ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಲೋಪ : 1,200 ಶಿಕ್ಷಕರು ಕಪ್ಪುಪಟ್ಟಿಗೆ

ಬೆಂಗಳೂರು: ಎರಡು ವರ್ಷಗಳ ಹಿಂದೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಲೋಪ ಎಸಗಿದ 1,200 ಶಿಕ್ಷಕರನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಪ್ಪುಪಟ್ಟಿಗೆ ಸೇರಿಸಿದೆ. ಅಲ್ಲದೆ, ಈ ಶಿಕ್ಷಕರಿಗೆ ದಂಡವನ್ನೂ ವಿಧಿಸಿದೆ.

2021–22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ 234 ಕೇಂದ್ರಗಳಲ್ಲಿ ಇದೇ 23ರಿಂದ ಆರಂಭವಾಗಲಿದೆ. ಆದರೆ, ಕಪ್ಪುಪಟ್ಟಿಯಲ್ಲಿ ಹೆಸರಿರುವ ಶಿಕ್ಷಕರನ್ನು ಮೌಲ್ಯಮಾಪನ ಕಾರ್ಯದಿಂದ ಹೊರಗಿಡಲಾಗಿದೆ. ಈ ವರ್ಷ 65 ಸಾವಿರಕ್ಕೂ ಹೆಚ್ಚು ಶಿಕ್ಷಕರು ಮೌಲ್ಯಮಾಪನದಲ್ಲಿ ಭಾಗವಹಿಸಲಿದ್ದಾರೆ.

ಮೌಲ್ಯಮಾಪನಗೊಂಡ ಉತ್ತರಪತ್ರಿಕೆಗಳ ಮರು ಮೌಲ್ಯಮಾಪನದ ಸಂದರ್ಭದಲ್ಲಿ ಆರು ಅಥವಾ ಅದಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸ ಕಂಡುಬಂದ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ ಶಿಕ್ಷಕರಿಗೆ ದಂಡ ವಿಧಿಸಿ, ಕಪ್ಪುಪಟ್ಟಿಗೆ ಸೇರಿಸಲಾಗಿದೆ.

‘ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನದ ಸಂದರ್ಭದಲ್ಲಿ ಪತ್ತೆಯಾದ ಅಂಕಗಳ ವ್ಯತ್ಯಾಸವನ್ನು ಆಧರಿಸಿ 800 ರೂ.ರಿಂದ 2000 ರೂ.ದವರೆಗೆ ದಂಡ ವಿಧಿಸಲಾಗಿದೆ. ದಂಡ ಪಾವತಿಸಿದ ಶಿಕ್ಷಕರನ್ನು ಮುಂದಿನ ವರ್ಷದಿಂದ ಮೌಲ್ಯಮಾಪನ ಕಾರ್ಯಕ್ಕೆ ಪರಿಗಣಿಸಲಾಗುವುದು. ಪಾವತಿಸದವರು, ದಡ ಮೊತ್ತ ಪಾವತಿಸುವರೆಗೂ ಕಪ್ಪುಪಟ್ಟಿಯಲ್ಲಿಯೇ ಮುಂದುವರಿಯಲಿದ್ದಾರೆ’ ಎಂದು ಪರೀಕ್ಷಾ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

Leave a Reply

Your email address will not be published. Required fields are marked *