30–40 ಸ್ಥಾನ ಗೆಲ್ಲುವುದು ದೊಡ್ಡದೇನೂ ಅಲ್ಲ. ನಾವು ಸುಮ್ಮನೆ ಇದ್ದರೂ ಜನರು ನಮಗೆ ಮತ ಹಾಕಿ ಗೆಲ್ಲಿಸುತ್ತಾರೆ : ಎಚ್.ಡಿ. ಕುಮಾರಸ್ವಾಮಿ
ಕಾಂಗ್ರೆಸ್‌ಗೆ ಹೋರಾಟ ಮಾಡಲು ಯಾವುದೇ ವಿಷಯಗಳಿಲ್ಲ. ನನ್ನ ಬಗ್ಗೆ ಯಾರಾದರೂ ಭ್ರಷ್ಟಾಚಾರದ ಸಾಕ್ಷ್ಯ ತೋರಿಸಿದರೆ ರಾಜಕೀಯ ನಿವೃತ್ತಿ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಇದು ಎಂಟನೇ ಅದ್ಭುತವೇ ಸರಿ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕಾಂಗ್ರೆಸ್‌ಗೆ ಯಾವ ನೈತಿಕತೆ ಇದೆ? ನಮ್ಮ ನಿಲುವುಗಳ ಬಗ್ಗೆ ಕೆಲವರು ಅನಗತ್ಯ ಚರ್ಚೆ ಮಾಡುತ್ತಿದ್ದಾರೆ. ಇಬ್ರಾಹಿಂ ಅವರನ್ನು ಪಕ್ಷಕ್ಕೆ ಕರೆ ತಂದಿರುವುದು ಒಂದು ವರ್ಗದ ಓಲೈಕೆಯ ಕಸರತ್ತು ಅಷ್ಟೇ ಎಂದು ಆರೋಪಿಸುತ್ತಿದ್ದಾರೆ.
- ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ‘ನಾವು ಅಧಿಕಾರಕ್ಕಾಗಿ ಹಪಾಹಪಿಸುತ್ತಿಲ್ಲ. ನಮ್ಮ ಗುರಿ ಏನಿದ್ದರೂ 123 ಮಿಷನ್. ಪಕ್ಷದ ನಾಯಕರು ಚಳಿ ಬಿಟ್ಟು ಜನರ ಬಳಿಗೆ ಹೋಗಿ ಕೆಲಸ ಮಾಡಬೇಕಿದೆ. ಆಗ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ. ಎಲ್ಲ ಸಮಾಜವನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಸಿ.ಎಂ. ಇಬ್ರಾಹಿಂ ಅವರ ಮೇಲಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಜೆಡಿಎಸ್ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಸಿ.ಎಂ. ಇಬ್ರಾಹಿಂ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘30–40 ಸ್ಥಾನ ಗೆಲ್ಲುವುದು ದೊಡ್ಡದೇನೂ ಅಲ್ಲ. ನಾವು ಸುಮ್ಮನೆ ಇದ್ದರೂ ಜನರು ನಮಗೆ ಮತ ಹಾಕಿ ಗೆಲ್ಲಿಸುತ್ತಾರೆ‘ ಎಂದರು.
ಎರಡೂವರೆ ವರ್ಷಗಳ ಕಾಲ ಎಚ್.ಕೆ. ಕುಮಾರಸ್ವಾಮಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸಂಕಷ್ಟ ಕಾಲದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಮುನ್ನಡೆಸಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಿದ್ದಾರೆ. ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದಾರೆ. ಇಬ್ರಾಹಿಂ ಮತ್ತೆ ತವರು ಪಕ್ಷಕ್ಕೆ ಮರಳಿದ್ದಾರೆ‘ ಎಂದರು.
‘ಜನತಾ ಜಲಧಾರೆ ಹೆಸರಿನಲ್ಲಿ ಯಶಸ್ವಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದೇವೆ. ಮೇ 8 ರವರೆಗೆ ಜನತಾ ಜಲಧಾರೆ ಯಾತ್ರೆ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಬಿಜೆಪಿ ಕಾರ್ಯಕಾರಿಣಿಯನ್ನು ಹಮ್ಮಿಕೊಂಡಿದೆ. ಕಾಂಗ್ರೆಸ್ ಪರ್ಸಂಟೇಜ್ ಪ್ರಕರಣದೊಂದಿಗೆ ಬೀದಿಗೆ ಇಳಿದಿದೆ. ಈಶ್ವರಪ್ಪ ಅವರನ್ನು ಬಂಧಿಸಬೇಕೆಂದು ಒತ್ತಾಯಿಸುತ್ತಿದೆ. ಜೆಡಿಎಸ್ ರಾಜ್ಯದಲ್ಲಿ ಶಾಂತಿಯ ತೋಟವನ್ನು ಬಯಸುತ್ತಿದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಜನರ ಕಷ್ಟ ಬಗೆಹರಿಸುವುದು ಬೇಕಿಲ್ಲ. ನೀರಾವರಿ, ನಿರುದ್ಯೋಗ ಸಮಸ್ಯೆ, ಶಾಂತಿ ಸೃಷ್ಟಿಸುವ ಯಾವುದೇ ನಿರ್ಣಯವನ್ನು ಬಿಜೆಪಿ ಕಾರ್ಯಕಾರಿಣಿಯಲ್ಲಿ ಚರ್ಚಿಸಿಲ್ಲ. ಕೇವಲ ಅಧಿಕಾರ ಹಿಡಿಯುವುದಷ್ಟೇ ಅವರ ಕಾರ್ಯಸೂಚಿ’ ಎಂದರು.
ರಾಷ್ಟ್ರೀಯ ಪಕ್ಷಗಳು ಹದಿನೈದು ವರ್ಷಗಳ ಕಾಲ ರಕ್ತದ ಓಕುಳಿ ನಡೆಸುತ್ತಿದ್ದರು. ದೇವೇಗೌಡರು ಹುಬ್ಬಳ್ಳಿಯಲ್ಲಿ ಶಾಂತಿ ಮೂಡುವಂತೆ ಮಾಡಿದ್ದರು. ಯಾರೋ ಒಬ್ಬ ಯುವಕ ಪೋಸ್ಟ್ ಮಾಡಿದ್ದನ್ನು ತಿಳಿಗೇಡಿಗಳು ಮತ್ತೆ ಪೋಸ್ಟ್ ಮಾಡಿ ಪ್ರೇರೇಪಿಸುತ್ತಾರೆ. ಇದಕ್ಕೆ ಮುಸ್ಲಿಂ ಸಮುದಾಯ ಬಲಿ ಆಗಬಾರದು. ಕಲ್ಲು ತೂರುವ, ಬೆಂಕಿ ಹಚ್ಚುವುದರಿಂದ ಏನೂ ಸಾಧಿಸಲಾಗದು. ಡಿಜೆ ಹಳ್ಳಿ ಘಟನೆಯಲ್ಲೂ ಇದೇ ರೀತಿ ಆಗಿತ್ತು. ಯಾವುದೋ ಒಂದು ಪೋಸ್ಟ್‌ನಿಂದ ಬೆಂಕಿ ಹಚ್ಚಲಾಗಿತ್ತು. ಮನೆಗಳು ನಾಶವಾಗಿದ್ದವು. ಅದೇ ರೀತಿ ಹುಬ್ಬಳ್ಳಿಯಲ್ಲೂ ಆಗಿದೆ. ಈ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಎರಡೂ ಪಕ್ಷಗಳು ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಇದನ್ನೆಲ್ಲ ಮಾಡುತ್ತಿವೆ. ಕಾಂಗ್ರೆಸ್ಸಿನ ಚಿತಾವಣೆಗೆ ಮುಸ್ಲಿಂರು ಬಲಿ ಆಗಬಾರದು‘ ಎಂದರು.
ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿ ಸಿ.ಎಂ. ಇಬ್ರಾಹಿಂ, ‘ಜೆಡಿಎಸ್ ಒಂದು ಪಕ್ಷವಲ್ಲ ಕುಟುಂಬ ಇದ್ದಂತೆ. ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ. ಮೇ 4ರ ಬಳಿಕ ನಮ್ಮ ಕೆಲಸ ಆರಂಭವಾದರೆ ವಿಧಾನಸಭೆ ಚುನಾವಣೆ ಬಳಿಕ ನಿಲ್ಲಲಿದೆ. ಬಸವನಬಾಗೇವಾಡಿಯಲ್ಲಿ ಮೊದಲ ಸಭೆ ನಡೆಸುತ್ತೇವೆ. ನಾನು ಇದೂವರೆಗೂ ಹೇಳಿರುವುದು ಒಂದೂ ಸುಳ್ಳಾಗಿಲ್ಲ’ ಎಂದರು.
‘ದೇವೇಗೌಡರು ಪ್ರಧಾನಿ ಆಗಿದ್ದಾಗ ಕಾಂಗ್ರೆಸ್ ಬೆಂಬಲ ವಾಪಸ್ ತೆಗೆದುಕೊಂಡಿತ್ತು. ಆಗ ನಾವು ಬೆಂಬಲ ನೀಡುತ್ತೇವೆ ಗೌಡರಿಗೆ ಹೇಳಿ ಎಂದು ವಾಜಪೇಯಿ ನನಗೆ ಹೇಳಿದ್ದರು. ಆದರೆ, ದೇವೇಗೌಡರು ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಪ್ರಧಾನಿ ಸ್ಥಾನವನ್ನೇ ಬಿಟ್ಟರು. ದೇವೇಗೌಡರು ಎಲ್ಲಾ ಜನಾಂಗವನ್ನು ಸಮಾನವಾಗಿ ನೋಡಿದ್ದರು. ಹುಬ್ಬಳ್ಳಿಯ ವಿವಾದವನ್ನ ಬಗೆಹರಿಸಿ ಶಾಂತಿ ಮೂಡಿಸಿದ್ದರು‘ ಎಂದರು
‘ಪಕ್ಷದಿಂದ ಒಬ್ಬರನ್ನು ಕರೆದುಕೊಂಡು ಹೋದರೆ ಹತ್ತು ಜನ ಬರುತ್ತಾರೆ. ಶಕ್ತಿಯುತವಾಗಿ ಓಡಾಡುವವರು ಪಕ್ಷಕ್ಕೆ ಬೇಕಿದೆ‘ ಎಂದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಸಂಸದೀಯ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡ ಹಾಲಿ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ‘ನಮ್ಮ ಪಕ್ಷದಲ್ಲಿ ನೂತನ ಪರ್ವ ಆರಂಭವಾಗಿದೆ. ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಸರ್ವೇ ಸಾಮಾನ್ಯ. ಅದೇ ರೀತಿ ನಮ್ಮ ಪಕ್ಷದಲ್ಲೂ ಬದಲಾವಣೆಯಾಗಿದೆ. ಯಾರಿಗೆ ಕೃತಜ್ಞತೆ ಇದೆಯೋ ಅವರು ಭಾವುಕರಾಗುತ್ತಾರೆ. ನಾನು, ಕುಮಾರಣ್ಣ ಭಾವನಾ ಜೀವಿಗಳು. ಮಾಧ್ಯಮಗಳು ಇದನ್ನು ತಪ್ಪಾಗಿ ಅರ್ಥೈಸಬಾರದು. ಅತ್ಯಂತ ಸಂತೋಷದಿಂದ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದೇನೆ’ ಎಂದು ಭಾವುಕರಾದರು.
‘ನಾನಾಗಿಯೇ ಪಕ್ಷದಲ್ಲಿ ಏನನ್ನೂ ಕೇಳಿಲ್ಲ. ಪಕ್ಷ ಎಲ್ಲವನ್ನೂ ಕೊಟ್ಟಿದೆ. ನನ್ನನ್ನು ಗುರುತಿಸಿ ಈ ಮಟ್ಟಕ್ಕೆ ಬೆಳೆಸಿದೆ. ಎಲ್ಲಾ ಕಾರ್ಯಕ್ರಮಗಳಿಗೂ ಕುಮಾರಸ್ವಾಮಿ ಒಬ್ಬರೇ ಓಡಾಡಬೇಕಾದ ಪರಿಸ್ಥಿತಿ ಇದೆ. ಪಕ್ಷ ನಮ್ಮದು, ಅಧಿಕಾರ ನಮ್ಮದಲ್ಲ. ನಮ್ಮ ಪಕ್ಷದಲ್ಲೂ ಅಹಿಂದ ಇದೆ. ಆದರೆ, ಅಗ್ಗದ ಪ್ರಚಾರಕ್ಕೆ ಬೇಗ ಬಲಿಯಾಗುತ್ತೇವೆ. ಅದೇ ನಮ್ಮ ಪಕ್ಷದ ದೌರ್ಬಲ್ಯ‘ ಎಂದರು.