ಕನ್ನಡ ಸಾಹಿತ್ಯ ಪರಿಷತ್ತಿನ ರಾಮನಗರ ತಾಲ್ಲೂಕು ಘಟಕ ಪ್ರಾರಂಭೋತ್ಸವ
ರಾಮನಗರ: ಇಲ್ಲಿನ ಸ್ಫೂರ್ತಿ ಭವನದಲ್ಲಿ ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಪ್ರಾರಂಭೋತ್ಸವ ಹಾಗೂ ಕಾವ್ಯಧಾರೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಸು.ಚಿ. ಗಂಗಾಧರಯ್ಯ ಮಾತನಾಡಿ ಕನ್ನಡ ನಾಡು–ನುಡಿ ಇಕ್ಕಟ್ಟಿನಲ್ಲಿದ್ದು, ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ಮಾಡಬೇಕಾಗಿದೆ. ಕವಿಗಳು ತಮ್ಮ ಕವಿತೆ ಮೂಲಕವೇ ಕನ್ನಡಿಗರಲ್ಲಿ ಜಾಗೃತಿ ಮೂಡಿಸಬೇಕಾದ ಕೆಲಸ ಮಾಡಬೇಕು. ರಾಮನಗರದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ಸಂಬಂಧ ಕನ್ನಡ ಮನಸ್ಸುಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.

ಶಾಲೆಗಳಲ್ಲಿ ಕನ್ನಡ ಕೆಲಸ ಮಾಡುವ ಹಾಗೂ ಸಮ್ಮೇಳನಗಳನ್ನು ಮಾಡುವಂತೆ ಉತ್ತೇಜಿಸುವ ಕೆಲಸ ಮಾಡಬೇಕು. ಜಿಲ್ಲೆಯಲ್ಲಿಯು ಹಲವಾರು ಸಾಹಿತಿಗಳು ಇದ್ದಾರೆ. ಹಿರಿಯ ಸಾಹಿತಿಗಳು ಹೇಳಿಕೊಟ್ಟ ಮಾರ್ಗದಲ್ಲಿಯೇ ಸಾಗಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ, ಮುಂದಿನ ಐದು ವರ್ಷದಲ್ಲಿ ಕನ್ನಡ ಭವನ ರಾಮನಗರ ಜಿಲ್ಲೆಗೆ ತರುವ ಕೆಲಸ ಮಾಡಲಾಗುತ್ತದೆ. ಜಿಲ್ಲೆಯ ಎಲ್ಲಾ ಕನ್ನಡ ಮನಸ್ಸುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾ ಪರಿಷತ್ ಅನ್ನು ರಾಜ್ಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುತ್ತದೆ ಎಂದರು.
ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಜಿಲ್ಲೆಯಲ್ಲಿ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಜಿಲ್ಲಾ ಗೌರವ ಕಾರ್ಯದರ್ಶಿ ರಾಜಶೇಖರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮೀಣ ಮಕ್ಕಳು ಹಾಗೂ ಯುವಕರಲ್ಲಿ ಉತ್ಸಾಹ ಮೂಡಿಸಬೇಕು. ಶಾಲೆಗಳಲ್ಲಿ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಮಾಡುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ದಿನೇಶ್ ಬಿಳಗುಂಬ ಮಾತನಾಡಿ, ‘ಅಧ್ಯಕ್ಷ ಹುದ್ದೆಗೆ ಮರುಆಯ್ಕೆ ಆಗಿದ್ದು, ಅದಕ್ಕೆ ಚ್ಯುತಿಬಾರದಂತೆ ಮುಂದಿನ ದಿನಗಳಲ್ಲಿ ಎಲ್ಲರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ’ ಎಂದರು.

ಕಾವ್ಯಧಾರೆಯಲ್ಲಿ ಕವಿಗಳಾದ ಜಿ.ಎಚ್. ರಾಮಯ್ಯ, ಪೂರ್ಣಚಂದ್ರ, ಮಲ್ಲೇಶ್ ಚನ್ನಮಾನಹಳ್ಳಿ, ಎಸ್. ನರಸಿಂಹಸ್ವಾಮಿ, ಡಾ.ಎಚ್.ವಿ. ಮೂರ್ತಿ, ಎಚ್.ಕೆ. ಶೈಲಾಶ್ರೀನಿವಾಸ್, ನವೀನ್ ಕೆಂಎಂಎಫ್, ಟಿ.ವಿ. ನಾರಾಯಣ್, ಎಸ್. ಮಂಜುನಾಥ್ ಜಾಲಮಂಗಲ, ಸುರೇಶ್, ಅರುಣ್ ಕವಣಾಪುರ, ಕಿರಣ್ ರಾಜ್ ತುಂಬೇನಹಳ್ಳಿ, ಚೇತನ್ ಗುನ್ನೂರು, ಡಾ. ಹೇಮಂತ್ ಗೌಡ ತಿಬ್ಬೇಗೌಡನದೊಡ್ಡಿ, ಕಿರಣ್ ಕುಮಾರ್, ಟಿ.ಎನ್. ಅನಂತ್ ನಾಗ್, ಸಂಜೀವ್ ಪೊಲೀಸ್ ಇಲಾಖೆ, ಮೇದರದೊಡ್ಡಿ ಹನುಮಂತು ಕವನಗಳನ್ನು ವಾಚಿಸಿದರು.
ಕಸಾಪ ರಾಮನಗರ ತಾಲ್ಲೂಕು ಘಟಕದ ಪ್ರಾರಂಭೋತ್ಸವ ಪ್ರಯುಕ್ತ ಕಾವ್ಯಧಾರೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ಯುವ ಹಾಗೂ ಹಿರಿಯ ಕವಿಗಳು ಕಾವ್ಯ ವಾಚಿಸಿದರು. ಪರಿಷತ್ ಪದಾಧಿಕಾರಿಗಳಾದ ಸಿ. ಪುಟ್ಟಸ್ವಾಮಿ, ತಿ.ನಾ. ಪದ್ಮನಾಭ್, ಶ್ರೀನಿವಾಸ್ ರಾಂಪುರ, ನಾರಾಯಣ್ ಉಪಸ್ಥಿತರಿದ್ದರು.