ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವೇಳಾ ಪಟ್ಟಿ ಪ್ರಕಟ: ಮೇ 16 ರಿಂದ ಶಾಲೆಗಳು ಆರಂಭ
ಬೆಂಗಳೂರು : ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 2022–23 ನೇ ಸಾಲಿನ ಶೈಕ್ಷಣಿಕ ವರ್ಷ ಮೇ 16 ರಿಂದ ಆರಂಭವಾಗಲಿದ್ದು, ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲಾಗುವುದು.
ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಶೈಕ್ಷಣಿಕ ವೇಳಾಪಟ್ಟಿಯನ್ನು ಹೊರಡಿಸಿದ್ದಾರೆ. ಶೈಕ್ಷಣಿಕ ವರ್ಷದಲ್ಲಿ ಲಭ್ಯವಿರುವ 330 ದಿನಗಳಲ್ಲಿ 60 ಸರ್ಕಾರಿ ರಜಾ ದಿನಗಳಿದ್ದು, ದಸರಾ ರಜೆ ಮತ್ತು ವಿವೇಚನಾ ರಜೆ ಮತ್ತು ಇತರ ಚಟುವಟಿಕೆಗಳ ಸಂದರ್ಭದ ರಜೆ ಕಳೆದು ಒಟ್ಟು 228 ದಿನಗಳು ತರಗತಿಗಳು ನಡೆಯಲಿವೆ.
ಕೋವಿಡ್ ವರ್ಷಗಳಲ್ಲಿ ಶಾಲೆಗಳನ್ನು ಸ್ಥಗಿತಗೊಳಿಸಿದ್ದರಿಂದ ಶೇ 50 ರಿಂದ 60 ರಷ್ಟು ದಿನಗಳು ಮಾತ್ರ ಭೌತಿಕವಾಗಿ ತರಗತಿಗಳನ್ನು ನಡೆಸಲಾಗಿತ್ತು. ಆನ್‌ಲೈನ್ ಕಲಿಕೆ ಸೇರಿದಂತೆ ವಿವಿಧ ಪರ್ಯಾಯ ವಿಧಾನಗಳಲ್ಲಿ ಶಿಕ್ಷಣ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗಿದೆ. ಕಲಿಕೆಯ ಕೊರತೆಯನ್ನು ನೀಗಿಸಲು ಶೈಕ್ಷಣಿಕ ವರ್ಷದ ಪೂರ್ಣಾವಧಿಗೆ ‘ಕಲಿಕಾ ಚೇತರಿಕೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಆದ್ದರಿಂದ ಈ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕೆ ವರ್ಷ’ವೆಂದು ಕಾರ್ಯಸೂಚಿ ರೂಪಿಸಲಾಗಿದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಏಕರೂಪದ ಶೈಕ್ಷಣಿಕ ಚಟುವಟಿಕೆ:
ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆ ನಡೆಸಲಾಗುವುದು. ಇದಕ್ಕೆ ಪೂರಕವಾಗಿ ಕಲಿಕಾ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.
ಶಾಲಾ ಕರ್ತವ್ಯದ ದಿನಗಳು:
- ಮೊದಲ ಅವಧಿ;16.05.2022 ರಿಂದ 02.10.2022
*ಎರಡನೇ ಅವಧಿ;17.10.2022 ರಿಂದ 10.04.2023
ರಜಾ ದಿನಗಳು:
ದಸರಾ ರಜೆ: 03.10.2022 ರಿಂದ 16.10.2022
ಬೇಸಿಗೆ ರಜೆ: 11.04.2022 ರಿಂದ 28.05.2023