ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು, ಇಲ್ಯಾರೂ ಗಂಡಸರಿಲ್ಲ ಎಂದು ಸವಾಲು ಹಾಕುತ್ತಾರೆ. ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು. ಹೀಗಾಗಿ ನಮಗೆ ಭಯ ಆಗುತ್ತಿದೆ : ಡಿ.ಕೆ. ಶಿವಕುಮಾರ್ ವ್ಯಂಗ್ಯ
ಬೆಂಗಳೂರು: ನನಗೆ ಬಂದಿರುವ ಮಾಹಿತಿ ಪ್ರಕಾರ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಸಚಿವರ ತಮ್ಮ ಅಂತಾ ಅಲ್ಲ, ಸಚಿವರ ಸಂಬಂಧಿ ಭಾಗಿಯಾಗಿದ್ದಾರೆ ಅನ್ನೋದು ಗೊತ್ತಾಗಿದೆ. ಇದು ಸತ್ಯವಿರಬಹುದು, ಇಲ್ಲದಿರಬಹುದು. ಒಂದೇ ತಾಲೂಕಿನ ಮೂವರು ಈ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ಅವರು ಆಸ್ತಿ ಮಾರಿ ಹಣ ನೀಡಿರುವುದು ಇಡೀ ಊರಿಗೆ ಗೊತ್ತಿರುವ ವಿಚಾರ. ಈ ವಿಚಾರವಾಗಿ ನಾನು ನೊಟೀಸ್ ಪಡೆಯುವ ಅಗತ್ಯವಿರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನಗೆ ಸಾಕಷ್ಟು ಕರೆಗಳು ಬರುತ್ತಿದ್ದು, ಆಯ್ಕೆಯಾಗಿದ್ದ ಅಭ್ಯರ್ಥಿ ತಂದೆ ಈ ರೀತಿ ಆಯ್ತಲ್ಲಾ ಎಂದು ಹಾಸಿಗೆ ಹಿಡಿದಿದ್ದಾರೆ. ಮತ್ತೊಬ್ಬರನ್ನು ಪ್ರಭಾವಿ ವ್ಯಕ್ತಿಗಳ ಪ್ರಭಾವ ಬಳಸಿ ಪೊಲೀಸರ ತನಿಖೆಯಿಂದ ಬಿಡಿಸಲಾಗಿದೆ. ಆ ಪ್ರಭಾವ ಬೀರಿದವರು ಯಾರು ಎಂಬುದು ನನಗೆ ಗೊತ್ತಿಲ್ಲ. ಈ ವಿಚಾರವಾಗಿ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.
ಸಿಐಡಿಯವರು ಎಷ್ಟು ಪ್ರಾಮಾಣಿಕವಾಗಿ ಈ ಪ್ರಕರಣದ ತನಿಖೆ ಮಾಡುತ್ತಾರೆ ಎಂಬುದು ಈಗ ಬಹಳ ಮುಖ್ಯ. ನಾವು ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದರೆ, ಮುಖ್ಯಮಂತ್ರಿಗಳು ನಾವು ರಭಸವಾಗಿ ಆಡಳಿತ ಮಾಡಿದರೆ ಶಿವಕುಮಾರ್ ಉಸಿರು ನಿಂತು ಹೋಗುತ್ತದೆ ಎಂದು ಹೇಳುತ್ತಾರೆ. ಮತ್ತೊಂದು ಕಡೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು, ಇಲ್ಯಾರೂ ಗಂಡಸರಿಲ್ಲ ಎಂದು ಸವಾಲು ಹಾಕುತ್ತಾರೆ. ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು. ಹೀಗಾಗಿ ನಮಗೆ ಭಯ ಆಗುತ್ತಿದೆ ಎಂದು ವ್ಯಂಗ್ಯವಾಡಿದರು.
ಸರ್ಕಾರ ತನಿಖೆ ಮಾಡಿ ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಪ್ರಕಟಿಸುವ ಮುನ್ನವೇ ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆಗೆ ಆದೇಶಿಸಿದ್ದಾರೆ. ಈ ನಿರ್ಧಾರದ ಮೂಲಕ ಸರ್ಕಾರ ಕಾನೂನು ವ್ಯಾಜ್ಯಕ್ಕೆ ದಾರಿ ಮಾಡಿಕೊಡುತ್ತಿದೆ. ಜತೆಗೆ ಪ್ರಭಾವಿಗಳನ್ನು ರಕ್ಷಿಸುವ ಹುನ್ನಾರವಿದೆ. ಪೊಲೀಸ್ ಇಲಾಖೆಗೆ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕರೇ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಪೊಲೀಸ್ ಮಹಾನಿರ್ದೇಶಕರು, ಗೃಹ ಸಚಿವರ ಹೇಳಿಕೆಗಳು ಭಿನ್ನವಾಗಿರುವುದು ಉತ್ತಮ ಆಡಳಿತವೇ? ಯಾರೋ ಕರೆ ಮಾಡಿದರು ಎಂದು ವಿಚಾರಣೆ ಮಾಡದೇ ಆರೋಪಿಗಳನ್ನು ಬಿಟ್ಟು ಕಳುಹಿಸುವುದು ಎಷ್ಟು ಸರಿ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಬದ್ಧತೆ ಇದ್ದಲ್ಲಿ ಈ ಪ್ರಕರಣದಲ್ಲಿ ಯಾರೆ ಭಾಗಿಯಾಗಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದು ಬಿಜೆಪಿ ಶಾಸಕರು, ನಾಯಕರು, ಮಂತ್ರಿಗಳಾಗಿರಲಿ, ಕಾಂಗ್ರೆಸ್, ಜೆಡಿಎಸ್ ನವರಾಗಿರಲಿ, ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.ಅಭ್ಯರ್ಥಿಯಿಂದ ಹಣ ಪಡೆದವರ ವಿಚಾರಣೆ ಮಾಡದಂತೆ ಒತ್ತಡ ಹಾಕಿದವರು ಯಾರು? ಎಂಬ ವಿಚಾರವಾಗಿ ಮುಖ್ಯಮಂತ್ರಿಗಳು ಮಾಹಿತಿ ಪಡೆಯಬೇಕು ಎಂದು ಒತ್ತಾಯಿಸಿದರು.