ಜಿಲ್ಲೆಯ 13 ಕೇಂದ್ರಗಳಲ್ಲಿ ಪರೀಕ್ಷೆ; ಹಿಜಾಬ್ ಧರಿಸುವುದಕ್ಕಿಲ್ಲ ಅವಕಾಶ ; ನಾಳೆಯಿಂದ ದ್ವಿತೀಯ ಪಿ.ಯು. ಪರೀಕ್ಷೆ
ರಾಮನಗರ : ರಾಜ್ಯದಾದ್ಯಂತ ಏಪ್ರಿಲ್ 22ರಿಂದ ದ್ವಿತೀಯ ಪಿ.ಯು. ವಾರ್ಷಿಕ ಪರೀಕ್ಷೆಗಳು ಆರಂಭ ಆಗಲಿದ್ದು, ಜಿಲ್ಲೆಯ 13 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಹಿಜಾಬ್ ವಿವಾದ ರಾಜ್ಯದಾದ್ಯಂತ ಸದ್ದು ಮಾಡಿತ್ತು. ನ್ಯಾಯಾಲಯದ ತೀರ್ಪು ಆಧರಿಸಿ ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಜಾಬ್‌ಗೆ ನಿರ್ಬಂಧ ಹೇರಿತ್ತು. ದ್ವಿತೀಯ ಪಿ.ಯು. ಪರೀಕ್ಷೆಗೂ ಅದೇ ನಿಯಮ ಅನ್ವಯ ಆಗಲಿದೆ. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿ ಹಿಜಾಬ್ ಧರಿಸಿ ಬರುವುದನ್ನು ನಿಷೇಧಿಸಿ ಇಲಾಖೆ ಈಗಾಗಲೇ ಆದೇಶಿಸಿದೆ.
ಕಳೆದ ಎರಡು ವರ್ಷ ಕೋವಿಡ್ ಕಾರಣಕ್ಕೆ ದ್ವಿತೀಯ ಪಿ.ಯು. ಪರೀಕ್ಷೆಗಳು ಸುಗಮವಾಗಿ ನಡೆದಿರಲಿಲ್ಲ. ಹೀಗಾಗಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೊಂದಲ ಇದ್ದು, ಅದನ್ನು ನಿವಾರಿಸುವ ಪ್ರಯತ್ನವನ್ನು ಇಲಾಖೆ ಮಾಡಿದೆ. ಜೊತೆಗೆ ಈ ಬಾರಿ ಪರೀಕ್ಷೆ ವಿಧಾನದಲ್ಲೂ ಹಲವು ಬದಲಾವಣೆಗಳನ್ನು ತರಲಾಗಿದೆ. ಪ್ರಶ್ನೆಪತ್ರಿಕೆಗಳ ಹಂಚಿಕೆ ಕಾರ್ಯ ಸಂಪೂರ್ಣ ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿಯೂ ಕ್ಯಾಮೆರಾ ಕಣ್ಣು ಇರಲಿದೆ.

ಈ ವರ್ಷ ಬರೋಬ್ಬರಿ 9,912 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚಿರುವುದು ವಿಶೇಷ. ಹೊಸತಾಗಿ ಪರೀಕ್ಷೆ ಬರೆಯುತ್ತಿರುವವರ ಪೈಕಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳೇ ಹೆಚ್ಚು ಇದ್ದಾರೆ. ಈ ವಿಭಾಗದಲ್ಲಿ 2,295 ಬಾಲಕಿಯರು ಹಾಗೂ 1,869 ಬಾಲಕರು ಸೇರಿದಂತೆ ಬರೋಬ್ಬರಿ 4,164 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ 1,316 ಬಾಲಕರು ಹಾಗೂ 1,086 ಬಾಲಕಿಯರು ಸೇರಿದಂತೆ 2,402 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿಜ್ಞಾನ ವಿಭಾಗದಲ್ಲಿ 720 ಬಾಲಕರು ಹಾಗೂ 1,197 ಬಾಲಕಿಯರು ಸೇರಿದಂತೆ ಒಟ್ಟು 1,917 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
13 ಕೇಂದ್ರ: ಜಿಲ್ಲೆಯಲ್ಲಿ ಈ ಬಾರಿ ಒಟ್ಟು 13 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ರಾಮನಗರ ತಾಲ್ಲೂಕಿನಲ್ಲಿ 5 ಕೇಂದ್ರಗಳಿದ್ದರೆ, ಚನ್ನಪಟ್ಟಣ ತಾಲ್ಲೂಕಿನಲ್ಲಿ 3, ಮಾಗಡಿಯಲ್ಲಿ 2 ಹಾಗೂ ಕನಕಪುರ ತಾಲ್ಲೂಕಿನಲ್ಲಿ 3 ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ. ಪ್ರಶ್ನೆಪತ್ರಿಕೆಗಳ ವಿತರಣೆಗಾಗಿ ಇಲಾಖೆಗೆ ಒಟ್ಟು 4 ಮಾರ್ಗಗಳನ್ನು ಗುರುತಿಸಿದೆ.