ಬಿಡದಿ : ತಮ್ಮಣ್ಣನದೊಡ್ಡಿ ಸೇತುವೆ ಬಳಿ ರೈತರಿಂದ ಪ್ರತಿಭಟನೆ
ರಾಮನಗರ : ಬಿಡದಿ ಪುರಸಭಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂ ಸ್ವಾಧೀನಕ್ಕೆ ಒಳಪಟ್ಟಿರುವ ಭೂಮಿಗೆ ನಿಯಮಾವಳಿಯಂತೆ ಪರಿಹಾರ ನೀಡಬೇಕು ಅಲ್ಲಿಯವರೆಗೆ ಕೆಲಸ ನಿರ್ವಹಿಸಲು ಅವಕಾಶ ನೀಡುವುದಿಲ್ಲ ಎಂದು ನೂರಾರು ರೈತರು ಬುಧವಾರ ತಮ್ಮಣ್ಣನದೊಡ್ಡಿ ಬ್ರಿಡ್ಜ್ ಬಳಿ ಪ್ರತಿಭಟನೆ ನಡೆಸಿದರು.

ಕೃಷಿಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ಪುರಸಭಾ ವ್ತಾಪ್ತಿಗೆ ಬರುವ ಜಮೀನಿಗೆ ನೀಡಿರುವ ಪರಿಹಾರ ಸಮರ್ಪಕವಾಗಿಲ್ಲ. ಈಗಾಗಲೇ ಗ್ರಾಮ ಪಂಚಾಯಿತಿ 1:3 ನೀಡಲಾಗಿದೆ. ಪುರಸಭಾ ಪರಿಮಿತಿಯ ಸುಮಾರು 45 ಕ್ಕೂ ಹೆಚ್ಚು ರೈತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಕಳೆದ 6 ವರ್ಷಗಳಿಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದರು. ಯಾವುದೇ ಪ್ರಯೋಜನವಾಗಿಲ್ಲ. ನಿಗಧಿ ಮಾಡಿರುವ ಪರಿಹಾರ ಪಡೆದು ಹೆಚ್ಚಿನ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಆರ್ ವಿಟೇಷನ್ಗೆ ಮನವಿ ಸಲ್ಲಿಸಿದ್ದೇವೆ. ಅದರ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಸೂಕ್ತ ಪರಿಹಾರಕ್ಕೆ ಬಡ್ಡಿ ಸೇರಿಸಿ ರೈತರಿಗೆ ಪರಿಹಾರ ನೀಡುವಂತೆ ಆದೇಶ ಮಾಡಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶ ಪಾಲನೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಭೂಮಿ ಕಳೆದುಕೊಂಡ ರೈತರಾದ ಗೋವಿಂದಯ್ಯ, ಕುಮಾರ್, ರವಿಕುಮಾರ್, ಕೆಂಪಣ್ಣ, ಜಿಲ್ಲಾಧಿಕಾರಿಗಳ ಆದೇಶದಂತೆ ನಮಗೆ ಪರಿಹಾರ ನೀಡಿ ಕೆಲಸ ಮಾಡಿ ಎಂದು ಆಗ್ರಹಿಸಿದರು.
ಸ್ಥಳಕ್ಕೆ ತಹಸೀಲ್ದಾರ್ ವಿಜಯ್ ಕುಮಾರ್, ಡಿಓಎಸ್ಪಿ ಮೋಹನ್ ಕುಮಾರ್, ಬಿಡದಿ ವೃತ್ತ ನಿರೀಕ್ಷಕ ತಿಮ್ಮೇಗೌಡ, ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನ ಅಧಿಕಾರಿ ( ಎಸ್ ಎಲ್ ಓ) ಲೋಕೇಶ್ ಪ್ರಾಧಿಕಾರದ ಅಧಿಕಾರಿ ರೈತರ ಮನವೊಲಿಕೆ ಯತ್ನ ಮಾಡಿ ನಂತರ 2 ಗಂಟೆಗೆ ಜಿಲ್ಲಾಧಿಕಾರಿಗಳು ಮತ್ತು ಶಾಸಕರ ನೇತೃತ್ವದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಯಿತು.
ಸ್ಥಳದಲ್ಲಿ ಹೆಚ್ಚಿನ ಪೋಲೀಸ್ ಭದ್ರತೆ ನಿಯೋಜನೆ ಮಾಡಲಾಗಿತ್ತು.

ವರದಿ : ಪಾದ್ರಳ್ಳಿ ರಾಜು ಮೊ : 6360 905 062