ಅಂಜನಾಪುರದಲ್ಲಿ ಹೆಜ್ಜೇನು ದಾಳಿ ಹೆಣ ಬಿಟ್ಟು ಓಡಿದ ಜನ
ರಾಮನಗರ: ತಾಲ್ಲೂಕಿನ ಅಂಜನಾಪುರದಲ್ಲಿ ಗುರುವಾರ ಬೆಳಿಗ್ಗೆ ಶವಸಂಸ್ಕಾರದ ವೇಳೆ ಹೆಜ್ಜೇನು ದಾಳಿ ನಡೆಸಿದ್ದರಿಂದ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಜನರು ಶವವನ್ನು ಸ್ಥಳದಲ್ಲೇ ಬಿಟ್ಟು ದಿಕ್ಕಾಪಾಲಾಗಿ ಓಡಿ ಹೋಗಿದ್ದು, ಮತ್ತೆ ಮಧ್ಯಾಹ್ನ 3 ಗಂಟೆ ನಂತರ ಬಂದು ಅಂತ್ಯಸಂಸ್ಕಾರ ನಡೆಸಿದರು.
ಹೆಜ್ಜೇನು ದಾಳಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಐದಾರು ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಗಾಯಾಳುಗಳನ್ನು ಗ್ರಾಮಸ್ಥರು ಜಿಲ್ಲಾ ಆಸ್ಪತ್ರೆ ಹಾಗೂ ಸಮೀಪದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.
ಅಂಜನಾಪುರ ನಿವಾಸಿ ರಾಮಯ್ಯ (73) ಬುಧವಾರ ಸಂಜೆ ಮೃತಪಟ್ಟಿದ್ದರು. ಗುರುವಾರ ಬೆಳಿಗ್ಗೆ 11ರ ಸುಮಾರಿಗೆ ಗ್ರಾಮದ ಜಮೀನಿನಲ್ಲಿ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಾಗ ಹೆಜ್ಜೇನು ದಾಳಿ ನಡೆಸಿದ್ದವು. ಶವಸಂಸ್ಕಾರಕ್ಕೆ ಬಂದವರೆಲ್ಲ ಓಡಿಹೋದ ಕಾರಣ ಶವ ಹಲವು ತಾಸು ಜಮೀನಿನಲ್ಲೇ ಉಳಿದಿತ್ತು.