ಕರ್ನಾಟಕ ಸರ್ಕಾರ ಆದೇಶ : ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿಯೇ ವಿವಾಹ ನೋಂದಣಿ ಮಾಡಿಕೊಳ್ಳಲು ಅವಕಾಶ
ಬೆಂಗಳೂರು : ಇನ್ನು ಮುಂದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ವಿವಾಹ ನೋಂದಣಿ ಮಾಡಿಸಬಹುದಾಗಿದೆ. ಈ ಕುರಿತು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಅಲೆಯುವುದು ತಪ್ಪಲಿದೆ.
ಕರ್ನಾಟಕ ಸರ್ಕಾರ ವಿವಾಹ ನೋಂದಣಿ ಅಧಿಕಾರವನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳಿಗೆ ವಹಿಸಿ ಆದೇಶ ಹೊರಡಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ಕುರಿತ ಆದೇಶ ಪ್ರಕಟವಾಗಿದೆ.

ಸರ್ಕಾರದ ತೀರ್ಮಾನದಿಂದಾಗಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿಯೇ ವಿವಾಹ ನೋಂದಣಿ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ಈ ಹಿಂದೆ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿರುವ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟರ್) ಕಚೇರಿಯಲ್ಲಿ ಮಾತ್ರ ವಿವಾಹ ನೋಂದಣಿ ಮಾಡಿಸಬೇಕಿತ್ತು.
ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿಯೇ ವಿವಾಹ ನೋಂದಣಿಯಾಗುವುದರಿಂದ ಜನರ ಸಮಯ ಉಳಿತಾಯವಾಗಲಿದೆ. ವಿವಾಹ ನೋಂದಣಿಗಾಗಿ ತಾಲೂಕು ಮತ್ತು ಜಿಲ್ಲಾ ಕೇಂದ್ರಕ್ಕೆ ಅಲೆದಾಟ ನಡೆಸುವುದು ತಪ್ಪಿದೆ.
ಕೆಲವು ದಿನಗಳ ಹಿಂದೆ ಸರ್ಕಾರ ಜನನ-ಮರಣ ನೋಂದಣಿ ಮಾಡುವ ಅಧಿಕಾರವನ್ನು ಪಿಡಿಒಗಳಿಗೆ ನೀಡಿತ್ತು. ಈಗ ವಿವಾಹ ನೋಂದಣಿ ಅಧಿಕಾರವನ್ನು ಅವರಿಗೆ ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಪಿಡಿಒ ನೇಮಕಗೊಂಡಿರುತ್ತಾರೆ.
ಪಿಡಿಒ ಸರ್ಕಾರದಿಂದ ನೇಮಕಗೊಂಡು ಪೂರ್ಣಾವಧಿ ನೌಕರರು. ಇವರು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳಾಗಿರುತ್ತಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರದ ಯೋಜನೆಗಳನ್ನು ನಿರ್ವಹಣೆ ಮಾಡುವ ಹೊಣೆ ಇವರದ್ದು. ವಿವಿಧ ಯೋಜನೆಗಳ ಮೂಲಕ ಗ್ರಾಮ ಪಂಚಾಯಿತಿಗೆ ಬರುವ ಅನುದಾನದ ಲೆಕ್ಕವನ್ನು ಪಿಡಿಒ ನಿರ್ವಹಣೆ ಮಾಡುತ್ತಾರೆ. ಪಂಚಾಯಿತಿ ಮಟ್ಟದಲ್ಲಿ ವಿಶೇಷ ಸಭೆ, ಸಾಮಾನ್ಯ ಸಭೆ ನಡೆಸುವುದು, ನಿರ್ಣಯ ಕೈಗೊಳ್ಳುವುದು ಸಹ ಪಿಡಿಒ ಕೆಲಸವಾಗಿದೆ.