ಯೋಗೀಶ್ ಚಕ್ಕೆರೆ ಅವರ ಲೇಖನ : “ಮುಕ್ತಿಯ ಮಾರ್ಗ ತೋರಿದ ಮಹಾವೀರ”

ಇಂದು ಮಹಾವೀರ ಜಯಂತಿ.ಅಹಿಂಸಾ ತತ್ವ ಬೋಧಿಸಿದ ಧಾರ್ಮಿಕ ಸುಧಾರಕ ಭಗವಾನ್ ಮಹಾವೀರರ ಪುಣ್ಯಸ್ಮರಣೆಯ ದಿನ. ಬ್ರಾಹ್ಮಣೀಯ ಸಮಾಜದ ಹುಣ್ಣಾಗಿ ಪರಿವರ್ತಿತವಾಗಿದ್ದ ಜಾತಿ ವ್ಯವಸ್ಥೆಯ ವಿರುದ್ಧ ಪ್ರಥಮ ಬಾರಿಗೆ ಪ್ರತಿಭಟನೆಯ ಕೂಗು ಹಾಕಿ ಮನುಷ್ಯರೆಲ್ಲರೂ ಒಂದೇ ಎಂಬ ತತ್ವ ಸಾರಿ ಜೀವಿಗಳ ವಿಷಯದಲ್ಲಿ ದಯೆ ಕರುಣೆ ಹಾಗೂ ಅನುಕಂಪವನ್ನು ತೋರಿಸುವಂತೆ ಮಾನವರನ್ನು ಸಿದ್ಧಗೊಳಿಸಿದ ಸಮಾಜೋ – ಧಾರ್ಮಿಕ ಸುಧಾರಕ ವರ್ಧಮಾನ ಮಹಾವೀರ. ಪಶುಬಲಿ ನರಬಲಿ ಯಾಗ ಯಜ್ಞಗಳ ಅಂಧತ್ವದಿಂದ ಕೂಡಿದ ಧಾರ್ಮಿಕ ವ್ರತಾಚರಣೆ, ಸಾಮಾಜಿಕ ಅವ್ಯವಸ್ಥೆಯ ವಿರುದ್ಧ ಹೋರಾಡಿ ಮಹಾ ಪರಿತ್ಯಾಗಿಯಾಗಿ, ಮಹಾಜ್ಞಾನಿಯಾಗಿ ಸತ್ಯ, ಅಹಿಂಸೆ, ಶ್ರಮ ತತ್ವವನ್ನು ಪ್ರಚುರಪಡಿಸಿದ ಮಹಾವೀರ ಸಾರ್ವಕಾಲಿಕ ಸಮಾಜ ಸುಧಾರಕ.
ಮಹಾವೀರ ಜೈನ ಧರ್ಮದ 24 ನೇ ತೀರ್ಥಂಕರ. ವೈಶಾಲಿಯ ಲಿಚ್ಚವಿ ವಂಶದ ರಾಜಕುಮಾರಿ ತ್ರಿಶೂಲದೇವಿ ಹಾಗೂ ಕ್ಷತ್ರಿಯ ಜ್ಞಾತ್ರಿಕ ಪಂಗಡದ ಮುಖ್ಯಸ್ಥ ಸಿದ್ದಾರ್ಥ ದಂಪತಿಗಳ ಮಗನಾಗಿ ಕ್ರಿಸ್ತಪೂರ್ವ 540 ರಲ್ಲಿ ವೈಶಾಲಿಯ ಉಪನಗರವಾದ ‘ಕುಂದ’ ಗ್ರಾಮದಲ್ಲಿ ಜನಿಸಿದರು.ಮಹಾವೀರ ಪ್ರಾರಂಭದ ದಿನಗಳಲ್ಲಿ ಐಷಾರಾಮದ ಜೀವನವನ್ನು ಸಾಗಿಸುತ್ತಿದ್ದನು. ಯೌವನಕ್ಕೆ ಬಂದ ಮೇಲೆ ‘ಯಶೋಧರ’ ಎಂಬ ಯುವತಿಯೊಂದಿಗೆ ವಿವಾಹವಾದರು. ಕೆಲ ಕಾಲ ಸಾಂಸಾರಿಕ ಜೀವನವನ್ನು ಸಾಗಿಸಿದರು. ಈ ದಂಪತಿಗಳಿಗೆ ಪ್ರಿಯದರ್ಶಿನಿ ಎಂಬ ಹೆಣ್ಣು ಮಗು ಜನಿಸಿತು. 23 ನೇ ತೀರ್ಥಂಕರನಾದ ಪಾರ್ಶ್ವನಾಥ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಮಹಾವೀರ ತನಗೆ ಮೂವತ್ತು ವರ್ಷ ತುಂಬಿದಾಗ ತನ್ನ ತಂದೆ ತಾಯಿಗಳನ್ನು ಕಳೆದುಕೂಂಡನು.ಲೌಕಿಕ ಜೀವನದ ಬಗ್ಗೆ ಜಿಗುಪ್ಸೆ ಹೊಂದಿ, ಸವಲತ್ತುಗಳನ್ನು ತ್ಯಜಿಸಿ ಸತ್ಯವನ್ನು ಹುಡುಕುವ ಉದ್ದೇಶದಿಂದ ಸನ್ಯಾಸತ್ವವನ್ನು ಸ್ವೀಕರಿಸಿ ಮನೆ ಬಿಟ್ಟು ಹೊರಟು ಹೋದನು. ಈ ಘಟನೆಯನ್ನು ವರ್ಧಮಾನ ಮಹಾವೀರನ ಜೀವನದಲ್ಲಿ ‘ಮಹಾ ಪರಿತ್ಯಾಗ’ ಎಂದು ಗುರುತಿಸಲಾಗಿದೆ.ಸುಮಾರು ಹದಿಮೂರು ತಿಂಗಳುಗಳ ಕಾಲ ಧ್ಯಾನಾಸಕ್ತನಾಗಿ ಕಾಲ ಕಳೆದ ಮಹಾವೀರ, ಸುಮಾರು ಹನ್ನೆರಡು ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿ ‘ಕುಂಡಲಾಪುರ’ ಎಂಬಲ್ಲಿ ಮಹಾ ಜ್ಞಾನವನ್ನು ಪಡೆದನು ಅಂದಿನಿಂದ ಮಹಾವೀರ ‘ಕೇವಲಿನ್’ ಅಥವಾ ‘ಜೀನ’ ಎಂದು ಕರೆಯಲ್ಪಟ್ಟು,ಮಹಾಜ್ಞಾನಿ ತನ್ನನ್ನು ತಾನು ಗೆದ್ದವನು ಎಂಬ ಹೆಸರು ಪಡೆದುಕೊಂಡನು. ನಂತರ ತಾನು ಸಂಪಾದಿಸಿದ ಜ್ಞಾನವನ್ನು ಜನರಲ್ಲಿ ಹಂಚಿಕೊಳ್ಳಲು ಆರಂಭಿಸಿದನು. ಮಹಾವೀರನ ವಿಚಾರಗಳಿಂದ ಪ್ರಭಾವಿತರಾಗಿ ಸಹಸ್ರಾರು ಸಂಖ್ಯೆಯ ಜನರು ಅವರ ಅನುಯಾಯಿಗಳಾದರು. ಬಿಂಬಸಾರ, ಅಜಾತ ಶತ್ರು ಮೊದಲಾದ ಅರಸರು ಮಹಾವೀರನ ತತ್ವ ವಿಚಾರಗಳನ್ನು ಅಳವಡಿಸಿಕೊಂಡು ಅವನ ತತ್ವ ಪ್ರಚಾರಕ್ಕೆ ಪ್ರೋತ್ಸಾಹ ನೀಡಿದರು. ಗೌತಮ, ಇಂದ್ರ ಭೂತಿ, ಜಂಬೂಸ್ವಾಮಿ, ಭದ್ರಬಾಹು ಮೊದಲಾದವರು ಮಹಾವೀರನ ಅನುಯಾಯಿಗಳಾಗಿ ಮಹಾವೀರನ ತತ್ವಗಳನ್ನು ದೇಶದೆಲ್ಲೆಡೆ ಪ್ರಚಾರ ಮಾಡಿದರು. ಮಹಾವೀರ ತನ್ನ ಇಪ್ಪತ್ತೆರಡನೇ ವಯಸ್ಸಿನಲ್ಲಿ ರಾಜಗೃಹದ ಬಳಿ ಇರುವ ‘ಪಾವಪುರಿ’ ಎಂಬಲ್ಲಿ ನಿರ್ವಾಣ ಹೊಂದಿದ್ದರು. ಅವರ ತಾತ್ವಿಕ ವಿಚಾರಗಳನ್ನು ಒಳಗೊಂಡ ಪಂಥ ‘ಜೈನಧರ್ಮ’ವೆಂದು ಪ್ರಸಿದ್ಧಿ ಪಡೆಯಿತು.

  ಮಹಾವೀರನು ಅಹಿಂಸಾ  ತತ್ವಕ್ಕೆ ಮಹತ್ವ ಕೊಟ್ಟನು. ಜೀವಿಗಳ ವಿಷಯದಲ್ಲಿ ದಯೆ, ಕರುಣೆ ಹಾಗೂ ಅನುಕಂಪವನ್ನು ತೋರಿಸುವಂತೆ ಕರೆ ನೀಡಿದರು. ಸತ್ಯವನ್ನು ನುಡಿಯುವುದು, ಶ್ರಮವಿಲ್ಲದ ಪ್ರತಿಫಲವನ್ನು ತಿರಸ್ಕರಿಸುವುದು' ಸಂಪತ್ತನ್ನು ಅತಿಯಾಗಿ ಸ್ವೀಕರಿಸದಿರುವುದು, ಬ್ರಹ್ಮಚರ್ಯವನ್ನು ಆಚರಿಸುವುದು ಮೊದಲಾದ ತತ್ವಗಳನ್ನು ಬೋಧಿಸಿದನು. ಕರ್ಮ ಸಿದ್ಧಾಂತವನ್ನು ಪ್ರತಿಪಾದಿಸಿದರು. ಪ್ರತಿಯೊಬ್ಬ ಮನುಷ್ಯನು ವಿರಕ್ತ ನಾಗಿ ಅತ್ಯುನ್ನತ ಜ್ಞಾನವನ್ನು ಪಡೆದು ಕರ್ಮದಿಂದ ಬಿಡುಗಡೆಗೊಂಡು ನಿರ್ವಾಣ  ಅಥವಾ ಮುಕ್ತಿಯನ್ನು , ಮೋಕ್ಷವನ್ನು ಗಳಿಸಬಹುದು ಎಂದು ತಿಳಿಸಿಕೊಟ್ಟು, ನಿರ್ವಾಣದ  ಹಂತವನ್ನು ತಲುಪಬೇಕಾದರೆ ಪ್ರಾಪಂಚಿಕ ಸುಖಭೋಗಗಳನ್ನು ತ್ಯಜಿಸಬೇಕು, ಸನ್ಯಾಸತ್ವವನ್ನು ಸ್ವೀಕರಿಸಿ ಧ್ಯಾನಾಸಕ್ತ ನಾಗಬೇಕು, ಅದರ ಜೊತೆಗೆ 'ಸಮ್ಯಕ್ ದರ್ಶನ' , 'ಸಮ್ಯಕ್ ಜ್ಞಾನ', 'ಸಮ್ಯಕ್ ಚಾರಿತ್ರ್ಯ' ಇವುಗಳನ್ನು ಅನುಸರಿಸುವುದರ ಮೂಲಕ ಹಾಗೂ ಸಲ್ಲೇಖನ ವ್ರತವನ್ನು ಆಚರಿಸಿ ನಿರ್ವಾಣ ಹೊಂದಬಹುದು ಎಂದು ತಿಳಿಸಿದರು. 

 ಮಹಾವೀರ ದೇವರ ಅಸ್ತಿತ್ವವನ್ನು ಹಾಗೂ ವಿಶ್ವವು ದೇವರ ಸೃಷ್ಟಿ ಎಂಬುದನ್ನು ಅಲ್ಲಗೆಳೆದರು.  ವೇದಗಳಲ್ಲಿ ಅಡಕವಾಗಿದ್ದ ಸಿದ್ಧಾಂತಗಳನ್ನು ಬ್ರಾಹ್ಮಣರ ಯಜ್ಞ - ಯಾಗಗಳನ್ನು ಖಂಡಿಸಿದರು. ಕುಡಿತ ಹಾಗೂ ಜೂಜಾಟವನ್ನು ನಿಷೇಧಿಸಿದರು.ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆ ಪುರುಷರಂತೆ ಸ್ತ್ರೀಯೂ ಕೂಡಾ ಎಲ್ಲ ದೃಷ್ಟಿಯಲ್ಲೂ ಶಕ್ತರು ಎಂಬುದನ್ನು ಸಾರಿದರು .

ಜೈನ ಧರ್ಮದ ಪವಿತ್ರ ಗ್ರಂಥಗಳನ್ನು ಆಗಮಗಳು ಎಂದು ಕರೆಯಲಾಗುತ್ತದೆ. ಜೈನ ಧರ್ಮದಲ್ಲಿ ಮಹಾವೀರನ ಅನುಯಾಯಿಗಳನ್ನು ‘ದಿಗಂಬರರು’ ಪಾರ್ಶ್ವನಾಥನ ಅನುಯಾಯಿಗಳನ್ನು ‘ಶ್ವೇತಾಂಬರರು’ ಎಂದು ಕರೆಯಲಾಗುತ್ತದೆ. ಜೈನಧರ್ಮದಲ್ಲಿ ಭಿನ್ನತೆಯನ್ನು ಹೋಗಲಾಡಿಸಲು ಹಾಗೂ ಜೈನ ಧರ್ಮದ ವಿಚಾರಗಳನ್ನು ಪುಸ್ತಕ ರೂಪದಲ್ಲಿ ತರುವ ಉದ್ದೇಶದಿಂದ ಪಾಟಲಿ ಪುತ್ರ ಹಾಗೂ ವಲ್ಲಭಿ ಎಂಬಲ್ಲಿ ಸಮ್ಮೇಳನಗಳನ್ನು ಏರ್ಪಡಿಸಲಾಗಿತ್ತು .
ಒಟ್ಟಾರೆಯಾಗಿ ಅಹಿಂಸಾ ಸತ್ವ ಬೋಧಿಸುವ ಮೂಲಕ ಜೀವಿಗಳ ವಿಷಯದಲ್ಲಿ ದಯೆ ಕರುಣೆ ಅನುಕಂಪವನ್ನು ತೋರ್ಪಡಿಸುವಂತೆ ಮನುಷ್ಯಜೀವಿಯನ್ನು ಸಿದ್ಧಗೊಳಿಸಿದ ಮಹಾವೀರ ಹಿಂದೂ ಧರ್ಮದಲ್ಲಿನ ಅಶುದ್ಧ ವಿಚಾರಗಳ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿ ಮುಕ್ತಿ ಪಡೆಯಲು ಸರಳ ಮಾರ್ಗಗಳನ್ನು ಬೋಧಿಸಿದ ಮಹಾನ್ ವ್ಯಕ್ತಿ.
ಸಾಮಾಜಿಕ ವ್ಯವಸ್ಥೆ ಮತ್ತು ಧಾರ್ಮಿಕ ಆಚರಣೆಗಳು ಅಂಧತ್ವದಿಂದ ದೂರ ಸರಿದು ಭಾರತೀಯ ಸಂಸ್ಕೃತಿ ಉತ್ಕೃಷ್ಟತೆ ಪಡೆಯಲು ಕಾರಣಕರ್ತರಾದ ಭಗವಾನ್ ಮಹಾವೀರರ ತತ್ವಗಳು ಸದಾ ಕಾಲಕ್ಕೂ ಅನುಕರಣೀಯ ಹಾಗೂ ಆದರ್ಶಪ್ರಾಯ.

ಯೋಗೀಶ್ ಚಕ್ಕೆರೆ

ಲೇಖನ : ಯೋಗೀಶ್ ಚಕ್ಕೆರೆ.
ಲೇಖಕರು,ಕನ್ನಡ ಅಧ್ಯಾಪಕರು.
ಚನ್ನಪಟ್ಟಣ .
ಮೊ – 9620479970

Leave a Reply

Your email address will not be published. Required fields are marked *