ರಾಮನಗರ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಎಂ. ಶಿವಮಾದು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ. ರುದ್ರೇಶ್ ಆಯ್ಕೆ

ಚನ್ನಪಟ್ಟಣ : ರಾಮನಗರ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷರಾಗಿ ಹಿರಿಯ ಪತ್ರಿಕಾ ವಿತರಕ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಉಪಾಧ್ಯಕ್ಷ ಎಂ.ಶಿವಮಾದು ಅವರು ಒಮ್ಮತದಿಂದ ಆಯ್ಕೆಯಾಗಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಪತ್ರಿಕಾ ವಿತರಕರ ಸಮಾಲೋಚನಾ ಸಭೆಯಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಶಂಭುಲಿಂಗ ಅವರು ಒಕ್ಕೂಟದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಂ.ಶಿವಮಾದು ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕೆ.ರುದ್ರೇಶ್ ಅವರ ಹೆಸರನ್ನು ಸೂಚಿಸಿದರು. ಸಭೆಯಲ್ಲಿ ಹಾಜರಿದ್ದ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಮೂವತ್ತಕ್ಕೂ ಹೆಚ್ಚು ಪತ್ರಿಕಾ ವಿತರಕರು ಒಮ್ಮತದಿಂದ ಎಂ.ಶಿವಮಾದು ಹಾಗೂ ರುದ್ರೇಶ್ ಅವರ ಆಯ್ಕೆಯನ್ನು ಒಮ್ಮತದಿಂದ ಅನುಮೋದಿಸಿದರು.

ರಾಮನಗರ ಜಿಲ್ಲೆಯ ಪತ್ರಿಕಾ ವಿತರಕರು

ಜಿಲ್ಲೆಯ ನೂತನ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಅವರನ್ನು ಅಭಿನಂದಿಸಿ ಮಾತನಾಡಿದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಶಂಭುಲಿಂಗ ಅವರು, ಮಳೆ, ಚಳಿ ಎನ್ನದೇ, ನಮ್ಮ ಕಷ್ಟ-ಸುಖ ಏನಿದ್ದರೂ, ಸಂಬಂಧಿಕರು ಮರಣ ಹೊಂದಿದ ಸಂದರ್ಭದಲ್ಲೂ ನಿತ್ಯವೂ ಮನೆ, ಮನೆಗೆ ಪತ್ರಿಕೆ ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ದೊಡ್ಡದಿದೆ. ಈ ನಿಟ್ಟಿನಲ್ಲಿ ವಿತರಕರ ಕ್ಷೇಮಾಭಿವೃದ್ಧಿಗಾಗಿ ಒಕ್ಕೂಟವು ಪ್ರಾಮಾಣಿಕವಾಗಿ ಶ್ರಮವಹಿಸಲಿದ್ದು, ನೂತನವಾಗಿ ರಚನೆಯಾಗಲಿರುವ ರಾಮನಗರ ಜಿಲ್ಲಾ ಒಕ್ಕೂಟದ ಪದಾಧಿಕಾರಿಗಳು ರಾಜ್ಯ ಒಕ್ಕೂಟದೊಂದಿಗೆ ಕೈ ಜೋಡಿಸಿ ಜಿಲ್ಲೆಯ ಪತ್ರಿಕಾ ವಿತರಕರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಎಂ.ಶಿವಮಾದು ಮಾತನಾಡಿ,ವಿತರಕರು ಹಾಗೂ ಏಜೆಂಟರು ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸಮಸ್ತ ಪತ್ರಿಕಾ ವಿತರಕರ ಹಿತ ಕಾಯುವ ಕೆಲಸ ಮಾಡುವುದರ ಜೊತೆಗೆ, ಎಲ್ಲಾ ಪತ್ರಿಕಾ ವಿತರಕರನ್ನು ಒಂದೇ ವೇದಿಕೆಗೆ ಕರೆತರುವ ಕೆಲಸವನ್ನು ಜಿಲ್ಲಾ ಒಕ್ಕೂಟವು ಮುಂದಿನ ದಿನಗಳಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ಆ ಮೂಲಕ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮವಹಿಸಿ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಸಂಗಮ್ ಸುರೇಶ್, ಒಕ್ಕೂಟದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸುದೇವ, ಒಕ್ಕೂಟದ ಪದಾಧಿಕಾರಿ ಶಿವಶಂಕರ್, ಪ್ರಸರಣ ವಿಭಾಗದ ಮುಖ್ಯಸ್ಥ ಮಹೇಶ್, ಪತ್ರಿಕಾ ವಿತರಕರಾದ ಮಳೂರುಪಟ್ಟಣ ನಿಂಗಪ್ಪ, ಎಂ.ಎನ್.ಸುರೇಶ್, ಹರೂರು ರಾಜೇಶ್, ಹುಚ್ಚಪ್ಪ, ಗಣೇಶ್, ದರ್ಶನ್,ತಿಟ್ಟಮಾರನಹಳ್ಳಿ ಮಂಜು, ಆಕಾಶ್ ಹಾಗೂ ವಿವಿಧ ಪತ್ರಿಕೆಗಳ ವರದಿಗಾರರು, ಜಿಲ್ಲೆಯ ಹಲವಾರು ಪತ್ರಿಕಾ ವಿತರಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *