ಮಣ್ಣಿನ ಕರಕುಶಲ ವಸ್ತುಗಳ ತರಬೇತಿ ಕಾರ್ಯಾಗಾರ : ಆಧುನಿಕತೆ ವಿನಾಶಕ್ಕೆ ದಾರಿ ಮಾಡಿಕೊಡುತ್ತಿದೆ : ಸು.ತ. ರಾಮೇಗೌಡ ಬೇಸರ
ಚನ್ನಪಟ್ಟಣ : ದಿನ ನಿತ್ಯದ ಬಳಕೆಯಲ್ಲಿ ನಮ್ಮ ಜನಪದರು ಕುಶಲ ಕಲೆಯನ್ನು ಬಳಸಿಕೊಂಡು, ಆರೋಗ್ಯಯುತ ಬದುಕನ್ನು ಕಂಡುಕೊಂಡಿದ್ದರು. ಆದರೆ, ಆಧುನಿಕತೆ ವಿನಾಶಕ್ಕೆ ದಾರಿ ಮಾಡಿಕೊಡುತ್ತಿರುವುದು ಬೇಸರದ ಸಂಗತಿ ಎಂದು ಕರ್ನಾಟಕ ಜಾನಪದ ಪರಿಷತ್ತಿನ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಸು.ತ. ರಾಮೇಗೌಡ ತಿಳಿಸಿದರು.
ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದ ವೃದ್ಧಾಶ್ರಮದಲ್ಲಿ ಸಮರ್ಪಣಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ, ಮಣ್ಣಿನ ಕರಕುಶಲ ವಸ್ತುಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗ್ರಾಮೀಣ ಭಾಗದ ಕುಶಲ ಕಲೆಗಳಿಗೆ ಜೀವತುಂಬುವ ಮೂಲಕ ಪುನರುಜ್ಜೀವನಗೊಳಿಸಬೇಕು.ಜನಸಂಖ್ಯೆ ಸ್ಪೋಟಗೊಳ್ಳುತ್ತಿದ್ದು, ಭೂಮಿಯ ಮೂಲಕ ಉದ್ಯೋಗ ಒದಗಿಸುವುದು ಕಷ್ಟದ ಕೆಲಸ. ಪುರಾತನ ಕಲೆಗಳಿಗೆ ವೈಜ್ಞಾನಿಕ ಸ್ಪರ್ಶ ಮತ್ತು ಹೊಸ ಹೊಸ ಆಯಾಮಗಳನ್ನು ನೀಡುವ ಮೂಲಕ ಪ್ರಸ್ತುತ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ. ಮಣ್ಣಿನಲ್ಲಿ ತಯಾರಿಸುವ ಗೃಹೋಪಯೋಗಿ ವಸ್ತುಗಳು ಪೂರ್ಣವಾಗಿ ಕಣ್ಮರೆಯಾಗುತ್ತಿದ್ದು, ದೈಹಿಕ ಆರೋಗ್ಯಕ್ಕೆ ಪೆಟ್ಟು ಬಿದ್ದಿದೆ. ಅಪರೂಪವಾಗುತ್ತಿರುವ ಜನಪದ ಕುಶಲ ಕರ್ಮಿಗಳನ್ನು ಗುರುತಿಸಿ, ಗೌರವಿಸುವ ಕೆಲಸವಾಗಬೇಕು ಎಂದರು.
ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷೆ ಪ್ರೇಮ ಮಾತನಾಡಿ, ಹಳೆಯದಲ್ಲೆ ಹೊಸ ರೂಪ ತೆಳೆದು ಮರುಕಳಿಸಬೇಕು. ಶಾಲಾ-ಕಾಲೇಜುಗಳು ಹಾಗೂ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಈ ಕಲೆಯನ್ನು ಪರಿಚಯಿಸಬೇಕು ಎಂದರು.
ಸಾಹಿತಿ ವಿಜಯ್ ರಾಂಪುರ ಮಾತನಾಡಿ, ಜನಪದರ ಕರ ಕುಶಲ ಕಲೆಗಳಿಗೆ ಸೃಜನಶೀಲತೆ ಅಳವಡಿಸಿಕೊಂಡು ಉತ್ತಮ ಆದಾಯವನ್ನು ಗಳಿಸಬಹುದು. ಯುವಜನರು ಇಂತಹ ಕಲೆಗಳನ್ನು ಕಲಿಯುವ ಪರಿಪಾಠ ರೂಢಿಸಿಕೊಳ್ಳಬೇಕು ಎಂದರು.ತರಬೇತುದಾರ ಎಸ್.ಎನ್. ಲಿಖಿತ್ ಗೌಡ ಪ್ರಾಸ್ತಾವಿಕ ನುಡಿಯಾಡಿ, ಕಡಿಮೆ ಖರ್ಚು ಹಾಗೂ ಅಲ್ಪಾವಧಿಯ ಕಲಿಕೆಯ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳ್ಳಲು ಇಂತಹ ಕಲೆಗಳಿಂದ ಸಾಧ್ಯ. ಈ ಕಲಾ ವಸ್ತುಗಳಿಗೆ ಉತ್ತಮ ಬೇಡಿಕೆ ಇದ್ದು, ಕಲಿಕಾರ್ಥಿಗಳ ಕೊರತೆ ಎದ್ದು ಕಾಣುತ್ತಿದೆ ಎಂದರು.
ಟ್ರಸ್ಟ್ ಅಧ್ಯಕ್ಷೆ ಮನುಜ ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಯುವ ಕವಿ ದ್ಯಾವಪಟ್ಟಣ ಯೋಗೇಶ್, ಚೌಡೇಶ್ವರಿ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷೆ ಪುಷ್ಪಲತಾ ಹಾಗೂ ಸಮರ್ಪಣಾ ಚಾರಿಟಬಲ್ ಟ್ರಸ್ಟ್ ನ ಪದಾಧಿಕಾರಿಗಳು ಹಾಜರಿದ್ದರು.