ಯಾರಾದರೂ ನನಗೆ ಕಮಿಷನ್ ನೀಡಿದ್ದನ್ನು ಸಾಬೀತುಪಡಿಸಿದರೆ ರಾಜಕೀಯವನ್ನೇ ಬಿಡುತ್ತೇನೆ : ಡಿ.ಕೆ. ಶಿವಕುಮಾರ್ ಸವಾಲು
ರಾಮನಗರ: ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದ ಆರೋಪಿ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಶಿವಕುಮಾರ್, ‘ಇವತ್ತು ವಿಧಾನಸೌಧವೂ ಸೇರಿದಂತೆ ಯಾವುದೇ ಸರ್ಕಾರಿ ಕಟ್ಟಡದ ಗೋಡೆಗಳಿಗೆ ಕಿವಿ ಕೊಟ್ಟರೂ ಕಾಸು.. ಕಾಸು.. ಎಂಬ ಶಬ್ಧವೇ ಕೇಳುತ್ತಿದೆ. ಸರ್ಕಾರದಲ್ಲಿ ಅಷ್ಟರಮಟ್ಟಿಗೆ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ’ ಎಂದು ಟೀಕಿಸಿದರು.
‘ಯಾವುದೇ ಕಾಮಗಾರಿಗೆ ನಾವು ಕಾರ್ಯಾದೇಶ ನೀಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು ಹೇಳುತ್ತಾರೆ. ಆದರೆ, ಕಾಮಗಾರಿ ನಡೆದಿರುವುದು ನಿಜ. ನಾವೇ ಬಿಲ್ ಕೊಡಿಸುತ್ತೇವೆ ಎಂದು ಸಚಿವರಾದ ಮುರುಗೇಶ ನಿರಾಣಿ, ಗೋವಿಂದ ಕಾರಜೋಳ ಭರವಸೆ ನೀಡುತ್ತಾರೆ. ಹೀಗಿದ್ದ ಮೇಲೆ ಕಾಮಗಾರಿ ನಡೆದದ್ದು, ಕಮಿಷನ್ ಕಾರಣಕ್ಕೆ ಬಿಲ್ ನೀಡದೇ ಹೋದದ್ದು ನಿಜ ಅಲ್ಲವೇ’ ಎಂದು ಪ್ರಶ್ನಿಸಿದರು.
‘ರಾಜ್ಯದಲ್ಲಿ ಇಂದು ಶೇ 40 ಕಮಿಷನ್ ಇಲ್ಲದೇ ಯಾವುದೇ ಕಾಮಗಾರಿ ನಡೆಯುವುದಿಲ್ಲ. ಕಾಂಗ್ರೆಸ್ ಸರ್ಕಾರವನ್ನು ಶೇ 10 ಕಮಿಷನ್ ಸರ್ಕಾರ ಎಂದರು. ಯಾರಾದರೂ ನನಗೆ ಕಮಿಷನ್ ನೀಡಿದ್ದನ್ನು ಸಾಬೀತುಪಡಿಸಿದರೆ ರಾಜಕೀಯವನ್ನೇ ಬಿಡುತ್ತೇನೆ’ ಎಂದು ಸವಾಲು ಹಾಕಿದರು.
ಸಂಸದ ಡಿ. ಕೆ. ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ರವಿ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಮತ್ತಿತರರು ಭಾಗವಹಿಸಿದ್ದರು.