ಡಾ. ಅವಿನಾಶ್ ಮನೆನ್ ರಾಜೇಂದ್ರನ್ ರಾಮನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿ

ರಾಮನಗರ: ಇಲ್ಲಿನ ಜಿಲ್ಲಾಧಿಕಾರಿ ಕೆ. ರಾಕೇಶ್‌ಕುಮಾರ್ ಅವರನ್ನು ಸರ್ಕಾರ ಸೋಮವಾರ ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಮತ್ತೊಬ್ಬ ಐಎಎಸ್‌ ಅಧಿಕಾರಿ ಅವಿನಾಶ್ ಮೆನನ್‌ ರಾಜೇಂದ್ರನ್ ಅವರನ್ನು ನೇಮಿಸಿದೆ.

2013ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಅವಿನಾಶ್‌ ಇದಕ್ಕೂ ಮುನ್ನ ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ರಾಯಚೂರು ಜಿ.ಪಂ. ಸಿಇಒ ಹಾಗೂ ಲೋಕಸಭೆ ಚುನಾವಣೆ ಸಂದರ್ಭ ನೆರೆಯ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಹುದ್ದೆ ಸೇರಿದಂತೆ ಹಲವು ಜವಾಬ್ದಾರಿಯನ್ನು ಅವರು ನಿರ್ವಹಿಸಿದ್ದಾರೆ. ಇದೀಗ ಹೊಸ ಜಿಲ್ಲಾಧಿಕಾರಿಯಾಗಿ ರಾಮನಗರಕ್ಕೆ ಬರಲಿದ್ದಾರೆ.

ರಾಕೇಶ್‌ಕುಮಾರ್ ಅವರನ್ನು ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಹುದ್ದೆಗೆ ನಿಯೋಜಿಸಿದೆ. 2012ರ ಐಎಎಸ್‌ ಬ್ಯಾಚ್‌ನ ಅಧಿಕಾರಿ ಆಗಿರುವ ಅವರು 2021ರ ಮಾರ್ಚ್‌ 1ರಂದು ರಾಮನಗರ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಕೇವಲ ಒಂದು ವರ್ಷ ಹಾಗೂ ಒಂದು ತಿಂಗಳ ಅವಧಿಯಲ್ಲೇ ಅವರು ಇಲ್ಲಿಂದ ನಿರ್ಗಮಿಸಲಿದ್ದಾರೆ.

ಜಿಲ್ಲೆಯಲ್ಲಿ ಅಧಿಕಾರಿಯಾಗಿ ಹಲವು ಸಿಹಿ–ಕಹಿಗಳನ್ನು ಅವರು ಕಂಡಿದ್ದಾರೆ. ಕಂದಾಯ ಇಲಾಖೆಯ ‘ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮದ ಮೂಲಕ ಅವರು ಗ್ರಾಮೀಣ ಜನರನ್ನೂ ತಲುಪುವ ಪ್ರಯತ್ನ ಮಾಡಿದ್ದರು. ಜಿಲ್ಲಾ ಆಡಳಿತದಲ್ಲಿ ಕೆಲವು ಬದಲಾವಣೆಗಳನ್ನೂ ತಂದಿದ್ದರು.

ಇದೇ ವರ್ಷ ಜನವರಿಯಲ್ಲಿ ಜಿಲ್ಲಾ ಕಚೇರಿ ಸಂಕೀರ್ಣದ ಆವರಣದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್‌ ಹಾಗೂ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎದುರೇ ಸಚಿವರು–ಸಂಸದರು ಕಿತ್ತಾಡಿಕೊಂಡಿದ್ದು, ಆ ಕಾರ್ಯಕ್ರಮದ ಆಯೋಜನೆಯ ಉಸ್ತುವಾರಿ ಹೊತ್ತಿದ್ದ ರಾಕೇಶ್‌ಕುಮಾರ್ ಮುಜುಗರ ಅನುಭವಿಸುವಂತೆ ಆಗಿತ್ತು.

Leave a Reply

Your email address will not be published. Required fields are marked *