ದೇವೇಗೌಡರ ಮೇಲೆ ಆಣೆ ಮಾಡಿ ಹೇಳಲಿ ಎನ್ನುವವರು ಇವರು ಯಾವ ಊರ ದಾಸಯ್ಯ, ಎಚ್ಚರಿಕೆಯಿಂದ ಮಾತನಾಡಲಿ : ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 50 ಸೀಟು ಗೆಲ್ಲಬಹುದು: ಎಚ್. ಡಿ. ಕುಮಾರಸ್ವಾಮಿ
ಹಾಸನ : ಇಡೀ ದೇಶದಲ್ಲಿ ಕಾಂಗ್ರೆಸ್ ನ್ನು ಜನರು ತಿರಸ್ಕಾರ ಮಾಡಿಯಾಗಿದೆ. ಕರ್ನಾಟಕದಲ್ಲಿ ಇನ್ನೂ ಕಾಂಗ್ರೆಸ್ ನ ಜೀವ ಉಳಿದುಕೊಂಡಿದೆ. ಹೀಗಿರುವಾಗ ಕೋಮುವಾದ, ಜಾತ್ಯತೀತವಾದವನ್ನು ಹೇಗೆ ನಿಲ್ಲಿಸುತ್ತಾರೆ. ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ, ಡಿ ಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಗಳಿಗೆ ಕಾಂಗ್ರೆಸ್ ಮುಖಂಡರೇ ಕಾರಣ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ, ಇಂತಹ ಮನಸ್ಥಿತಿ ಇಟ್ಟುಕೊಂಡು ಸುಳ್ಳಿನ ರಾಮಯ್ಯನಾದ ಸಿದ್ದರಾಮಯ್ಯನವರಿರುವ ಕಾಂಗ್ರೆಸ್ ಪಕ್ಷ ಜಾತ್ಯತೀತತೆಯನ್ನು ಉಳಿಸುತ್ತಾರೆಯೇ ಎಂದು ಎಚ್. ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಬುಧವಾರ ಹಾಸನದಲ್ಲಿ ಪರ್ತಕರ್ತರೊಂದಿಗೆ ಮಾತನಾಡಿದ ಅವರು, ಎಂದಿನಂತೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಟ್ವೀಟ್ ಮೂಲಕ ಅವರಿಗೆ ಕೇಳಿರುವ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಆಗ್ರಹಿಸಿದರು.
ಹಿಂದೆ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಕಲ್ಲಪ್ಪ ಹಂಡಿಭಾಗ್ ಸಿದ್ದರಾಮಯ್ಯನವರ ಆಡಳಿತದಿಂದ ಬೇಸತ್ತು ನಿಧನರಾದರು. ಅದಕ್ಕೆ ಯಾರಿಗೆ ಶಿಕ್ಷೆ ಕೊಟ್ಟರು, ಅರ್ಕಾವತಿ ಕರ್ಮಕಾಂಡದಲ್ಲಿ ನೂರಾರು ಕೋಟಿ ರೂಪಾಯಿ ತಿಂದು ತೇಗಿದರು. ದೇವೇಗೌಡರ ಮೇಲೆ ಆಣೆ ಮಾಡಿ ಹೇಳಲಿ ಎನ್ನುವವರು ಇವರು ಯಾವ ಊರ ದಾಸಯ್ಯ, ಎಚ್ಚರಿಕೆಯಿಂದ ಮಾತನಾಡಲಿ, ಪದೇ ಪದೇ ಬಿಟೀಮ್ ಎಂದು ಹೇಳುವ ಸಿದ್ದರಾಮಯ್ಯನವರಿಂದಲೇ ಇಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಮೂಲ ಕಾರಣ ಎಂದು ಆರೋಪಿಸಿದರು.
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬೀಳಲು ಮೂಲ ಕಾರಣ ಸಿದ್ದರಾಮಯ್ಯ, 150 ಸೀಟು ಗೆಲ್ಲುತ್ತೀರಿ ಎನ್ನುವವರು ಮುಂದಿನ ಚುನಾವಣೆಯಲ್ಲಿ 50-60 ಸೀಟು ಗೆಲ್ಲಬಹುದು, ಬಹುಮತ ಬರುವುದಿಲ್ಲ, ಮತ್ತೆ ಜೆಡಿಎಸ್ ಬೆಂಬಲ ನೀಡಬೇಕು ಎಂದು ಕೇಳುತ್ತಾರೆ. ಸಂಪುಟ ಪುನರ್ರಚನೆ ಮಾಡಬೇಕು ಎಂದು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅಂದಾಗ ಸ್ವತಂತ್ರ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಮೈತ್ರಿ ಕಿತ್ತೆಸೆದರು ಎಂದು ವಾಗ್ದಾಳಿ ನಡೆಸಿದರು.