ನಾವು ಮೇಕೆದಾಟು ಹೋರಾಟ ಮಾಡಿದಾಗ, ಪಾದಯಾತ್ರೆ ಮಾಡಿದರೆ ನೀರು ಬರುತ್ತಾ ಎಂದು ಪ್ರಶ್ನಿಸಿದ್ದರು. ಜಲಧಾರೆ ಯಾತ್ರೆ ಮಾಡಿದರೆ ನೀರು ಬಂದುಬಿಡುತ್ತಾ? : ಸಿದ್ದರಾಮಯ್ಯ ಪ್ರಶ್ನೆ
ಮಂಡ್ಯ : ನಾವು ಮೇಕೆದಾಟು ಹೋರಾಟ ಮಾಡಿದಾಗ, ಪಾದಯಾತ್ರೆ ಮಾಡಿದರೆ ನೀರು ಬರುತ್ತಾ ಎಂದು ಪ್ರಶ್ನಿಸಿದ್ದರು. ಜಲಧಾರೆ ಯಾತ್ರೆ ಮಾಡಿದರೆ ನೀರು ಬಂದುಬಿಡುತ್ತಾ? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಈಶ್ವರಪ್ಪ ಬಂಧನಕ್ಕೆ ಒತ್ತಾಯ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಸೋಮವಾರ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಬರೀ ಕಣ್ಣೀರು ಹಾಕುತ್ತಾರೆ, ಜನ ಆಶೀರ್ವಾದ ಮಾಡಿದರೆ ಅಧಿಕಾರ ಬರುತ್ತದೆ, ಇಲ್ಲದಿದ್ದರೆ ವಿರೋಧ ಪಕ್ಷದಲ್ಲಿ ಕೂರಬೇಕು. ಇದನ್ನು ಬಿಟ್ಟು ಕಣ್ಣೀರು ಏಕೆ ಹಾಕಬೇಕು ಎಂದು ಪ್ರಶ್ನಿಸಿದರು.
ಕೊಲೆಗಡುಕ ಈಶ್ವರಪ್ಪನ ಬಂಧನಕ್ಕೆ ಒತ್ತಾಯಿಸಿ ನಾವು ಹೋರಾಟ ನಡೆಸುತ್ತಿದ್ದರೆ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ, ಅವರನ್ನು ಏಕೆ ಬಂಧಿಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಇದು ಒಬ್ಬ ಕಳ್ಳನ ಬೆಂಬಲಕ್ಕೆ ಇನ್ನೊಬ್ಬ ಕಳ್ಳ ನಿಂತಂತೆ ಆಗಿದೆ’ ಎಂದು ಲೇವಡಿ ಮಾಡಿದರು.
ಈಶ್ವರಪ್ಪ ಶೇ 40ರಷ್ಟು ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ಗುತ್ತಿಗೆದಾರ ಸಂತೋಷ್ ಪಾಟೀಲ ಡೆತ್‌ನೋಟ್‌ನಲ್ಲಿ ಆರೋಪ ಮಾಡಿದ್ದಾರೆ. ಇದು ಭ್ರಷ್ಟಾಚಾರ ಪ್ರಕರಣವಾಗಿದ್ದು ಈಶ್ವರಪ್ಪ ರಾಜೀನಾಮೆ ಕೊಟ್ಟರೆ ಸಾಲದು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ಅವರನ್ನು ಬಂಧಿಸಬೇಕು. ಅಲ್ಲಿಯವರೆಗೂ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ನಾವು ಸರ್ಕಾರದ ಭ್ರಷ್ಟಾಚಾರಗಳ ವಿರುದ್ಧ ಹೋರಾಟ ನಡೆಸುತ್ತಿದ್ದರೆ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ಬೆಂಬಲಕ್ಕೆ ನಿಂತಿದ್ದಾರೆ ಎಂದು ಆರೋಪಿಸಿದರು.
ಮಠಗಳಿಗೆ ಕೊಟ್ಟ ಅನುದಾನದಲ್ಲೂ ಪರ್ಸೆಂಟೇಜ್ ಕೇಳುತ್ತಾರೆ ಎಂದರೆ ಎಂತಹ ನಾಚಿಗೆಗೇಡಿನ ಸರ್ಕಾರವಿದು, ಈ ಕುರಿತು ಸ್ವಾಮೀಜಿಗಳೇ ಆರೋಪ ಮಾಡಿದ್ದಾರೆ. ನಾನೂ ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ ಏನು ಮಾಡುತ್ತಿದ್ದಾರೆ, ಪರ್ಸೆಂಟೇಜ್ ಕುರಿತು ಗುತ್ತಿಗೆದಾರರ ಸಂಘ ಪತ್ರ ಬರೆದು 9 ತಿಂಗಳಾದರೂ ಕ್ರಮ ಏಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಹಿರೇಮಠ ಎನ್ನುವ ಯುವಕ ಮಾಡಿರುವ ಸಂದೇಶದಿಂದ ಹುಬ್ಬಳ್ಳಿಯಲ್ಲಿ ಗಲಾಟೆ ನಡೆದಿದೆ. ನಾವು ಮಾಡುತ್ತಿರುವ ಹೋರಾಟದ ದಿಕ್ಕು ತಪ್ಪಿಸಲು ಈ ರೀತಿ ಮಾಡಿರಲೂಬಹುದು. ಆದರೆ, ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.