆಸರಿನಲ್ಲಿ ಒಡೆದು ಆಳುತ್ತಿದೆ ಬಿಜೆಪಿ. ನೆರೆ ಪೀಡಿತರಾಗಿದ್ದ ಮನೆ ನಿರ್ಮಿಸಲು ನೀಡಿದ್ದ ಹಣವನ್ನು ಕಿತ್ತುಕೊಂಡಿದೆ. ಒಟ್ಟಿನಲ್ಲಿ ಬಿಜೆಪಿ ಯಾರನ್ನು ಸಾಯಿಸುತ್ತಾರೋ. ಯಾರನ್ನು ಉಳಿಸುತ್ತಾರೋ? ಆ ದೇವರೆ ಕಾಪಾಡಬೇಕು ಎಂದರು ಅವರು.

ರಾಮನ ಹೆಸರಿನಲ್ಲಿ ರಾಜಕೀಯ ಮಾಡಬೇಡಿ.‌
ರಾಮನ ಹೆಸರಿಯಲ್ಲಿ ಲಕ್ಷಾಂತರ ಖರ್ಚು ಮಾಡಿ, ಶೋಭಾಯಾತ್ರೆ ನಡೆಸಿ, ಡಿಜೆ ಹಾಕಿಕೊಂಡು ಹೋಗುವವರು ಒಂದು ವರ್ಗವಾಗಿದ್ದರೆ, ಇದೇ ರಾಮನ ಹೆಸರಿನಲ್ಲಿ ರಸ್ತೆ ಬದಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿ ಖುಷಿ ಪಡುವವರು ಮತ್ತೊಂದು ವರ್ಗ. ಪಾಪದ ಹಣದಲ್ಲಿ ರಾಮನ ಜಪ ಮಾಡುವುದಕ್ಕಿಂತ, ಬಡ ವರ್ಗದ ಸೇವೆಯೇ ಶ್ರೇಷ್ಠ. ಇಂತಹವರು ನಿಜವಾದ ದೇಶಪ್ರೇಮಿಗಳು ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಕೇಸರಿ ಶಾಲು ಹಾಕಿಕೊಂಡು ರಸ್ತೆಯ ಮೇಲೆ ವ್ಯಾಪಾರ ಮಾಡುವವರ ಮೇಲೆ ಗದಾಪ್ರಹಾರ ನಡೆಸುವವರು ಈಗ ಬನ್ನಿ. ಬೆಲೆ ಏರಿಕೆ, ನೀರಾವರಿ ವಿಚಾರಗಳ ಬಗ್ಗೆ ಬೀದಿಗೆ ಬನ್ನಿ ಎಂದು ಅವರು ಸವಾಲು ಹಾಕಿದರು.

ಇನ್ನೆಷ್ಟು ವರ್ಷಗಳ ಕಾಲ ರಾಷ್ಟ್ರೀಯ ಪಕ್ಷಗಳ ಗುಲಾಮಗಿರಿಯಲ್ಲಿ ನಾವುಗಳು ಬದುಕಬೇಕು? ಧರ್ಮದ ಹೆಸರಿನಲ್ಲಿ ರಕ್ತದ ಕೋಡಿ ಹರಿಸುವ ಬದಲು, ನೀರಾವರಿ ವಿಚಾರಗಳ ಬಗ್ಗೆ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಹೋರಾಟ ನಡೆಸಲಿ ಎಂದರು ಅವರು.

ನಿಖಿಲ್ ಆಕರ್ಷಣೆ

ಜಲಧಾರೆ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಪ್ರಮುಖ ಆಕರ್ಷಣೆ ಆಗಿದ್ದರು.

ಚುಟುಕಾಗಿ ಮಾತನಾಡಿದ ಅವರು, ಜಲಧಾರೆ ಅತ್ಯುತ್ತಮ ಕಾರ್ಯಕ್ರಮ ಆಗಿದ್ದು, ಎಲ್ಲರೂ ಸಂಘಟಿರಾಗಿ ಇದನ್ನು ಯಶಸ್ವಿಗೊಳಿಸೋಣ ಎಂದು ಯುವ ಕಾರ್ಯಕರ್ತರಿಗೆ ಕರೆ ನೀಡಿದರು.

Leave a Reply

Your email address will not be published. Required fields are marked *