ಎಂ.ಎಸ್.ರಾಮಯ್ಯ ಸ್ಮರಣಾರ್ಥ ಅಂಚೆ ಲಕೋಟೆ ಬಿಡುಗಡೆ

ಎಂ.ಎಸ್. ರಾಮಯ್ಯ

ಬೆಂಗಳೂರು: ಕರ್ಮಯೋಗಿ ಎಂದೇ ಪ್ರಸಿದ್ಧರಾಗಿರುವ ಎಂ.ಎಸ್.ರಾಮಯ್ಯ ಅವರ ಪರಿಶ್ರಮದಿಂದ ಇಂದು ಶಿಕ್ಷಣ ಹೊಸ ರೂಪ ಪಡೆದುಕೊಂಡಿದೆ ಎಂದು ಕರ್ನಾಟಕ ಅಂಚೆ ವಲಯದ ಪ್ರಧಾನ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌.ರಾಜೇಂದ್ರ ಕುಮಾರ್ ಹೇಳಿದರು.
ಎಂ.ಎಸ್.ರಾಮಯ್ಯ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅಂಚೆ ಇಲಾಖೆ ಶುಕ್ರವಾರ ಆಯೋಜಿಸಿದ್ದ ಎಂ.ಎಸ್.ರಾಮಯ್ಯ ಅವರ ವಿಶೇಷ ಅಂಚೆ ಚೀಟಿ (ಸ್ಟಾಂಪ್‌) ಮತ್ತು ಲಕೋಟೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಮಯ್ಯ ಅವರು ದೇಶದಲ್ಲೇ ಕರ್ನಾಟಕವನ್ನು ಪ್ರತಿಬಿಂಬಿಸುವಂತಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ನಮ್ಮೆಲ್ಲರ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ನವಕರ್ನಾಟಕ ನಿರ್ಮಾತೃಗಳ ಸಾಲಿನಲ್ಲಿ ಬರುವ ರಾಮಯ್ಯ ಅವರನ್ನು ಸದಾ ನೆನೆಯಬೇಕು. ಯಾವುದೇ ಕೆಲಸದ ಕುರಿತು ಅವರಿಗಿದ್ದ ಶ್ರದ್ಧೆಯನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಇಂತಹ ವ್ಯಕ್ತಿಯ ಹೆಸರಿನಲ್ಲಿ ಅಂಚೆ ಲಕೋಟೆ ಹೊರತರುತ್ತಿರುವುದು ನಮ್ಮ ಹೆಮ್ಮೆ ಎಂದರು.

ಗೋಕುಲ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಎಂ.ಆರ್.ಸೀತಾರಾಂ, ತಂದೆ ರಾಮಯ್ಯ ಅವರು ದೇಶದ ಹಲವು ಅಣೆಕಟ್ಟು ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ನೀರಾವರಿ ಯೋಜನೆಗಳಿಂದ ಸಾವಿರಾರು ರೈತರು ಇಂದಿಗೂ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಕೈಗಾರಿಕಾ ಕ್ಷೇತ್ರದಿಂದ ಅವರು ಶಿಕ್ಷಣ ರಂಗಕ್ಕೆ ಧುಮುಕಿದರು. ರಾಮಯ್ಯ ಶಿಕ್ಷಣ ಸಂಸ್ಥೆಗಳು ಇಂದು ದೇಶದಾದ್ಯಂತ ಹೆಸರುವಾಸಿಯಾಗಿದ್ದು, ರಾಮಯ್ಯ ಅವರೇ ಇದಕ್ಕೆ ಮೂಲ ಕಾರಣಕರ್ತರು ಎಂದು ಸ್ಮರಿಸಿದರು.

Leave a Reply

Your email address will not be published. Required fields are marked *