ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಉದ್ದೇಶದಿಂದ ಸಚಿವ ಸ್ಥಾನಕ್ಕೆ ನಾಳೆ ರಾಜೀನಾಮೆ ನೀಡುತ್ತೇನೆ : ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗುರುವಾರ ಪ್ರಕಟಿಸಿದ್ದಾರೆ.
ಗುರುವಾರ ಸಂಜೆ ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ ಅವರು, ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಉದ್ದೇಶದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ತಪ್ಪು ಮಾಡಿದ್ದರೆ ದೇವರು ನನಗೆ ಶಿಕ್ಷೆ ನೀಡಲಿ. ಎಲ್ಲವನ್ನೂ ಎದುರಿಸಿ ಆರೋಪಮುಕ್ತವಾಗಿ ಹೊರ ಬರುತ್ತೇನೆ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ.