ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪೇಪರ್ ಸೋರಿಕೆ ಪ್ರಕರಣ : ಮೈಸೂರಿನಲ್ಲಿ ಆರೋಪಿ ಸೌಮ್ಯಾ ಅರೆಸ್ಟ್
ಬೆಂಗಳೂರು : ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪೇಪರ್ ಸೋರಿಕೆ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸೌಮ್ಯರನ್ನು ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಮೈಸೂರಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ನಿನ್ನೆ ಸರ್ಕಾರಿ ರಜೆ ಹಿನ್ನೆಲೆ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಇಂದು ಮತ್ತೆ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಪೊಲೀಸರು 32ನೇ ಎಸಿಎಂಎಂ ಕೋರ್ಟ್ ಗೆ ಮನವಿ ಮಾಡುತ್ತಾರೆ.
ಆರೋಪಿ ಸೌಮ್ಯ ಮೈಸೂರು ವಿವಿ ಭೂಗೋಳಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ವಿವಿಯಲ್ಲಿ ಎಂಎಸ್ಸಿ ಓದಿರುವ ಸೌಮ್ಯ, ಪ್ರೊಫೆಸರ್ ಹೆಚ್. ನಾಗರಾಜ್ ಎಂಬುವರ ಬಳಿ ಪಿಹೆಚ್‌ಡಿ ಮುಗಿಸಿದ್ದಾರೆ. ಜಿಐಎಸ್ ಅಂಡ್ ಅಗ್ರಿಕಲ್ಚರ್ ಜಿಯಾಗ್ರಫಿಯಲ್ಲಿ ಪಿಹೆಚ್‌ಡಿ ಮಾಡಿದ್ದಾರೆ. ಸದ್ಯ ಪೋಸ್ಟ್ಡಾಕ್ಟರಲ್ ಫೆಲೋ ಶಿಪ್ ಮಾಡುತ್ತಿದ್ದಾರೆ.
ಮಾರ್ಚ್ ನಲ್ಲಿ ನಡೆದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪರೀಕ್ಷೆ ಬರೆದಿದ್ದರು. ಮೈಸೂರಿನ ಕುವೆಂಪು ನಗರದ ಪಿಯುಸಿ ಕಾಲೇಜು ಸೆಂಟರ್ ನಲ್ಲಿ ಪರೀಕ್ಷೆ ಬರೆದಿದ್ದರು. ಪರೀಕ್ಷೆ ಆರಂಭದ 1 ಗಂಟೆ ಮುಂಚಿತವಾಗಿ ಗೆಳತಿ ಒಬ್ಬಳಿಗೆ 18 ಪ್ರಶ್ನೋತ್ತರಗಳ ಮಾಹಿತಿಯನ್ನು ವಾಟ್ಸಾಪ್ ನಲ್ಲಿ ಕಳಿಸಿದ್ದರು. ಆಕೆಯಿಂದ ಬೆಂಗಳೂರಿನ ರಾಮಕೃಷ್ಣ ಎಂಬುವರಿಗೆ ಮಾಹಿತಿ ಶೇರ್ ಆಗಿತ್ತು. ಸೌಮ್ಯಾಗೆ ಪ್ರಶ್ನೆಗಳು ಸಿಕ್ಕ ಬಗ್ಗೆ ಪೊಲೀಸರು ಚರ್ಚೆ ನಡೆಸಲಿದ್ದಾರೆ.