ಮಣ್ಣಿಗೆ ಬಣ್ಣ ಕಟ್ಟಿದ ರಸಗೊಬ್ಬರ ಮಾರಾಟ!

ಚನ್ನಪಟ್ಟಣ: ‘ರಸಗೊಬ್ಬರ ಮಳಿಗೆಯೊಂದರಲ್ಲಿ ತಾವು ಖರೀದಿಸಿದ ಡಿಎಪಿ ರಸಗೊಬ್ಬರವು ಕಳಪೆಯಾಗಿದ್ದು, ಮಣ್ಣಿಗೆ ಬಣ್ಣ ಕಟ್ಟಿ ರಸಗೊಬ್ಬರ ಎಂದು ಮಾರಾಟ ಮಾಡಲಾಗಿದೆ’ ಎಂದು ತಾಲ್ಲೂಕಿನ ಬೇವೂರು ಗ್ರಾಮದ ರೈತ ಮಹೇಶ್ ಆರೋಪಿಸಿದ್ದಾರೆ.

‘ತಾಲ್ಲೂಕಿನ ಕುಂಬಾರಕಟ್ಟೆ ಬಳಿಯ ಮಳಿಗೆಯೊಂದರಿಂದ ಡಿಎಪಿ ರಸಗೊಬ್ಬರವನ್ನು ಖರೀದಿ ಮಾಡಿ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಜೋಳದ ಬೆಳೆಗೆ ಅದನ್ನು ಹಾಕಿದ್ದೆ. ಆದರೆ ಬೆಳೆಯ ಬೆಳವಣಿಗೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಅನುಮಾನಗೊಂಡು ಚೀಲದಲ್ಲಿ ಉಳಿದಿದ್ದ ಡಿಎಪಿ ರಸಗೊಬ್ಬರವನ್ನು ನೀರಿನಲ್ಲಿ ಮಿಶ್ರಣ ಮಾಡಿ ಪರೀಕ್ಷಿಸಿದಾಗ ಅದು ಮಣ್ಣು ಎಂದು ತಿಳಿಯಿತು’ ಎಂದಿದ್ದಾರೆ.

ಈ ಬಗ್ಗೆ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಅವರು, ಮಣ್ಣಿಗೆ ಬಣ್ಣ ಕಟ್ಟಿ ರಸಗೊಬ್ಬರ ಎಂದು ಮಾರಾಟ ಮಾಡಿ ರೈತರ ಕಣ್ಣಿಗೆ ಮಣ್ಣೆರಚಲಾಗುತ್ತಿದೆ. ರೈತರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದ್ದಾರೆ.

‘50 ಕೆ.ಜಿ. ಡಿಎಪಿ ರಸಗೊಬ್ಬರ ಚೀಲಕ್ಕೆ ₹1,300 ನೀಡಿ, ಸರದಿಯಲ್ಲಿ ನಿಂತು ಖರೀದಿಸಿದ್ದೆ. ಆದರೆ ಇದರಿಂದ ನನಗೆ ಹಣ ಹಾಗೂ ಸಮಯ ವ್ಯರ್ಥವಾಯಿತೆ ವಿನಾ ಯಾವುದೇ ಪ್ರಯೋಜನವಾಗಲಿಲ್ಲ. ನನ್ನಂತೆಯೆ ತಾಲ್ಲೂಕಿನ ಹಲವಾರು ರೈತರು ಮೋಸ ಹೋಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಕ್ರಮದ ಭರವಸೆ: ಈ ಬಗ್ಗೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಬೊಮ್ಮೇಶ್ ಪ್ರತಿಕ್ರಿಯೆ ನೀಡಿದ್ದು, ‘ರಸಗೊಬ್ಬರದಲ್ಲಿ ಮಣ್ಣು ಮಿಶ್ರಣವಾಗಿರುವ ಬಗ್ಗೆ ಆರೋಪಗಳು ಬಂದಿವೆ. ರಸಗೊಬ್ಬರದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು’ ಎಂದರು.

Leave a Reply

Your email address will not be published. Required fields are marked *