ಭಾರತದ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯನ್ನು ಬದಲಿಸುವುದಕ್ಕಾಗಿ ಅವಿಶ್ರಾಂತವಾಗಿ ಡಾ.ಬಿ.ಆರ್. ಅಂಬೇಡ್ಕರ್ ಹೋರಾಡಿದ್ದಾರೆ : ಡಾ.ಜಿ. ಗೋವಿಂದಯ್ಯ

ರಾಮನಗರ: ಬಾಬಾ ಸಾಹೇಬರು ನೀಡಿದ ಸಂವಿಧಾನದಿಂದ ಇಂದು ದೇಶದಲ್ಲಿ ತಳ ಸಮುದಾಯದ ಜನರು ಉನ್ನತ ಹುದ್ದೆ ಹಾಗೂ ಅಧಿಕಾರ ಹಿಡಿಯಲು ಸಾಧ್ಯವಾಗಿದೆ ಎಂದು ಸಮತಾ ಸೈನಿಕ ದಳದ ಯುವ ಘಟಕದ ರಾಜ್ಯ ಅಧ್ಯಕ್ಷ ಜಿ.ಗೋವಿಂದಯ್ಯ ಅಭಿಪ್ರಾಯಪಟ್ಟರು.

ನಗರದ ಐಜೂರು ವೃತ್ತದಲ್ಲಿ ಸಮತಾ ಸೈನಿಕ ದಳದ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್‌ ಶ್ರೇಷ್ಠ ವಿದ್ವಾಂಸರಾಗಿದ್ದರು. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ತತ್ವಶಾಸ್ತ್ರ, ಇತಿಹಾಸ, ರಾಜ್ಯ, ಹಾಗೂ ಕಾನೂನುಗಳ ಆಳವಗಿ ಅಧ್ಯಯನ ಮಾಡಿದ್ದರು ಎಂದು ಹೇಳಿದರು. ತಮ್ಮ ವೈಚಾರಿಕ ನಿಲುವುಗಳನ್ನು ಜೀವನದುದ್ದಕ್ಕೂ ಬದಲಿಸದೇ ಭಾರತದ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯನ್ನು ಬದಲಿಸುವುದಕ್ಕಾಗಿ ಅವಿಶ್ರಾಂತವಾಗಿ ಹೋರಾಡಿದ್ದಾರೆ ಎಂದು ಬಣ್ಣಿಸಿದರು.

ಯಾವ ಸಮಾಜವನ್ನು ಶಿಕ್ಷಣದಿಂದ ವಂಚಿಸಲಾಗಿತ್ತೋ ಆ ಸಮಾಜದ ವ್ಯಕ್ತಿಯನ್ನು ಉನ್ನತ ಶಿಕ್ಷಣವನ್ನು ಪಡೆದು, ಭಾರತದಲ್ಲೇ ಅತಿ ಹೆಚ್ಚು ಪದವಿಗಳನ್ನು ಪಡೆದ ವ್ಯಕ್ತಿ ಎನಿಸಿಕೊಂಡಿದ್ದಾರೆ. ಸಂವಿಧಾನಕ್ಕೆ ಮೊದಲು ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ಇರಲಿಲ್ಲ. ಅಂಬೇಡ್ಕರ್ ಸಮಾಜದಲ್ಲಿನ ಎಲ್ಲಾ ಶ್ರೇಣೀಕೃತ ವ್ಯವಸ್ಥೆಯನ್ನು ತೊಡೆದು ಹಾಕುವಲ್ಲಿ ಯಶಸ್ವಿಯಾದರು ಎಂದು ಹೇಳಿದರು.

ಜಿಲ್ಲಾ ದಲಿತಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ ಮಾತನಾಡಿ, ಭಾರತದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಸ್ಥಾನವನ್ನು ಪಡೆದುಕೊಂಡಿದೆ. ಬಾಬಾ ಸಾಹೇಬರ ಶ್ರಮದಿಂದಾಗಿ ಇಂದು ಸಮಾಜದಲ್ಲಿ ಜಾತಿ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಇತ್ತೀಚಿನ ಬೆಳವಣಿಗೆಗಳು ದೇಶವನ್ನು ಮತ್ತೆ ಕೋಮುವಾದದ ಕಡೆಗೆ ಕರೆದುಕೊಂಡು ಹೋಗುತ್ತಿದೆ. ಜನತೆ ಪ್ರಜ್ಞಾವಂತರಾಗಿದ್ದಾರೆ. ಅಂಬೇಡ್ಕರ್ ಅವರ ವಿಚಾರಧಾರೆಗೆ ಕಡೆಗೆ ಸೆಳೆಯುತ್ತಿರುವ ಮೇಲ್ವರ್ಗದವರು ಸಹ ಸಮಾನತೆಯ ಕುರಿತು ಮಾತನಾಡುತ್ತಿದ್ದಾರೆ. ಶಿಕ್ಷಣ ಎಲ್ಲರನ್ನು ಒಗ್ಗೂಡಿಸುತ್ತದೆ ಎಂದು ಹೇಳಿದರು.

ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮುಖಂಡರಾದ ಶಿವಶಂಕರ್, ವೆಂಕಟೇಶ್, ಹರೀಶ್, ಹರೀಶ್ ಬಾಲು, ಚಲುವರಾಜು, ಬನಶಂಕರಿ ನಾಗು ಇದ್ದರು.

Leave a Reply

Your email address will not be published. Required fields are marked *