ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ? ನಾಯಕತ್ವ ಬದಲಾವಣೆ ಬಿಜೆಪಿಯ ಶಕ್ತಿ, ಹೊಸ ಮುಖಗಳಿಗೆ ಮನ್ನಣೆ : ಬಿ ಎಲ್ ಸಂತೋಷ್

ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಈ ರೀತಿ ಹೇಳಿಕೆ ಈ ರೀತಿ ಹೇಳಿಕೆ ನೀಡಿರುವುದು ಭಾರೀ ಕುತೂಹಲ ಹುಟ್ಟಿಸಿದೆ.

ಮೈಸೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಬದಲಾವಣೆಯ ಗುಸುಗುಸು ಮಾತು ಕೇಳಿಬರುತ್ತಿದೆ. ರಾಜ್ಯ ಸಚಿವ ಸಂಪುಟದಲ್ಲಿ, ರಾಜ್ಯ ಬಿಜೆಪಿ ನಾಯಕತ್ವದಲ್ಲಿ ಮತ್ತಷ್ಟು ಮಹತ್ತರ ಬದಲಾವಣೆಯಾಗುತ್ತದೆಯೇ ಎಂಬ ಸಂದೇಹ ಉಂಟಾಗಿದೆ. ಅದಕ್ಕೆ ಕಾರಣ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಹೇಳಿಕೆ. 

ನಾಯಕತ್ವ ಬದಲಾವಣೆಯೇ ಬಿಜೆಪಿಗೆ ಶಕ್ತಿಯಾಗಿದೆ. ಈ ಪ್ರಯೋಗ ಗುಜರಾತ್‍ನಲ್ಲೂ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಈ ಮಾತುಗಳಿಗೆ ಹಲವು ರೆಕ್ಕೆಪುಕ್ಕಗಳು ಹುಟ್ಟಿಕೊಳ್ಳುತ್ತಿವೆ. ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ ಸಂಬಂಧ ನಗರದ ಖಾಸಗಿ ಹೋಟೆಲ್‌ನಲ್ಲಿ ನಿನ್ನೆ ಶನಿವಾರ ರಾತ್ರಿ ನಡೆದ ಪ್ರಮುಖರ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. 

ಬಿಜೆಪಿಯಲ್ಲಿ ಹಾಲಿ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ನಡೆಸುತ್ತೇವೆ. ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ ಎಂದಿದ್ದಾರೆ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೆ ಟಿಕೆಟ್ ನೀಡಲಿಲ್ಲ. ಗುಜರಾತ್ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದಿರುವವರನ್ನು ನಿವೃತ್ತಿ ಮಾಡಿದ್ದೇವೆ. ಹೊಸ ಕಾರ್ಯಕರ್ತರಿಗೆ ಟಿಕೇಟ್ ಕೊಟ್ಟು ಅಧಿಕಾರಕ್ಕೇರಿದ್ದೇವೆ. ಬಿಜೆಪಿಯಲ್ಲಿ ಮಾತ್ರ ಇಂತಹ ಪ್ರಯೋಗಗಳು ನಡೆಯುತ್ತವೆ ಎಂದು ಹೇಳಿದ್ದಾರೆ. 

ಕಾಲ ಕಾಲಕ್ಕೆ ತಕ್ಕಂತೆ ಸಮಾಜದ ಬದಲಾವಣೆಗೆ ಸ್ಪಂದಿಸಿ ಪರಿಷ್ಕರಣೆಯಾಗದಿದ್ದಲ್ಲಿ ಅಂತಹ ಪಕ್ಷ ನಾಶವಾಗಲಿದೆ. ‘ಬದಲಾವಣೆಗೆ ತಕ್ಕಂತೆ ಬಿಜೆಪಿ ಬದಲಾಗುತ್ತದೆ. ಆದರೆ, ಕಾಂಗ್ರೆಸ್‌ ಹಾಗೆಯೇ ಇದ್ದು, ಯುವನಾಯಕರು ಯಾರು ಎಂದರೆ ಸೋನಿಯಾಗಾಂಧಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಎನ್ನುತ್ತಾರೆ. ಆದರೆ, ಬಿಜೆಪಿಯಲ್ಲಿ ಇಂತಹ ಉದಾಹರಣೆಗಳು ವಿರಳ. ಕಾರ್ಯಕರ್ತರೇ ನಾಯಕರಾಗುವ ಅವಕಾಶ ಇಲ್ಲಿದೆ. ಹಾಗಾಗಿಯೇ, ಬಿಜೆಪಿ ಗಟ್ಟಿಯಾಗುತ್ತಿದ್ದರೆ, ಕಾಂಗ್ರೆಸ್‌ ಅವಸಾನದ ಅಂಚನ್ನು ತಲುಪಿದೆ. ಇದರಿಂದಲೇ ಅನೇಕ ನಾಯಕರು ಬಿಜೆಪಿಯತ್ತ ಮುಖಮಾಡಿದ್ದಾರೆ ಎಂಬುದು ಬಿ ಎಲ್ ಸಂತೋಷ್ ಅವರ ವಿವರಣೆಯಾಗಿದೆ.

10 ವರ್ಷಗಳ ಹಿಂದಿನ ಚುನಾವಣೆಗೂ ಇಂದಿಗೂ ವ್ಯತ್ಯಾಸಗಳಿವೆ. ಈ ಹಿಂದೆ ಪ್ರಚಾರ ಮಾಡುತ್ತಿದ್ದಂತೆ ಈಗಲೂ ಮಾಡಿದರೆ, ಹಿಂದೆ ನಡೆಸಿದಂತೆ ಈಗಲೂ ಅಧಿಕಾರ ನಡೆಸಿದರೆ ಗೆಲ್ಲುವುದು ಕಷ್ಟ. ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಲ್ಲಿ ಕಳೆದ 32 ವರ್ಷಗಳಲ್ಲಿ ಇಬ್ಬರು ವ್ಯಕ್ತಿಗಳಷ್ಟೇ ಇದ್ದರು. ಆದರೆ, ಬಿಜೆಪಿಯಲ್ಲಿ ಎಷ್ಟೋ ಮಂದಿ ಅಧ್ಯಕ್ಷರಾದರು. ರಾಜಕೀಯದಲ್ಲಿ ಉಳಿಯಬೇಕು ಎಂದರೆ ಅಧಿಕಾರ ಹಂಚಿಕೆಯಾಗಬೇಕು ಎಂದರು. 

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಭಾಗದ 11 ಸ್ಥಾನದಲ್ಲಿ ಕನಿಷ್ಠ 8 ಸ್ಥಾನವಾದರೂ ಗೆಲ್ಲಬೇಕು. ಇಂತಹವರಿಗೆ ಟಿಕೆಟ್‌ ಕೊಡಿ ಎಂದು ಕೇಳಿ ಅವರ ಹಿಂದೆಯೇ ಓಡಾಡಬೇಡಿ. ಯಾರಿಗೆ ಟಿಕೆಟ್‌ ಲಭಿಸಿದರೂ ಅವರ ಪರವಾಗಿ ಕೆಲಸ ಮಾಡಿ. ಮುಂದೊಂದು ದಿನ ನೀವೂ ನಾಯಕರಾಗುವಿರಿ ಎಂದು ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಿದರು.

Leave a Reply

Your email address will not be published. Required fields are marked *