ಬಾಲಕೃಷ್ಣ ನಾಲ್ಕು ಬಾರಿ ಶಾಸಕರಾಗಿ ಮಾಡದ ಅಭಿವೃದ್ಧಿ ಕೆಲಸಗಳನ್ನು ಶಾಸಕ ಎ. ಮಂಜುನಾಥ್ ನಾಲ್ಕು ವರ್ಷಗಳಲ್ಲಿ ಕೂಟಗಲ್ ಹೋಬಳಿಗೆ 135 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ : ಗಂಗರತ್ನಮ್ಮ
ರಾಮನಗರ : ತಮ್ಮ ಅಧಿಕಾರಾವಧಿಯಲ್ಲಿ ಕೂಟಗಲ್ ಹೋಬಳಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಮಾಜಿ ಶಾಸಕರಾದ ಎಚ್.ಸಿ.ಬಾಲಕೃಷ್ಣ ಅವರು ಈಗ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರನ್ನುಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ವಾಮಮಾರ್ಗ ಅನುಸರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಜಾಲಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗರತ್ನಮ್ಮ ಛೇಡಿಸಿದರು.
ತಾಲ್ಲೂಕಿನ ಕೂಟಗಲ್ ಹೋಬಳಿಯ ತಾಳವಾಡಿ ಗ್ರಾಮದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ನಾಲ್ಕು ಬಾರಿ ಶಾಸಕರಾಗಿ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಹಾಲಿ ಶಾಸಕರಾದ ಎ.ಮಂಜುನಾಥ್ ಅವರು ತಮ್ಮ ಅಧಿಕಾರವಧಿಯ ನಾಲ್ಕು ವರ್ಷಗಳಲ್ಲಿ ಕೂಟಗಲ್ ಹೋಬಳಿಗೆ 135 ಕೋಟಿ ರೂಪಾಯಿ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿಸಿರುವುದನ್ನು ಸಹಿಸದೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾಪಂ ಮಾಜಿ ಅಧ್ಯಕ್ಷ ಡಿ.ಎಂ.ಮಹದೇವಯ್ಯ ಅವರು ತಮ್ಮ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಈಗ ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಇನ್ಮಿಲ್ಲದ ವಿಫಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ಜಾಲಮಂಗಲ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಎನ್. ರಾಜು ಮಾತನಾಡಿ, ಕಾಂಗ್ರೆಸ್ ಮುಖಂಡರು ಪಕ್ಷ ಬಲ ಪಡಿಸಲು ಒಂದೆ ಮನೆಯ ನಾಲ್ಕೈದು ಜನರ ಪೋಟೋ ಹಾಕಿಕೊಂಡು ಕಾಂಗ್ರೆಸ್ ಪಕ್ಷ ಬಲವಾಗುತ್ತಿದೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಜೆಡಿಎಸ್ ಪಕ್ಷವನ್ನು ಕುಟುಂಬ ರಾಜಕಾರಣಕ್ಕೆ ಹೋಲಿಸುವ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೆ ತಮ್ಮ ಸಹೋದರ ಹಾಗೂ ಡಿ.ಕೆ.ಶಿವಕುಮಾರ್ ಅವರ ಕುಟುಂಬ ರಾಜಕಾರಣ ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ಅವರನ್ನು ನಮ್ಮ ಪಕ್ಷದ ಮುಂದಿನ ಸಿಎಂ ಎಂದು ಧೈರ್ಯದಿಂದ ಹೇಳಿದರೆ ನಿಷ್ಠೆಯನ್ನು ಒಪ್ಪಿಕೊಳ್ಳುತ್ತೇವೆ.ಮುಂದಿನ ಚುನಾವಣೆಯಲ್ಲಿಯೂ ಬಾಲಕೃಷ್ಣ ಹೀನಾಯ ಸೋಲನ್ನು ಅನುಭವಿಸುತ್ತಾರೆ. ಕೂಟಗಲ್ ಹೋಬಳಿಗೆ ನಿಮ್ಮ ಅಭಿವೃದ್ಧಿ ಕೆಲಸಗಳ ಕೊಡುಗೆ ಏನು? ಎಂದು ಮೊದಲು ಜನರ ಮುಂದೆ ಘೋಷಣೆ ಮಾಡಲಿ. ಮಾಜಿ ಶಾಸಕ ಕೆ.ರಾಜು ಅವರು, ಜೆಡಿಎಸ್ ಮನೆಯ ಋಣ ಮರೆತು ಬಾಯಿಗೆ ಬಂದಂತೆ ಮಾತನಾಡುವುದನ್ನು ಮೊದಲು ನಿಲ್ಲಿಸಲಿ ಎಂದು ತಾಕೀತು ಮಾಡಿದರು.
ಯುವ ಮುಖಂಡ ಅಕ್ಕೂರು ಶಿವುಗೌಡ ಮಾತನಾಡಿ, ಮಾಜಿ ಶಾಸಕ ಬಾಲಕೃಷ್ಣ ಅವರು ಜೆಡಿಎಸ್ ಕಾರ್ಯಕರ್ತರ ಪೋಟೊ ಕದ್ದು ಬ್ಯಾನರ್ ಮಾಡಿಸುವುದನ್ನು ನಿಲ್ಲಿಸಬೇಕು. ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಅಲೆ ಸಹಿಸಿಕೊಳ್ಳಲು ಸಾಧ್ಯವಾಗದೆ, ಇಲ್ಲ ಸಲ್ಲದ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಅವರ ಅವನತಿಯನ್ನು ಅವರೇ ಮಾಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಯುವ ಮುಖಂಡ ಸಿದ್ದು ಮಾತನಾಡಿ, ಸಾಮಾಜಿಕ ಜಾಲತಾಣಗಳ ಪೋಟೊ ಕದ್ದು ರಾಜಕಾರಣ ಮಾಡುವುದನ್ನು ಬಿಡಲಿ. ನಾಲ್ಕು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿರುವ ಎಚ್.ಸಿ. ಬಾಲಕೃಷ್ಣ ಅವರು ತಮ್ಮ ವ್ಯಕ್ತಿತ್ವ ಹಾಗೂ ತಾವಿರುವ ಪಕ್ಷಕ್ಕೆ ಶೋಭೆ ತರುವ ಕೆಲಸ ಮಾಡಬೇಕು ಅದನ್ನು ಬಿಟ್ಟು ಮುಗ್ದ ಕಾರ್ಯಕರ್ತರ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸೇರ್ಪಡೆ ಕುರಿತು ಸ್ಪಷ್ಟನೆ :
ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಬಿಂಬಿಸಲಾದ ಸಿದ್ದಲಿಂಗಯ್ಯ, ಪುಟ್ಟಸ್ವಾಮಯ್ಯ, ಶಿವನಂಜಯ್ಯ, ಕೆ.ಸಿದ್ದಲಿಂಗಯ್ಯ, ಚಿಕ್ಕಸಿದ್ದಯ್ಯ, ನಾಗಶೆಟ್ಟಿ, ರವಿ, ಪುಟ್ಟರಾಮಣ್ಣ, ರೇಣುಕಯ್ಯ ತಾಳವಾಡಿ, ಶಿವಪ್ರಸಾದ್ ಇವರುಗಳು ಮಾತನಾಡಿ,ನಾವುಗಳು ಜೆಡಿಎಸ್ ಪಕ್ಷದಲ್ಲಿಯೇ ಇದ್ದೇವೆ. ಆದರೆ ನಮ್ಮ ಭಾವಚಿತ್ರಗಳನ್ನು ಬ್ಯಾನರ್ ಗಳಲ್ಲಿ ಪ್ರದರ್ಶಿಸುವ ಮೂಲಕ ನಮ್ಮನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಜಾಲಮಂಗಲ ಗ್ರಾಪಂ ಉಪಾಧ್ಯಕ್ಷೆ ಪುಟ್ಟಮಾದಮ್ಮ, ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯರಾದ ಚಂದ್ರಮ್ಮ, ದಿನೇಶ್, ವಸಂತಮ್ಮ, ವಿಶಾಲ, ಪ್ರಗತಿಪರ ಕೃಷಿಕ, ಜೆಡಿಎಸ್ ಮುಖಂಡ ಜಾಲಮಂಗಲ ಸಿ.ಕುಮಾರಸ್ವಾಮಿ,ಜಾಲಮಂಗಲ ಜೆಡಿಎಸ್ ಘಟಕದ ಅಧ್ಯಕ್ಷ ವೆಂಕಟಾಚಲಯ್ಯ, ಸ್ಥಳೀಯ ಮುಖಂಡರಾದ ಶಿವಲಿಂಗಯ್ಯ, ನಿಂಗಪ್ಪ, ತಿರುಮಲಯ್ಯ, ಭಾಗ್ಯಮ್ಮ ರಾಮಲಿಂಗಯ್ಯ, ಮೂಡ್ಲಗಿರಯ್ಯ, ಮಹದೇವಯ್ಯ, ಶಿವಣ್ಣ, ಶಿವು ಹಾಗೂ ಮತ್ತಿತರರು ಉಪಸ್ಥಿತರಿದ್ದರು.