ಹಿಜಾಬ್ ಸೇರಿ ಯಾವುದೇ ಧಾರ್ಮಿಕ ವಸ್ತ್ರಕ್ಕೆ ಅವಕಾಶವಿಲ್ಲ : ದ್ವಿತೀಯ ಪಿಯುಸಿ ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ : ಬಿ.ಸಿ. ನಾಗೇಶ್
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ ಮಾಡಲಾಗಿದ್ದು ಹಿಜಾಬ್ ಸೇರಿ ಯಾವುದೇ ಧಾರ್ಮಿಕ ವಸ್ತ್ರಕ್ಕೆ ಅವಕಾಶವಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಏಪ್ರಿಲ್ 22ರಿಂದ ಮೇ 18ರವರೆಗೆ ದ್ವಿತೀಯ ಪಿಯು ಪರೀಕ್ಷೆಗಳು ನಡೆಯುತ್ತಿದ್ದು ಪರೀಕ್ಷೆಗೆ ಹಿಜಾಬ್ ಗೆ ಅವಕಾಶವಿಲ್ಲ. ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು ಎಂದು ಅವರು ಹೇಳಿದರು.
ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದ್ದು ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 3,46,936 ಬಾಲಕಿಯರು ಹಾಗೂ 3,37,319 ಬಾಲಕರು ನೊಂದಣಿ ಮಾಡಿಕೊಂಡಿದ್ದರು. ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ. ವಿಜ್ಞಾನ ವಿಭಾಗದಲ್ಲಿ 2,10,569 ವಿದ್ಯಾರ್ಥಿಗಳು, ಕಲಾ ವಿಭಾಗದಲ್ಲಿ 2,28,167, ವಾಣಿಜ್ಯ ವಿಭಾಗ 2,45,519 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.