ಕೋವಿಡ್ ಸೋಂಕು ಹರಡದಂತೆ ಮುಂಜಾಗೃತೆ ವಹಿಸಿ : ಡಾ. ಅವಿನಾಶ್ ಮೆನನ್ ರಾಜೇಂದ್ರನ್
ರಾಮನಗರ : ಕೋವಿಡ್-19 ನಾಲ್ಕನೇ ಅಲೆ ಇತ್ತೀಚಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಾಗಿ ಸೋಂಕು ಹರಡದಂತೆ ಅಧಿಕಾರಿಗಳು ಸೂಕ್ತ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.
ಜಿಲ್ಲಾಡಳಿತ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೋವಿಡ್ ನಿಯಂತ್ರಣ ಮುಂಜಾಗ್ರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೋನಾ 4ನೇ ಅಲೆ ಕುರಿತಂತೆ ತೆಗೆದುಕೊಂಡ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿದರು.
4ನೇ ಅಲೆಯನ್ನು ಎದುರಿಸಲು ಅವಶ್ಯವಿರುವ ಮಾಸ್ಕ್, ಸ್ಯಾನಿಟೈಸರ್ ಮತ್ತು ಔಷಧಿ ಸಾಮಗ್ರಿಗಳನ್ನು ಅಗತ್ಯ ಪ್ರಮಾಣದಲ್ಲಿ ಸಂಗ್ರಹ ಮಾಡಿಕೊಳ್ಳಲು ಸೂಚನೆ ಕೊಟ್ಟರು.
ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಕಾಲಕಾಲಕ್ಕೆ ಅಗತ್ಯ ಸೂಚನೆಗಳನ್ನು ಪಾಲನೆ ಮಾಡಲು ತಿಳಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರಿಗೆ ಮನವಿಃ ಕೋವಿಡ್ ತಡೆಗೆ ಮಾಸ್ಕ್ ಕೂಡ ರಾಮಭಾಣವಿದ್ದಂತೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಮಾಸ್ಕ್ ಧರಿಸದೇ ಇದ್ದರೆ ದಂಡವಿಧಿಸಲು ಕ್ರಮ ವಹಿಸಲಾಗುವುದು. ಹೀಗಾಗಿ ಸಾರ್ವಜನಿಕರು ಕಡ್ಡಾಯ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲನೆ ಮಾಡಿ ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದರು.
ಕೋವಿಡ್ ನಾಲ್ಕನೇ ಅಲೆಯ ನಿಯಂತ್ರಿಸುವ ನಿಟ್ಟಿನಲ್ಲಿ ಜನರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ದೈಹಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಸ್ಯಾನಿಟೈಸರ್ ಬಳಕೆಮಾಡಬೇಕು ಎಂದು ತಿಳಿಸಿದರು.
‘ಕೋವಿಡ್ ಪ್ರಕರಣಗಳು ಹೆಚ್ಚಳವಾಗದಂತೆ ತಡೆಯಲು ಜಿಲ್ಲಾಡಳಿತ ತೆಗೆದುಕೊಂಡಿರುವ ನಿಯಂತ್ರಣ ಕ್ರಮಗಳಿಗೆ ಜಿಲ್ಲೆಯ ಸಾರ್ವಜನಿಕರ ಸಹಕಾರ ಅಗತ್ಯ. ಪರಿಸ್ಥಿತಿ ಗಂಭೀರ ಹಂತ ತಲುಪುವ ಮೊದಲೇ ಸೋಂಕು ಹರಡದಂತೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಲಸಿಕಾ ಅಭಿಯಾನ :
ಈಗಾಗಲೇ ಕೋವಿಡ್-19 4ನೇ ಅಲೆಯ ಹಿನ್ನಲೆಯಲ್ಲಿ ಪ್ರಕರಣಗಳು ಸಕ್ರಿಯವಾಗಿ ಕಂಡು ಬರುತ್ತಿದ್ದು, ಆದ್ದರಿಂದ ಎಲ್ಲಾ ಆರೋಗ್ಯ ಕಾರ್ಯಕರ್ತೆಯರು, ಮುಂಚೂಣಿ ಕಾರ್ಯಕರ್ತೆಯರು, ಆರೋಗ್ಯ ಸಮಸ್ಯೆ ಹೊಂದಿರುವ 45 ರಿಂದ 59 ವರ್ಷದೊಳಗಿನವರು ಹಾಗೂ 60 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರು 4ನೇ ಅಲೆಯ ಸೋಂಕಿನಿಂದ ರಕ್ಷಿಸಿಕೊಳ್ಳಲು ತಪ್ಪದೇ ಮುನ್ನೆಚ್ಚರಿಕೆ ಡೋಸ್ ಅನ್ನು ತೆಗೆದುಕೊಳ್ಳುವುದು. ಆರೋಗ್ಯ ಕಾರ್ಯಕರ್ತೆಯರು ಎಲ್ಲಾ ಗ್ರಾಮಗಳಲ್ಲಿನ ಅರ್ಹ ಫಲಾನುಭವಿಗಳಿಗೆ ಜಾಗೃತಿಯನ್ನು ಮೂಡಿಸಿ ಪ್ರತಿ ಬುಧವಾರ ನಡೆಯುವ ಹಳ್ಳಿ ಕ್ಯಾಂಪ್ ಗೆ ಕರೆತಂದು ಮುನ್ನೆಚ್ಚರಿಕೆ ಲಸಿಕೆಯನ್ನು ಹಾಕಿಸುವುದು ಹಾಗೂ ಇದಲ್ಲದೇ ಜಿಲ್ಲೆಯಲ್ಲಿನ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಮಟ್ಟದ ಆಸ್ಪತ್ರೆ ಹಾಗೂ ಎಲ್ಲಾ ನಗರ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿನಿತ್ಯ ಪಡೆಯಬಹುದಾಗಿದ್ದು, ಪ್ರತಿ ಬುಧವಾರ ಕೋವಿಡ್-19 ಲಸಿಕಾ ಮೇಳವನ್ನು ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಹಳ್ಳಿಗಳಲ್ಲಿ ನಡೆಸಲಾಗುವುದು.
ಮುನ್ನೆಚ್ಚರಿಕೆ ಡೋಸ್‌ಗೆ ತೆಗೆದುಕೊಳ್ಳಬೇಕಾದ ಕ್ರಮಗಳು :
ಕೋವಿಡ್-19 2ನೇ ಡೋಸ್ ಪಡೆದ 9 ತಿಂಗಳುಗಳ ನಂತರ ಮುನ್ನೆಚ್ಚರಿಕೆ ಡೋಸ್ ಅನ್ನು ತಪ್ಪದೇ ಪಡೆದುಕೊಳ್ಳುವುದು.
ಕೋವಿಡ್-19 ಪಾಸಿಟಿವ್ ಬಂದು 3 ತಿಂಗಳ ನಂತರ ಮುನ್ನೆಚ್ಚರಿಕೆ ಲಸಿಕೆಯನ್ನು ಪಡೆಯುವುದು.
ರಾಮನಗರ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಲಸಿಕೆಯನ್ನು ಪಡೆಯಲು ಇನ್ನು 1,36,6674 ಫಲಾನುಭವಿಗಳು ಬಾಕಿ ಇದ್ದು, ಎಲ್ಲಾ ಅರ್ಹ ಫಲಾನುಭವಿಗಳು ಆದಷ್ಟು ಬೇಗ ಮುನ್ನೆಚ್ಚರಿಕೆ ಲಸಿಕೆಯನ್ನು ಪಡೆದುಕೊಳ್ಳುವಂತೆ ಕೋರಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರಮೇಶ್ ಟಿ.ಕೆ, ಉಪವಿಭಾಗಾಧಿಕಾರಿ ಮಂಜುನಾಥ್, ರಾಮನಗರ ತಹಸೀಲ್ದಾರ್ ಎಂ ವಿಜಯ್ ಕುಮಾರ್, ರಾಮನಗರ ನಗರಸಭೆ ಆಯುಕ್ತ ನಂದಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ ನಿರಂಜನ್, ಆರ್ ಸಿ ಎಚ್ ಅಧಿಕಾರಿ ಡಾ. ಪದ್ಮ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಶಿಧರ್ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.