ಚನ್ನಪಟ್ಟಣ : ಒಂದೇ ದಿನ 3 ತಹಶೀಲ್ದಾರ್ ಬದಲಾವಣೆ!
ಒಂದು ದಿನ ಕಳೆಯುವಷ್ಟರಲ್ಲಿ ತಾಲ್ಲೂಕಿನಲ್ಲಿ ಮೂವರು ತಹಶೀಲ್ದಾರ್‌ಗಳ ಬದಲಾವಣೆಯಾದಂತಾಗಿದೆ. ಶುಕ್ರವಾರ ಬೆಳಿಗ್ಗೆ ನಾಗೇಶ್, ಸಂಜೆ ಸುದರ್ಶನ್, ಶನಿವಾರ ಸಂಜೆಯಷ್ಟರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಎಸ್‌ಎಫ್‌ಸಿಯಲ್ಲಿ ಗ್ರೇಡ್–2 ತಹಶೀಲ್ದಾರ್ ಆಗಿದ್ದ ಹರ್ಷವರ್ಧನ್ ತಾಲ್ಲೂಕಿನ ತಹಶೀಲ್ದಾರ್ ಆಗುವುದ ರೊಂದಿಗೆ ಇತಿಹಾಸ ಸೃಷ್ಟಿಯಾದಂತಾಗಿದೆ.
ಚನ್ನಪಟ್ಟಣ : ತಾಲ್ಲೂಕಿನ ತಹಶೀಲ್ದಾರ್ ಆಗಿ ಶುಕ್ರವಾರ ಸಂಜೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದ ಬಿ.ಕೆ. ಸುದರ್ಶನ್ ಅವರನ್ನು ಕೇವಲ 24 ಗಂಟೆಯೊಳಗೆ ಎತ್ತಂಗಡಿ ಮಾಡಲಾಗಿದ್ದು, ನೂತನ ತಹಶೀಲ್ದಾರ್ ಆಗಿ ಜಿ.ಪಿ. ಹರ್ಷವರ್ಧನ್ ಅವರನ್ನು ನೇಮಿಸಿ ಸರ್ಕಾರದ ಅಧೀನ ಕಾರ್ಯದರ್ಶಿ (ಕಂದಾಯ ಇಲಾಖೆ) ಜಿ.ಎನ್. ಸುಶೀಲಾ ಆದೇಶ ಹೊರಡಿಸಿದ್ದಾರೆ.
ಇದರೊಂದಿಗೆ ಒಂದು ದಿನ ಕಳೆಯುವಷ್ಟರಲ್ಲಿ ತಾಲ್ಲೂಕಿನಲ್ಲಿ ಮೂವರು ತಹಶೀಲ್ದಾರ್‌ಗಳ ಬದಲಾವಣೆಯಾದಂತಾಗಿದೆ. ಶುಕ್ರವಾರ ಬೆಳಿಗ್ಗೆ ನಾಗೇಶ್, ಸಂಜೆ ಸುದರ್ಶನ್, ಶನಿವಾರ ಸಂಜೆಯಷ್ಟರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಎಸ್‌ಎಫ್‌ಸಿಯಲ್ಲಿ ಗ್ರೇಡ್–2 ತಹಶೀಲ್ದಾರ್ ಆಗಿದ್ದ ಹರ್ಷವರ್ಧನ್ ತಾಲ್ಲೂಕಿನ ತಹಶೀಲ್ದಾರ್ ಆಗುವುದ ರೊಂದಿಗೆ ಇತಿಹಾಸ ಸೃಷ್ಟಿಯಾದಂತಾಗಿದೆ.
ಎರಡು ವರ್ಷಗಳಿಂದ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಾಗೇಶ್‌ರನ್ನು ಏ. 8ರಂದು ಸಂಜೆ ವರ್ಗಾವಣೆಗೊಳಿಸಿ ಸರ್ಕಾರದ ಅಂದಿನ ಅಧೀನ ಕಾರ್ಯದರ್ಶಿ (ಕಂದಾಯ ಇಲಾಖೆ) ಎಂ.ಎಸ್. ರಶ್ಮಿ ಆದೇಶ ಹೊರಡಿಸಿದ್ದರು. ಅವರ ಜಾಗಕ್ಕೆ ಸುದರ್ಶನ್ ಅವರನ್ನು ನಿಯುಕ್ತಿಗೊಳಿಸಲಾಗಿತ್ತು. ನಂತರ ಅಂದು ರಾತ್ರಿಯೇ ನಾಗೇಶ್‌ರನ್ನು ವರ್ಗಾವಣೆ ಮಾಡಿದ್ದ ಆದೇಶವನ್ನು ಹಿಂಪಡೆದಿರುವುದಾಗಿ ರಶ್ಮಿ ಮರು ಆದೇಶ ಹೊರಡಿಸಿದ್ದರು.
ಮತ್ತೆ ಶುಕ್ರವಾರ (ಏ.29) ನಾಗೇಶ್‌ರನ್ನು ಎತ್ತಂಗಡಿ ಮಾಡಿ ಆ ಸ್ಥಾನಕ್ಕೆ ಸುದರ್ಶನ್‌ರನ್ನು ಹಾಕಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಎನ್. ಸುಶೀಲಾ ಆದೇಶ ಹೊರಡಿಸಿದ್ದರು. ಸುದರ್ಶನ್ ಶುಕ್ರವಾರ ಸಂಜೆ ಅಧಿಕಾರ ವಹಿಸಿಕೊಂಡಿದ್ದರು. ಶನಿವಾರ ಬೆಳಿಗ್ಗೆಯಿಂದ ಅಧಿಕಾರಿಗಳ ಸಭೆಯನ್ನೂ ನಡೆಸಿದ್ದರು. ಹಲವಾರು ಮಂದಿ ಅವರನ್ನು ಅಭಿನಂದಿಸಿದ್ದರು. ಶನಿವಾರ ಸಂಜೆಯಾಗುವಷ್ಟರಲ್ಲಿ ಅವರನ್ನು ಎತ್ತಂಗಡಿ ಮಾಡಿರುವ ಆದೇಶವನ್ನು ಸುಶೀಲಾ ಅವರೇ ಹೊರಡಿಸಿದ್ದು, ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ಕೇವಲ ಒಂದೇ ದಿನದಲ್ಲಿ ತಹಶೀಲ್ದಾರ್‌ಗಳ ಬದಲಾವಣೆ ವಿಚಾರದ ಹಿಂದಿನ ಕೈಗಳು ಶಾಸಕ ಎಚ್.ಡಿ. ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಎನ್ನುವುದು ಜಗಜ್ಜಾಹೀರಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿತವಾಗುತ್ತಿದೆ.
ಕುಮಾರಸ್ವಾಮಿ ಅವರ ಆಪ್ತರಾಗಿದ್ದ ನಾಗೇಶ್‌ರನ್ನು ವರ್ಗಾವಣೆ ಮಾಡಿಸಲು ಯೋಗೇಶ್ವರ್ ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ಅದರಲ್ಲಿ ಎರಡು ಬಾರಿ ಸಫಲತೆ ಕಂಡರೂ ಕೇವಲ ಕೆಲವೇ ಗಂಟೆಗಳಲ್ಲಿ ವಿಫಲತೆಯನ್ನೂ ಕಂಡಂತಾಗಿದೆ.
ಕುಮಾರಸ್ವಾಮಿ ತಮ್ಮ ಪ್ರಭಾವ ಬಳಸಿ ನಾಗೇಶ್‌ರನ್ನು ಇಲ್ಲಿಯೇ ಉಳಿಸಿಕೊಂಡಿದ್ದರು. ಕೊನೆಗೆ ನಾಗೇಶ್ ಎತ್ತಂಗಡಿಯಾದರೂ ಯೋಗೇಶ್ವರ್ ಆಪ್ತ ಸುದರ್ಶನ್ ಅವರನ್ನು ಎತ್ತಂಗಡಿ ಮಾಡಿಸುವಲ್ಲಿ ಸಫಲರಾಗಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಶುಕ್ರವಾರ ಸಂಜೆ ಸುದರ್ಶನ್ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಾಗ ಯೋಗೇಶ್ವರ್ ಅಭಿಮಾನಿಗಳು ‘ಇದು ಯೋಗೇಶ್ವರ್ ಜಯ’ ಎಂದು ಹೇಳಿಕೊಂಡಿದ್ದರು. ಈಗ ಶನಿವಾರ ಸುದರ್ಶನ್ ಎತ್ತಂಗಡಿಯಾದ ನಂತರ ಕುಮಾರಸ್ವಾಮಿ ಅಭಿಮಾನಿಗಳು ‘ಇದು ಕುಮಾರಣ್ಣನ ಅಬ್ಬರ’ ಎಂದು ಹೇಳಿಕೊಂಡಿದ್ದಾರೆ.
ಅಲ್ಲೇ ಕೆಲಸ ಮಾಡಬೇಕೆಂಬ ಹಠ ಯಾಕೆ?: ಎಚ್‌ಡಿಕೆ ಪ್ರಶ್ನೆ
ರಾಮನಗರ: ‘ಚನ್ನಪಟ್ಟಣ ತಹಶೀಲ್ದಾರ್ ವಿಚಾರದಲ್ಲಿ ಸರ್ಕಾರ ತನ್ನ ನಿರ್ಧಾರ ಕೈಗೊಂಡಿದೆ. ಆದರೆ, ಆ ವ್ಯಕ್ತಿಗೆ ಅಲ್ಲೇ ಕೆಲಸ ಮಾಡಬೇಕು ಎನ್ನುವ ಹಠ ಏಕೆ’ ಎಂದು ಚನ್ನಪಟ್ಟಣ ಶಾಸಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ತಹಶೀಲ್ದಾರ್ ವರ್ಗಾವಣೆ ಕುರಿತು ಅವರು ಪ್ರತಿಕ್ರಿಯೆ ನೀಡಿದ ಅವರು, ‘ನಾನು ಮುಖ್ಯಮಂತ್ರಿ ಆಗಿದ್ದಾಗ ಈ ವ್ಯಕ್ತಿಯನ್ನು ನಾನೇ ಕ್ಷೇತ್ರಕ್ಕೆ ನಿಯೋಜನೆ ಮಾಡಿಸಿದ್ದೆ. ಆದರೆ ನಂತರದಲ್ಲಿ ದೂರುಗಳು ಬಂದ ಕಾರಣ ಬೇರೆಡೆಗೆ ವರ್ಗಾವಣೆ ಮಾಡಿಸಿದೆ. ಆಗಿನಿಂದಲೂ ಮತ್ತೆ ತಹಶೀಲ್ದಾರ್ ಆಗಿ ಬರಲು ಆ ವ್ಯಕ್ತಿ ಹಠ ಮಾಡುತ್ತಿದ್ದಾರೆ’ ಎಂದು ದೂರಿದರು.
‘ನಿನ್ನೆ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಹಾರ–ತುರಾಯಿ ಹಾಕಿಸಿಕೊಂಡು ಮೆರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಸಿದ್ದಾರೆ. ಅಧಿಕಾರಿಗಳು ರಾಜಕಾರಣ ಮಾಡಬಾರದು. ಜನರ ಕೆಲಸ ಮಾಡಬೇಕು’ ಎಂದರು.