ಹಿಂದಿ ಹೇರಿಕೆ ವಿರೋಧಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಪ್ರತಿಭಟನೆ

ರಾಮನಗರ : ರಾಜ್ಯದ ಮೇಲೆ ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರಿಕೆ ಖಂಡಿಸಿ ರಾಮನಗರದಲ್ಲಿ ಐಜೂರು ವೃತ್ತದಲ್ಲಿ ಗುರುವಾರ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅವರ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಪ್ರತಿಭಟನೆ

ಹಿಂದೀ ಭಾಷಿಕವಲ್ಲದ ರಾಜ್ಯಗಳು ಸಂಪರ್ಕ ಭಾಷೆಯನ್ನಾಗಿ ಇಂಗ್ಲೀಷನ್ನು ಬಳಸಲು ಅವಕಾಶ ನೀಡಬೇಕು. ಅದಕ್ಕೆ ಚ್ಯುತಿ ತರುವ ನಡೆಯೂ ಸಮ್ಮತವಲ್ಲ. ಹಿಂದಿ, ಕನ್ನಡ, ತಮಿಳು, ತೆಲುಗಿನಂತೆಯೇ ಇಂಗ್ಲೀಷನ್ನು ಕೂಡ ಭಾರತೀಯ ಭಾಷೆಯನ್ನಾಗಿ ಅಂಗೀಕರಿಸಿದ್ದೇವೆ ಎಂಬುದನ್ನು ಕೇಂದ್ರ ಸರ್ಕಾರ ಮರೆಯಬಾರದು. ಒಂದು ನಿರ್ಧಿಷ್ಟ ಸಿದ್ಧಾಂತ ಮತ್ತು ಪ್ರಭುತ್ವದ ರಾಜಕೀಯ ದುರ್ಬಳಕೆಗೆ ತುತ್ತಾಗುವ ಭಾಷೆ ತೀವ್ರ ಹಾನಿಯನ್ನು ಅನುಭವಿಸುತ್ತದೆ ಎಂದು ರಮೇಶ್‌ಗೌಡ ಅವರು ಆಕ್ರೋಶ ವ್ಯಕ್ತಪಡಿಸಿದರು.

ದೇಶ ಭಾಷೆಗಳಲ್ಲೆಲ್ಲ ಹಿಂದಿಯೇ ಶ್ರೇಷ್ಠ ಎಂಬ ಸಂವಾದವನ್ನು ದಕ್ಷಿಣ ಭಾರತ ಹಲವು ಬಾರಿ ತಿರಸ್ಕರಿಸಿದೆ. ಆದರೂ ಉತ್ತರ ಭಾರತದ ಅಂಧ ಹಿಂದೀ ಅಭಿಮಾನದ ಕಾರ್ಯಸೂಚಿ ಈ ವಾದವನ್ನು ಮತ್ತೆ ಬಡಿದೆಬ್ಬಿಸುತ್ತಿದೆ. ಕೇಂದ್ರ ಸರ್ಕಾರ ಪ್ರತಿಪಾದಿಸುವ ತ್ರಿಭಾಷಾ ಸೂತ್ರವು ಹಿಂದೀ ಭಾಷಿಕ ಸೀಮೆಗಳಿಗೆ ಯಾಕೆ ಅನ್ವಯ ಆಗುತ್ತಿಲ್ಲ. ಹಿಂದಿ ಭಾಷಿಕರು ಅಳವಡಿಸಿಕೊಂಡಿರುವ ಮೂರನೆಯ ಭಾಷೆ ಯಾವುದು ಎಂಬ ಪ್ರಶ್ನೆಗಳನ್ನು ದಕ್ಷಿಣ ಭಾರತೀಯರು ತಿರುಗಿ ಕೇಳಿದರೆ ಉತ್ತರ ಭಾರತದ ಬಳಿ ಏನು ಉತ್ತರವಿದೆ ಎಂದು ಟೀಕಿಸಿದರು.

ಎಲ್ಲ ಭಾಷೆಗಳನ್ನು ಗೌರವಿಸಬೇಕು ಆದರೆ ಒಂದು ಭಾಷೆಯ ಹೇರಿಕೆ ಸಲ್ಲದು. ಇಂಗ್ಲಿಷ್ ಸೇರಿದಂತೆ ಎಲ್ಲ ಭಾಷೆ ಜ್ಞಾನ ಇರಬೇಕು. ಆದರೆ ಕಲಿಯಲೇಬೇಕು ಎಂಬ ಒತ್ತಡ ಸರಿಯಲ್ಲ .ಮಾತೃಭಾಷೆ , ಪ್ರಾದೇಶಿಕ ಭಾಷೆಗಳ ಬದಲಿಗೆ ಇಂತಹದ್ದೇ ಭಾಷೆ ಬಳಸಬೇಕು ಎನ್ನುವುದು ನಿರಂಕುಶವಾದಿಗಳು ಜನರ ಮೇಲೆ ಎಸಗುವ ದೌರ್ಜನ್ಯ , ಇಂತಹ ಒತ್ತಡಗಳಿಗೆ ಕನ್ನಡಿಗರು ಮಣಿಯುವುದಿಲ್ಲ.

ಕನ್ನಡದ ಸರ್ಕಾರವನ್ನು ಮೀರಿಸಿ, ಕನ್ನಡದ ನಾಯಕತ್ವವನ್ನು ಹಾಳು ಮಾಡಿ, ಕನ್ನಡಿಗರ ಮೇಲೆ ಸಾರ್ವಭೌಮತ್ವ ಮಾಡಲು ಹೊರಟಿರುವ ಕೇಂದ್ರ ಸರ್ಕಾರ ನಿಲುವನ್ನು ಖಂಡಿಸಿದ ಅವರು, ಹಿಂದೀ ಹೇರಿಕೆಯನ್ನು ಆಗಲೇಬಾರದು. ರಾಜ್ಯದಲ್ಲಿ ಇರುವ ಕನ್ನಡ ಶಾಲೆಗಳನ್ನು ಉಳಿಸುವಂತಹ ಕೆಲಸ ಮಾಡಬೇಕು. ಗಡಿಯನ್ನು ಅಭಿವೃದ್ಧಿ ಮಾಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವವರೆಗೂ ರಾಜ್ಯಾದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಮನಗರ ಜಿಲ್ಲಾಧ್ಯಕ್ಷ ಯೋಗೀಶ್ ಗೌಡ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ಕೇಂದ್ರದ ನೀತಿಗೆ ಶರಣಾಗಿವೆ. ಇದರಿಂದ ಕನ್ನಡ ಭಾಷೆಗೆ ಮತ್ತಷ್ಟು ಅಪಾಯ ಎದುರಾಗಲಿದೆ. ಕೂಡಲೆ ರಾಜ್ಯದ ಮೇಲೆ ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರಿಕೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಬೆಂಕಿ ಶ್ರೀಧರ್, ರಂಜಿತ್ ಗೌಡ, ಮಂಡ್ಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಗಳಮ್ಮ , ಚಾಮರಾಜನಗರ ಜಿಲ್ಲಾಧ್ಯಕ್ಷ ಮಲ್ಲು , ರಾಯಚೂರು ಜಿಲ್ಲಾಧ್ಯಕ್ಷ ವೀರೇಶ್, ಕೋಲಾರ ಜಿಲ್ಲಾಧ್ಯಕ್ಷ ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಭೂಹಳ್ಳಿ ನಿಂಗೇಗೌಡ, ತಾಲ್ಲೂಕು ಉಪಾಧ್ಯಕ್ಷರುಗಳಾದ ಮಹೇಶ್ , ಹನಿಯೂರು ಉಮಾಶಂಕರ್, ಚಕ್ಕೆರೆ ರಾಮೇಗೌಡ, ಚಿಕ್ಕೇನಹಳ್ಳಿ ಸಿದ್ದಪ್ಪಾಜಿ , ರಾಮಚಂದ್ರ, ಸುರೇಶ್ ಬಾಬು, ಅಜಯ್, ಪ್ರಿಯಕೃಷ್ಣ, ಮಂಗಳವಾರಪೇಟೆ ನಾಗೇಶ್ , ಪುಟ್ಟಹೊನ್ನಪ್ಪ , ಕನ್ನಡಪರ ಹೋರಾಟಗಾರ ಬಾಬ್‌ಜಾನ್, ಮಹಿಳಾ ಹೋರಾಟಗಾರ್ತಿರಾದ ಅಂಚಿಪುರ ಜಯಲಕ್ಷ್ಮಮ್ಮ ನಾಗರತ್ನ , ಬೇವೂರು ಮಂಡ್ಯ ಕಲಾವತಿ, ತಸ್ಮಿಯಬಾನು, ರಾಜಮ್ಮ, ಮಂಗಳಮ್ಮ ಹಾಗೂ ವೇದಿಕೆಯ ಎಲ್ಲ ಪಾದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *