ಕೆ.ಯು.ಡಬ್ಲು.ಜೆ ರಾಮನಗರ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ : ಇಂದು ಓದುಗನು ಪತ್ರಕರ್ತನಾಗಿದ್ದಾನೆ : ಶಿವಾನಂದ ತಗಡೂರು
ರಾಮನಗರ : ಪತ್ರಿಕೋದ್ಯಮ ನಿಂತ ನೀರಲ್ಲ. ಅನೇಕ ಮಜಲುಗಳನ್ನು ಕಂಡಿದೆ. ಈಗ ಸಾಮಾಜಿಕ ಜಾಲತಾಣಗಳು ಜಾಗೃತವಾಗಿವೆ. ಅವು ಉಪಕಾರಿ ಜತೆಗೆ ಅಪಾಯಕಾರಿಯೂ ಆಗಿದೆ. ಸುಳ್ಳು ಸುದ್ದಿಗಳು ಹಬ್ಬುತ್ತಿವೆ. ಇದು ಸಮಾಜದ ಸ್ವಾಸ್ಥೃಕ್ಕೆ ಕೆಡಕುಂಟು ಮಾಡುತ್ತಿವೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆ.ಯು.ಡಬ್ಲು.ಜೆ) ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಅಸಮಧಾನ ವ್ಯಕ್ತಪಡಿಸಿದರು.
ಇಲ್ಲಿನ ರಾಮ್ಘಡ್ ಸಭಾಂಗಣದಲ್ಲಿ ಕೆ.ಯು.ಡಬ್ಲು.ಜೆ ರಾಮನಗರ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು. ಇನ್ನೊಂದೆಡೆ ಕೆಲವು ದೃಶ್ಯ ಮಾಧ್ಯಮಗಳು ಟಿ.ಆರ್.ಪಿಗಾಗಿ ಮತ್ತು ಮುದ್ರಣ ಮಾಧ್ಯಮಗಳು ಪ್ರಸರಣಕ್ಕಾಗಿ ಸಮಾಜದ ವಿಘಟನೆಗೆ ಕಾರಣವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಓದುಗನು ಪತ್ರಕರ್ತನಾಗಬಲ್ಲ!
ಸ್ವಾತಂತ್ರೃ ಪೂರ್ವದಲ್ಲಿ ದಿನಪತ್ರಿಕೆಗಳು ಪ್ರಸರಣ ಸಂಖ್ಯೆ ಹೆಚ್ಚು ಇರಲಿಲ್ಲ. ಆದರೂ ಗಾಂಧಿ ಮುಂತಾದ ನಾಯಕರು ಮಾತುಗಳು ಇಡೀ ದೇಶವಾಸಿಗಳನ್ನು ತಲುಪುತ್ತಿತ್ತು. ಆದರೀಗ ದಿನ ಪೂರ್ತಿ ಮಾಧ್ಯಮಗಳು ವರದಿ ಮಾಡಿದರೂ ಜನತೆ ಮತ್ತು ಅಧಿಕಾರಿಗಳ ವಿಶ್ವಾಸವನ್ನು ಕಳೆದುಕೊಂಡಿವೆ. ಮೊದಲು ಜನರ ಸಮಸ್ಯೆ ಕುರಿತು ವರದಿ ಮಾಡಿದಾಗ ಮರು ದಿನವೇ ಜಿಲ್ಲಾಡಳಿತ ವಾರ್ತಾ ಇಲಾಖೆ ಮೂಲಕ ಸ್ಪಷ್ಟೀಕರಣ ಕಳುಹಿಸುತ್ತಿತ್ತು. ನೈಜ ವರದಿಗೆ ಸ್ಪಂದನೆ ಸಿಗುತ್ತಿತ್ತು. ಅಂತಹ ವಾತಾವರಣ ಮರುಕಳಿಸಬೇಕಾದರೆ ಸಮಾಜದ ಅಭಿವೃದ್ಧಿಗೆ ನೆರವು ನೀಡುವ ಕೆಲಸ ಪತ್ರಕರ್ತ ಮಾಡಬೇಕು ಎಂದು ಹೇಳಿದರು.
ಇಂದು ಸಾಮಾಜಿಕ ಜಾಲತಾಣಗಳು ಹೆಚ್ಚಾಗಿವೆ. ಅಪಘಾತ ಮುಂತಾದ ಪ್ರಕರಣಗಳನ್ನು ಮೊಬೈಲ್ನಲ್ಲೇ ಚಿತ್ರೀಕರಿಸಿ ಮಾಹಿತಿ ನೀಡುತ್ತಿದ್ದಾರೆ. ಇಂದು ಓದುಗನು ಸುದ್ದಿಗಾರನಾಗಿದ್ದಾನೆ. ಆದರೆ ಇದೇ ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿಗಳನ್ನು ಹರಡಿ ಸಮಾಜವನ್ನು ಅಪಾಯಕ್ಕೆ ದೂಡುತ್ತಿವೆ. ಸಾಮಾಜಿಕ ಜಾಲತಾಣಗಳು ಕೆಟ್ಟದಕ್ಕೂ ಬಳಕೆಯಾಗುತ್ತಿದೆ ಎಂದರು.
ಪತ್ರಕರ್ತರಿಗೆ ಮಾನವೀಯತೆಯೂ ಮುಖ್ಯ. ಯಾವ ಪತ್ರಕರ್ತನಿಗೂ ಎರಡು ಮತ ಚಲಾಯಿಸಲು ಸಾಧ್ಯವಿಲ್ಲ. ಸಾಮಾನ್ಯ ಪ್ರಜೆಗೆ ಇರುವ ಅವಕಾಶವೇ ಪತ್ರಕರ್ತರಿಗೂ ಇರುತ್ತದೆ. ಪತ್ರಕರ್ತರು ಸಹ ವ್ಯವಸ್ಥೆಯ ಜೊತೆಗೆ ಬೆಳೆಯುತ್ತಾರೆ. ಪತ್ರಕರ್ತರ ಬಗ್ಗೆ ನಕರಾತ್ಮಕ ಮತ್ತು ಸಕರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ. ನಿಜವಾದ ಪತ್ರಕರ್ತನಿಗೆ ಮಾನವೀಯತೆಯ ಗುಣಗಳು ಇರಬೇಕು. ಪತ್ರಕರ್ತರು ಎಷ್ಟೇ ದೊಡ್ಡದಾಗಿ ಬೆಳೆದರು. ಅವರಲ್ಲಿ ಮಾನವೀಯತೆ ಮೌಲ್ಯಗಳು ಉಳಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳು ಇಲ್ಲದವರು ಉತ್ತಮ ಪತ್ರಕರ್ತನಾಗಲು ಸಾಧ್ಯವಿಲ್ಲ ಎಂದರು.
ಪತ್ರಕರ್ತರು ತಮ್ಮ ಮಾಧ್ಯಮಗಳು ಮೂಲಕ ಸಾಮಾನ್ಯ ಜನರಲ್ಲಿ ಅನೇಕ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಿ ನೊಂದವರ ಕಣ್ಣೀರು ಒರೆಸಬೇಕು ಎಂದು ತಿಳಿಸಿದರು.

ಪತ್ರಕರ್ತರ ಸಂಘಕ್ಕೆ ನಿವೇಶನ ಕೊಡಿ – ಜಿಲ್ಲಾಡಳಿತಕ್ಕೆ ಮತ್ತಿಕೆರೆ ಜಯರಾಂ ಮನವಿ
ಸಂಘದ ರಾಜ್ಯ ಕಾರ್ಯದರ್ಶಿ ಮತ್ತಿಕೆರೆ ಜಯರಾಂ ಮಾತನಾಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮೀಸಲಿಟ್ಟಿದ್ದು, ಸ್ವಂತ ಕಟ್ಟಡ ನಿರ್ಮಾಣ ಬಾಕಿ ಉಳಿದಿದೆ. ಜಿಲ್ಲಾಡಳಿತ ನಿವೇಶನ ಸಮೆಸ್ಯೆಯನ್ನು ಪರಿಹರಿಸಿಕೊಡಬೇಕು. ಪತ್ರಕರ್ತರಿಗೆ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಕಾರ್ಡ್ ನೋಂದಣಿಯಲ್ಲಿರುವ ಕಠಿಣ ಮಾರ್ಗಸೂಚಿಗಳನ್ನು ಸಡಿಲಿಸಿ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ನಿವೇಶನ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳ ಭರವಸೆ :
ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಮಾತನಾಡಿ, ಪತ್ರಕರ್ತರಿಗೆ ಅಗತ್ಯವಿರುವ ಭವನ ನಿರ್ಮಾಣಕ್ಕೆ ನಿವೇಶನ ಸಮಸ್ಯೆ ಎದುರಾಗಿದ್ದರೆ, ಅದನ್ನು ಬಗೆಹರಿಸಿ ಕಾಯ್ದಿರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಜಿಪಂ ಸಿಇಒ ಇಕ್ರಂ ಮಾತನಾಡಿ, ಪತ್ರಕರ್ತರ ಭವನ ನಿರ್ಮಾಣಕ್ಕೆ ನಿವೇಶನ ಸಮಸ್ಯೆ ಇರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಸರ್ಕಾರಿ ಕಟ್ಟಡದಲ್ಲಿ ತಾತ್ಕಾಲಿಕ ಕಚೇರಿ ಒದಗಿಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ನೂತನ ಪದಾಧಿಕಾರಿಗಳು ಪತ್ರಕರ್ತರ ಶ್ರೇಯೋಭಿವೃದ್ಧಿ ಶ್ರಮಿಸುವ ಜವಾಬ್ದಾರಿಯಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ಮಾತನಾಡಿ, ಪತ್ರಕರ್ತರು ತಮ್ಮ ಕುಟುಂಬಗಳನ್ನು ಕೆಟ್ಟ ಘಟನೆಗಳಿಂದ ಕಾಪಾಡಿದಂತೆ ಸಮಾಜವನ್ನು ಕಾಪಾಡಬೇಕು. ಮಾಧ್ಯಮಗಳು ಸರಿಯಾಗಿ ಮಾರ್ಗದರ್ಶನ ಮಾಡಿದರೆ ಸಮಾಜವೂ ಸರಿ ದಾರಿಯಲ್ಲಿ ಸಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ಎಂ. ಆಳದಕಟ್ಟಿ, ಕೆಯುಡಬ್ಲ್ಯೂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ , ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ. ಸೂರ್ಯಪ್ರಕಾಶ್, ಪ್ರಧಾನ ಕಾರ್ಯದರ್ಶಿ ಟಿ. ಶಿವರಾಜು ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ :
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಮನಗರ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ – ಹಾಯ್ ರಾಮನಗರ –
ಇದನ್ನೂ ಓದಿ :
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಈಚೆಗೆ ನಿಧನರಾದ ಪತ್ರಕರ್ತ ರವಿ ಅವರಿಗೆ ಶ್ರದ್ಧಾಂಜಲಿ ಸಭೆ – ಹಾಯ್ ರಾಮನಗರ –
ಇದನ್ನೂ ಓದಿ :
ಈಚೆಗೆ ನಿಧನರಾದ ಪತ್ರಕರ್ತ ರವಿ ಕುಟುಂಬಕ್ಕೆ 11 ಲಕ್ಷ ಪರಿಹಾರ : ಎಸ್.ಕೆ. ಸಾಮ್ರಾಟ್ ಗೌಡ – ಹಾಯ್ ರಾಮನಗರ –
ಇದನ್ನೂ ಓದಿ :
ಅಪಘಾತದಲ್ಲಿ ಪತ್ರಕರ್ತ ರವಿ ಸಾವು – ಹಾಯ್ ರಾಮನಗರ –