ಕೆಲಸ ಮುಗಿಸಿಕೊಂಡು ಮನೆಗೆ ಹೋಗುವುದಾಗಿ ಹೇಳಿದ್ದ ಲಗುನಾ ಕ್ಲಾತಿಂಗ್ ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿ ಲತಾ ಸಾತನೂರಿನ ಕೆರೆಯಲ್ಲಿ ಶವವಾಗಿ ಪತ್ತೆ

ಕನಕಪುರ: ತಾಲ್ಲೂಕಿನ ಲಗುನಾ ಕ್ಲಾತಿಂಗ್‌ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸು ಹೋಗುವುದಾಗಿ ಹೇಳಿ ಹೋದವರು ಸಾತನೂರಿನ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಏಳಗಳ್ಳಿ ಗ್ರಾಮದ ಸುರೇಶ್‌ ಅವರ ಪತ್ನಿ ಲತಾ (32) ಮೃತಪಟ್ಟವರಾಗಿದ್ದಾರೆ. ಇವರು ಮಳವಳ್ಳಿ ತಾಲ್ಲೂಕಿನ ದನಗೂರು ಗ್ರಾಮದವರಾಗಿದ್ದು ಏಳಗಳ್ಳಿ ಗ್ರಾಮದ ಸುರೇಶ್‌ ಅವರೊಂದಿಗೆ ವಿವಾಹವಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಶನಿವಾರ ಬೆಳಿಗ್ಗೆ ಲಗುನಾ ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಬಂದಿದ್ದು ಸಂಜೆ ಕೆಲಸ ಮುಗಿಸಿ ಕಂಪನಿಯ ವಾಹನದಲ್ಲಿ ಸಾತನೂರು ಮಾರ್ಗವಾಗಿ ಏಳಗಳ್ಳಿ ಹೋಗುತ್ತಿದ್ದರು. ‘ಸಾತನೂರು ಗ್ರಾಮದಲ್ಲಿ ಸ್ವಲ್ಪ ಕೆಲಸವಿದೆ. ಮನೆಗೆ ಸಾಮಾನು ಖರೀದಿ ಮಾಡಬೇಕಿದೆ. ತಡವಾಗಿ ಬರುತ್ತೇನೆ’ ಎಂದು ಜತೆಯಲ್ಲಿದ್ದವರಿಗೆ ಹೇಳಿ ವಾಹನದಿಂದ ಕೆಳಗೆ ಇಳಿದಿದ್ದಾರೆ.
ಸೋಮವಾರ ಬೆಳಿಗ್ಗೆ ಸಾತನೂರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿರುವ ಕೆರೆಯಲ್ಲಿ ಮಹಿಳೆಯೊಬ್ಬರ ಮೃತ ದೇಹ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಐ.ಡಿ ಕಾರ್ಡು ದೊರೆತಿದ್ದು, ಅದರ ಮಾಹಿತಿ ಮೇಲೆ ಗುರುತಿಸಲಾಗಿದೆ.
ಮೃತರ ತಂದೆ ಲಿಂಗಯ್ಯ ಸಾತನೂರು ಪೊಲೀಸ್‌ ಠಾಣೆಯಲ್ಲಿ ಮಗಳ ಸಾವಿಗೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಸಾತನೂರು ಸಬ್‌ ಇನ್‌ಸ್ಪೆಕ್ಟರ್‌ ರವಿಕುಮಾರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ನೀಡಿದ್ದಾರೆ. ಸೋಮವಾರ ಸಂಜೆ ವೇಳೆಗೆ ಏಳಗಳ್ಳಿ ಗ್ರಾಮದಲ್ಲಿ ಮೃತರ ಅಂತ್ಯ ಸಂಸ್ಕಾರ ನೆರವೇರಿತು. ಮೃತರ ಪತಿ ಸುರೇಶ್‌ ಅವರನ್ನು ಸಾತನೂರು ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *