ನಾಳೆ (ಏ.18) ಯಿಂದ ಏ.30 ರವರೆಗೆ ಜಿಲ್ಲೆಯಲ್ಲಿ ಆರೋಗ್ಯ ಮೇಳ : ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್
ರಾಮನಗರ : ಒಂದೇ ಸೂರಿನಡಿ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಬೇಕೆನ್ನುವ ಭಾರತ ಸರ್ಕಾರದ ಆರೋಗ್ಯ ಮಂತ್ರಾಲಯದ ನಿರ್ದೇಶದಂತೆ ರಾಮನಗರ ಜಿಲ್ಲೆಯಲ್ಲಿ ಏ. 18 ರಿಂದ 30 ರವರೆಗೆ ಆರೋಗ್ಯ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಹಾಗೂ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಮೇಳ ಏರ್ಪಡಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಸರಿಯಾದ ಸೌಲಭ್ಯ ಕಲ್ಪಿಸಿಕೊಡುವ ಹಿನ್ನೆಲೆಯಲ್ಲಿ ಏ.18 ರಿಂದ 30ರವರೆಗೆ ಜಿಲ್ಲೆಯಲ್ಲಿ ತಾಲ್ಲೂಕು ಮಟ್ಟದ ಆರೋಗ್ಯ ಮೇಳಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಉಚಿತ ಆರೋಗ್ಯ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಪಡೆದುಕೊಳ್ಳಲು ವ್ಯವಸ್ಥಿತವಾಗಿ ಆಯೋಜಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಚನ್ನಪಟ್ಟಣ ತಾಲ್ಲೂಕಿನ ಕೊಡಂಬಳ್ಳಿಯಲ್ಲಿ ಏಪ್ರಿಲ್ 23 , ಕನಕಪುರ ತಾಲ್ಲೂಕಿನ ದೊಡ್ಡ ಮರಳವಾಡಿಯಲ್ಲಿ ಏ. 24, ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ಏ. 26 ಮತ್ತು ರಾಮನಗರ ತಾಲ್ಲೂಕು ಕೈಲಾಂಚದಲ್ಲಿ ಏ. 27 ರಂದು ಒಂದು ದಿನದ ತಾಲ್ಲೂಕು ಮಟ್ಟದ ಆರೋಗ್ಯ ಮೇಳ ಕಾರ್ಯಕ್ರಮ ಆಯೋಜಿಸಲಾಗುವುದು. ಸಾರ್ವಜನಿಕರಿಗೆ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಕುರಿತಂತೆ ಮಾಹಿತಿ ಮಳಿಗೆ ತೆರೆದು ಜಾಗೃತಿ ಮೂಡಿಸಬೇಕು. ತಪಾಸಣೆ, ಸ್ಕ್ಯಾನಿಂಗ್, ಅಗತ್ಯ ಔಷಧೋಪಚಾರ ಸೂಕ್ತ ಸೌಲಭ್ಯ ಒಳಗೊಂಡಿರಬೇಕು ಎಂದು ಸಲಹೆ ನೀಡಿದರು.
ಆಯುಷ್ಮಾನ್ ಭಾರತ ಕೌಂಟರ್, ಆಯುಷ್ ಇಲಾಖೆ ಕೌಂಟರ್, ಪೋಷಣ್ ಅಭಿಯಾನ ಕೌಂಟರ್ ಹಾಗೂ ಆರೋಗ್ಯ ಇಲಾಖೆ ಸರ್ಕಾರದ ಯೋಜನೆ, ಸೌಲಭ್ಯಗಳ ಕುರಿತು ಜನರಿಗೆ ಮಾಹಿತಿ ನೀಡುವ ಆರೋಗ್ಯ ಶಿಕ್ಷಣ ಕೌಂಟರ್ ತೆರೆದು ಮಾಹಿತಿ ಮತ್ತು ಜಾಗೃತಿ ಮೂಡಿಸಬೇಕು ಹಾಗೂ ಆರೋಗ್ಯ ಮೇಳದಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೋವಿಡ್ ಲಸಿಕಾ ಕೌಂಟರ್ ಒಳಗೊಂಡಿರಬೇಕು. ತಾಲೂಕಿನ ಪ್ರತಿ ಗ್ರಾಮದ ನಾಗರೀಕರು ಈ ಆರೋಗ್ಯ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆರೋಗ್ಯ ಮೇಳದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೀಡುವುದರೊಂದಿಗೆ ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ ಹೃದಯರೋಗ, ಸಕ್ಕರೆ ಕಾಯಿಲೆ, ಮೂಳೆ, ಹಲ್ಲು, ಚರ್ಮ, ಕಣ್ಣು, ಕಿವಿ ಸೇರಿದಂತೆ ಇನ್ನಿತರ ವೈದ್ಯಕೀಯ ಸೇವಾ ಸೌಲಭ್ಯಗಳ ಕುರಿತು ಬಿತ್ತಿ ಪತ್ರಗಳ ಮೂಲಕ ಜನರಲ್ಲಿ ಆರೋಗ್ಯ ಮೇಳದ ಹಾಗೂ ಕಾಯಿಲೆಗಳ ಬಗ್ಗೆಯೂ ಜಾಗೃತಿ ಮೂಡಿಸುವ ಜೊತೆಗೆ ವ್ಯವಸ್ಥಿತ ತಪಾಸಣೆ ಕೈಗೊಳ್ಳಬೇಕು, ವೈದ್ಯಾಧಿಕಾರಿಗಳು ಒಳಗೊಂಡಂತೆ ವಿವಿಧ ಅಧಿಕಾರಿಗಳನ್ನು ಆಹ್ವಾನಿಸಿ ಆರೋಗ್ಯ ಮೇಳದ ಕುರಿತು ಗ್ರಾಮ ಮಟ್ಟದಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಆರ್.ಸಿ.ಹೆಚ್ ಅಧಿಕಾರಿ ಡಾ. ಪದ್ಮ, ಜಿಲ್ಲಾ ಶಸ್ತ್ರ ಚಿಕಿತ್ಸಕ ಎಸ್. ಶಶಿಧರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಕುಮಾರ್ , ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕಿರಣ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಗಂಗಾಧರ್ ತಾಲ್ಲೂಕು ಮಟ್ಟದ ವೈದ್ಯಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.