ಪಠ್ಯದಲ್ಲಿ ಯಾವ ಮಾಹಿತಿ ಸರಿ ಇಲ್ಲ ಎಂದು ಪರಿಷ್ಕರಣ ಸಮಿತಿ ವರದಿ ನೀಡಿದೆಯೋ ಅದನ್ನು ಕೈಬಿಡುತ್ತೇವೆ : ಶಿಕ್ಷಣ ಸಚಿವ ಬಿ.ಸಿ. ನಾಗೇಶ್
ರಾಮನಗರ : ಪಠ್ಯದಲ್ಲಿ ಯಾವ ಮಾಹಿತಿ ಸರಿ ಇಲ್ಲ ಎಂದು ಪರಿಷ್ಕರಣ ಸಮಿತಿ ವರದಿ ನೀಡಿದೆಯೋ ಅದನ್ನು ಕೈಬಿಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ರಾಮನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಬಗೆಗಿನ ವೈಭವೀಕರಣದ ಅಂಶಗಳನ್ನಷ್ಟೇ ತೆಗೆದಿದ್ದೇವೆ. ಯಾವುದು ಸರಿಯೋ ಅದನ್ನು ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಹಿಜಾಬ್ ವಿವಾದದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಿಗೆ ಗೈರಾದ ಮಕ್ಕಳ ಕುರಿತು ಪ್ರತಿಕ್ರಿಯಿಸಿದ ಅವರು, ಪರೀಕ್ಷೆಯಲ್ಲಿ ಸಾಮಾನ್ಯ ಹೆಣ್ಣು ಮಕ್ಕಳಿಗಿಂತಲೂ ಮುಸ್ಲಿಂ ಮಕ್ಕಳ ಹಾಜರಾತಿ ಹೆಚ್ಚಿದೆ. ಹೀಗಾಗಿ ಯಾರಿಗೂ ತೊಂದರೆ ಆಗಿಲ್ಲ. ಈಗ ದ್ವಿತೀಯ ಪಿ.ಯು. ಪರೀಕ್ಷೆಗೂ ಸುತ್ತೋಲೆ ಹೊರಡಿಸಿದ್ದು, ಸಮವಸ್ತ್ರ ಧರಿಸಿಯೇ ಪರೀಕ್ಷೆ ಬರೆಯುವಂತೆ ತಿಳಿಸಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್‌ನವರಿಗೆ ಶಿಕ್ಷಣದಲ್ಲೂ ರಾಜಕೀಯ ಕಾಣುತ್ತದೆ. ಹೆಣದ ಮೇಲೂ ವೋಟ್‌ಬ್ಯಾಂಕ್ ಕಾಣುತ್ತದೆ. ಪೊಲೀಸ್ ಠಾಣೆಗೆ ಗೂಂಡಾಗಳು ಗಲಾಟೆಗೆ ಬಂದಾಗಲೂ ಅವರಿಗೆ ರಾಜಕೀಯ ಕಾಣುತ್ತದೆ. ಹೀಗಾಗಿ ಅವರಿಗೆ ಶಿಕ್ಷಣದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದರು.