ಸಹಾಯಕ ಪ್ರಾಧ್ಯಾಪಕರ ಪ್ರಶ್ನೆಪತ್ರಿಕೆ ಸೋರಿಕೆ : ಸೌಮ್ಯಾ ಪೊಲೀಸರ ಮುಂದೆ ಹೇಳಿದ್ದೇನು?
ಬೆಂಗಳೂರು : ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ಪರೀಕ್ಷೆಯಲ್ಲಿ ಭೂಗೋಳಶಾಸ್ತ್ರ ಪರೀಕ್ಷೆಯಲ್ಲಿ ನಡೆದ ಅಕ್ರಮದ ವಿಚಾರಣೆಯನ್ನು ಮಲ್ಲೇಶ್ವರ ಪೊಲೀಸರು ಮುಂದುವರೆಸಿದ್ದಾರೆ. ಅಥಿತಿ ಉಪನ್ಯಾಸಕಿ ಸೌಮ್ಯಾರನ್ನು ಮಲ್ಲೇಶ್ವರ ಪೊಲೀಸರು 12 ದಿನಗಳ ಪೊಲೀಸ್ ಕಸ್ಟಡಿ ತೆಗೆದುಕೊಂಡು ತನಿಖೆಯನ್ನು ನಡೆಸುತ್ತಿದ್ದಿದ್ದಾರೆ. ಅಸಲಿಗೆ ಅತಿಥಿ ಉಪನ್ಯಾಸಕಿ ಖಾಕಿ ಖೆಡ್ಡಾಗೆ ಬೀಳಲು ಕಾರಣವಾಗಿದ್ದು ಆಕೆಗೆ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು ಎಂಬುದಾಗಿದೆ.
ಸೌಮ್ಯಾ ಮೂಲತಃ ಮೈಸೂರಿನ ನಿವಾಸಿ. ರಂಗಸ್ವಾಮಿ -ಶಿವಮ್ಮ ಎಂಬ ದಂಪತಿಯ ಮೂವರು ಮಕ್ಕಳ ಪೈಕಿ ಕಡೆಯ ಪುತ್ರಿ. 2007-2010ರಲ್ಲಿ ಮೈಸೂರಿನ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿಎ ಪದವಿ ಪಡೆದಿರುವ ಸೌಮ್ಯಾ, ಮಹಾರಾಣಿ ಸ್ನಾತಕೋತ್ತರ ಕಾಲೇಜಿನಲ್ಲಿ 2010-2012ರಲ್ಲಿ ಭೂಗೋಳ ಶಾಸ್ತ್ರ ವಿಭಾಗದಲ್ಲಿ ಎಮ್ ಎಸ್ ಸಿ ಪದವಿ ಮುಗಿಸಿದ್ದಾರೆ. 2013ರಿಂದ 2015ರವರೆಗೆ ಕೆ ಆರ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ.
ನಂತರ ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾಲಯದಲ್ಲಿ 2015ರಿಂದ 20ರವರೆಗೆ ಭೂಗೋಳಶಾಸ್ತ್ರ ಅಧ್ಯಯನ ಮಾಡಿ ಪಿಹೆಚ್‌ಡಿ ಪದವಿ ಪಡೆದಿದ್ದಾರೆ. ಮಾನಸ ಗಂಗೋತ್ರಿ ಕಾಲೇಜಿನಲ್ಲಿ ಭೂಗೋಳಶಾಸ್ತ್ರದ ಅತಿಥಿ ಉಪನ್ಯಾಸಕರಾಗಿ ಕೆಲಸವನ್ನು ಮಾಡಿದ್ದಾರೆ. ಸೌಮ್ಯಾ 2022ರಿಂದ ಭೂಗೋಳಶಾಸ್ತ್ರ ಮಾನಸ ಗಂಗೋತ್ರಿ ಕಾಲೇಜಿನಲ್ಲೇ ಪಿಡಿಎಫ್ ಸಂಶೋಧನಾ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮುಂದುವರೆಸಿದ್ದಾರೆ. ಸದ್ಯ ಸೌಮ್ಯಾ ಸಹಾಯಕ ಪ್ರಾಧ್ಯಾಪಕರ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.
ತನಿಖಾಧಿಕಾರಿಗಳ ಮುಂದೆ ಆರೋಪಿತೆ ಸೌಮ್ಯಾ ಹೇಳಿದ್ದೇನು..? “ಸೌಮ್ಯಾ ತನಗೆ ಏಳು ವರ್ಷಗಳಿಂದ ನನಗೆ ಡಾ. ನಾಗರಾಜ್ ಪರಿಚಯವಿತ್ತು. ಸಹಾಯಕ ಉಪನ್ಯಾಸಕರ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಲು ತೀರ್ಮಾನಿಸಿದ್ದೆ. 2021ರ ನವೆಂಬರ್ ನಲ್ಲಿ 1242 ಸಹಾಯಕ ಉಪನ್ಯಾಸಕ ಹುದ್ದೆಗಳಿಗೆ ಕಾಲ್ ಫಾರ್ ಮಾಡಲಾಗಿತ್ತು. ಸಹಾಯಕ ಉಪನ್ಯಾಸಕ ಹುದ್ದೆಗೆ ಮೂರು ಬಾರಿ ಅರ್ಜಿ ಸಲ್ಲಿಸಿದ್ದೆ. ಮೊದಲನೇ ಬಾರಿ ಜನ್ಮ ದಿನಾಂಕ ತಪ್ಪಾಗಿ ನಮೂದಿಸಿದ ಹಿನ್ನೆಲೆ ರಿಜೆಕ್ಟ್ ಆಗಿತ್ತು. ಎರಡನೇ ಬಾರಿ ಇನ್ ಕಮ್ ಸರ್ಟಿಫಿಕೇಟ್ ದಿನಾಂಕದಲ್ಲಿ ವ್ಯತ್ಯಾಸ ಹಿನ್ನೆಲೆ ಆಗಲೂ ರಿಜೆಕ್ಟ್ ಆಗಿತ್ತು. ಮೂರನೇ ಬಾರಿ ಎಲ್ಲವನ್ನೂ ಸರಿಪಡಿಸಿಕೊಂಡು ಸಹಾಯಕ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ನನ್ನ ಅಪ್ಲಿಕೇಷನ್ ಸಂಖ್ಯೆ AP522283A1 ಅಂತ ಅಪ್ಲಿಕೇಶನ್ ಸಂಖ್ಯೆಯೂ ಬಾಯ್ಬಿಟ್ಟಿರುವ ಸೌಮ್ಯಾ. ನನಗೆ ನಾಗರಾಜ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆ ತಯಾರಿಸಿ ಕೊಡೋದು ತಿಳಿಸಿದಿತ್ತು’.
“ನಾನು ಮೈಸೂರಿನಲ್ಲಿರೋ ನಾಗರಾಜ್ ಮನೆಗೆ ಆಗಾಗ ಹೋಗಿ ಬರ್ತಿದ್ದೆ. ಇದೇ ವರ್ಷ ಮಾರ್ಚ್ ಮೊದಲ ವಾರದಲ್ಲಿ ಈ ಪರೀಕ್ಷೆಗೆ ಸಂಬಂಧಪಟ್ಟಂತೆ ನಾಗರಾಜ್ ಮನೆ ರೂಮ್ ನಲ್ಲಿ ಓದಿಕೊಳ್ತಿದ್ದೆ. ಈ ವೇಳೆ ಅವರ ರೂಮ್‌ನಲ್ಲಿ ಕೆಲ ಪುಸ್ತಕಗಳಿದ್ದವು. ಅವುಗಳನ್ನ ರೆಫರ್ ಮಾಡುತ್ತಿದ್ದಾಗ ಟೇಬಲ್ ಮೇಲೆ ಎನ್ವಲಪ್ ಕವರ್ ನಲ್ಲಿ ಕೈಬರಹದ ಬರವಣಿಗೆ ಮತ್ತು ಪ್ರಿಂಟೌಟ್ ಗಳಿದ್ದವು. ಎಲ್ಲವೂ ಭೂಗೋಳಶಾಸ್ತ್ರಕ್ಕೆ ಸಂಬಂಧಪಟ್ಟ ಪ್ರಶ್ನೆಗಳಾಗಿದ್ದವು. ನಾನು ಅವುಗಳನ್ನ ಮೊಬೈಲ್ ನಲ್ಲಿ ಫೋಟೋ ತೆಗೆದುಕೊಂಡು ಯಾರಿಗೂ ಹೇಳದೆ ಮನೆಗೆ ಹಿಂತಿರುಗಿದ್ದೆ. ಮನೆಗೆ ಬಂದ ನಂತರ ಆ ಫೋಟೋಗಳನ್ನ ಗೂಗಲ್ ಡ್ರೈವ್ ನಲ್ಲಿ ಸೇವ್ ಮಾಡಿ ನನ್ನ ನೋಟ್ ಪುಸ್ತಕದಲ್ಲಿ ಯಥಾವತ್ತಾಗಿ ಕೈಬರವಣಿಗೆಯಲ್ಲಿ ಬರೆದಿಟ್ಟಿದ್ದೆ. ತಯಾರಿ ವೇಳೆ ಇದೇ ಪ್ರಶ್ನೆಗಳಿಗೆ ಹೆಚ್ಚು ಅಧ್ಯಯನ ಮಾಡಿದ್ದೆ,’ ಎಂಬುದಾಗಿ ಸೌಮ್ಯಾ ತಿಳಿಸಿದ್ದಾರೆ ಎನ್ನಲಾಗಿದೆ.
ಸೌಮ್ಯಾ ತನಗೆ ತಿಳಿಸಿರುವಂತೆ, ಡಾ. ನಾಗರಾಜ್ ತಂಗಿ ಮಗಳು ಕುಸುಮಾ ಕಾಲೇಜು ಬಳಿ ಸಿಕ್ಕಿದ್ದಳು. ಆಕೆಗೂ ಕೂಡ ಮಾವನ ರೂಮ್ ನಲ್ಲಿ ಭೂಗೋಳ ಶಾಸ್ತ್ರದ ಪ್ರಶ್ನಾವಳಿಗಳು ಇರುವುದು ಹೇಳಿದ್ದೆ ಜೊತೆಗೆ ಮೊಬೈಲ್ ನಲ್ಲಿ ಪ್ರಶ್ನೆಗಳನ್ನು ಫೋಟೋ ತೆಗೆದು ಕಳಿಸೋದಾಗಿಯೂ ಕುಸುಮಾಗೆ ತಿಳಿಸಿದ್ದೆ. ಮನೆಗೆ ತೆರಳಿದ ಬಳಿಕ ಪ್ರಶ್ನಾವಳಿಗಳ ಫೋಟೋಗಳನ್ನು ವ್ಯಾಟ್ಸಪ್ ಮಾಡಿದ್ದ ಕುಸುಮಾ ನನ್ನ ಸ್ನೇಹಿತೆ ಕೂಡ ಪ್ರಶ್ನಾವಳಿಗಳ ಬಗ್ಗೆ ಕೇಳಿ ಪೀಡಿಸುತ್ತಿದ್ದಳು. ಹೀಗಾಗಿ ನನ್ನ ಸ್ನೇಹಿತೆ ಮಹಾಲಕ್ಷ್ಮಿಗೂ ಕೂಡ ನಾನು ವ್ಯಾಟ್ಸಪ್‌ನಲ್ಲಿ ಕಳಿಸಿದ್ದೆ. ಬಳಿಕ 18 ಪ್ರಶ್ನೆಗಳ 4 ಫೋಟೋಗಳನ್ನ ನನ್ನ ಮೊಬೈಲ್‌ನಿಂದ ಮಹಾಲಕ್ಷ್ಮಿ ಗೆ ವ್ಯಾಟ್ಸಪ್ ಮಾಡಿದ್ದೆ. ಬಳಿಕ ಮಹಾಲಕ್ಷ್ಮಿ ಆಕೆಯ ಸ್ನೇಹಿತ ರಾಮಕೃಷ್ಣಗೆ ಪ್ರಶ್ನೆಗಳನ್ನು ಫಾರ್ವರ್ಡ್ ಮಾಡಿದ್ದಳು. ನಂತರ ಪ್ರಶ್ನೆ ಪತ್ರಿಕೆ ಎಲ್ಲಾ ಕಡೆ ಸೋರಿಕೆಯಾಗಿದೆ ಎಂದು ನನ್ನ ಬಳಿ ತಿಳಿಸಿದ್ದ ಮಹಾಲಕ್ಷ್ಮಿ. ಬಳಿಕ ನಾಗರಾಜ್ ಮನೆಯಿಂದ ತಂದಿದ್ದ ಫೋಟೋ ಮತ್ತು ಕುಸುಮ ವಾಟ್ಸಪ್‌ನಲ್ಲಿ ಕಳಿಸಿದ್ದ ಮಾಹಿತಿಗಳನ್ನು ನನ್ನ ಮೊಬೈಲ್ ನಿಂದ ಡಿಲೀಟ್ ಮಾಡಿದ್ದೆ ಎಂದು ತನ್ನ ಹೇಳಿಕೆಯನ್ನು ನೀಡಿರುವ ಸೌಮ್ಯಾ.
ಸದ್ಯ ಪ್ರಕರಣ ಸಂಬಂಧ ಆರೋಪಿತೆ ಸೌಮ್ಯ ಹೇಳಿಕೆ ಮೇರೆಗೆ ಮಹಾಲಕ್ಷ್ಮಿ ಮತ್ತು ಆಕೆಯ ಸ್ನೇಹಿತನ ಹೇಳಿಕೆ ಪಡೆದಿದ್ದಾರೆ. ಈ ಇಬ್ಬರ ಮೊಬೈಲ್ ಗಳನ್ನು ವಶಕ್ಕೆ ಪಡೆದಿರುವ ಮಲ್ಲೇಶ್ವರಂ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಆಯುಕ್ತ ಕಮಲ್‌ಪಂತ್ ಹೇಳಿಕೆ ಈ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್, “ಸಹಾಯಕ ಪ್ರಾಧ್ಯಾಪಕ ಪ್ರಶ್ನೆಪತ್ರಿಕೆ ಪರೀಕ್ಷೆಗೂ ಮುನ್ನ ವಾಟ್ಸಾಪ್ ನಲ್ಲಿ ಹರಿದಾಡಿತ್ತು. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದೂರು ನೀಡಿತ್ತು. ದೂರು ಪ್ರಕರಣ ದಾಖಲಿಸಿಕೊಂಡಿದ್ದ ಮಲ್ಲೇಶ್ವರ ಪೊಲೀಸರು ಈಗಾಗಲೇ ಮಹಿಳಾ ಅತಿಥಿ ಉಪನ್ಯಾಸಕಿಯನ್ನು ಬಂಧಿಸಲಾಗಿದೆ. ಮೈಸೂರು ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬಂಧಿತರಾಗಿರುವ ಎಲ್ಲರ ಸಂಪೂರ್ಣ ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ಒಬ್ಬರನ್ನು ಬಂಧಿಸಲಾಗಿದ್ದು ಮತ್ತೊಬ್ಬರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದರು.