ಅನಾಥ ಶವಗಳಿಗೆ “ಪ್ರೀತಿ”ಯ ಸಂಸ್ಕಾರ! ನಿರಾಶ್ರಿತರಗಾಗಿ “ಅಮ್ಮನ ಮಡಿಲು”
ನೊಂದವರ ನೆರವಿಗೆ ಧಾವಿಸುವ ಸಹೃದಯಿ ; ವಾತ್ಸಲ್ಯಮಯಿ ವನಿತೆ ಡಿ.ಎಂ. ಪ್ರೀತಿ
ರಾಮನಗರ : ನೊಂದವರ ನೆರವಿಗೆ ಧಾವಿಸುವ ಸಹೃದಯಿ, ಕರುಣಾಮಯಿ ಡಿ.ಎಂ. ಪ್ರೀತಿ ಅವರು. ಸ್ವತಃ ಕಷ್ಟದಲ್ಲಿದ್ದರೂ ಈ ಪ್ರೀತಿ ಅನಾಥ ಶವಗಳ ಸಂಸ್ಕಾರ ನೆರವೇರಿಸುವ ಜೊತೆಗೆ, ರಾಮನಗರದಲ್ಲಿ ಸಾವಿತ್ರಿಬಾಯಿ ಬಾಪುಲೆ ಟ್ರಸ್ಟ್ ಸ್ಥಾಪಿಸುವುದರ ಜೊತೆಗೆ, ನಿರಾಶ್ರಿತ ವೃದ್ಧರು ಹಾಗೂ ಅನಾಥರಿಗಾಗಿ “ಅಮ್ಮನ ಮಡಿಲು” ಅನಾಥಶ್ರಮ ತೆರೆಯುವ ಮೂಲಕ ಸದ್ದಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ವಿಶೇಷವಾಗಿ ಕ್ರೈಮ್ ಪ್ರಕರಣಗಳಲ್ಲಿ ಪರಿಚಯ ಸಿಗದ ಅನಾಥ ಶವಗಳ ಸಂಸ್ಕಾರ ನಡೆಸುತ್ತಿದ್ದಾರೆ. ರೈಲಿಗೆ ಸಿಲುಕಿ ಛಿದ್ರವಾದ ದೇಹಗಳಿರಲಿ, ನೀರಲ್ಲಿ ಮುಳುಗಿ ಕೊಳೆತು ನಾರುತ್ತಿರುವ ಶವವಾಗಲಿ ಯಾವುದನ್ನೂ ಲೆಕ್ಕಿಸದೇ ಅತ್ಯಂತ ಶ್ರದ್ಧೆಯಿಂದ ತಾವು ನಂಬಿದ ಕಾಯಕಕ್ಕೆ ಚ್ಯುತಿ ಬಾರದಂತೆ ಕೈಂಕರ್ಯ ಮಾಡುವ ರೀತಿಯಿಂದಲೇ ಜಿಲ್ಲೆಯ ಎಲ್ಲೆಡೆಯೂ ಡಿ.ಎಂ. ಪ್ರೀತಿ ಅವರು ಮನೆ ಮಾತಾಗಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಇವರ ನಿಷ್ಕಲ್ಮಷ ಸಮಾಜ ಸೇವೆ ಬಗ್ಗೆ ಮೆಚ್ಚುಗೆಯ ನುಡಿ ಕೇಳಿಬರುತ್ತಿದ್ದರೂ ಪ್ರಚಾರದ ಗೀಳಿಗೆ ಬೀಳದ ಇವರು ತಾವಾಯಿತು ತಮ್ಮ ಕಾಯಕವಾಯಿತು ಎಂಬಂತೆ ಎಲೆಮರೆಯಲ್ಲಿಯೇ ಉಳಿಯಲು ಬಯಸುತ್ತಾರೆ.

ಮೂಲತಃ ಮಂಡ್ಯ ಜಿಲ್ಲೆಯ ದಾಸೇಗೌಡ- ಪುಟ್ಟತಾಯಮ್ಮ ಅವರ ಸುಪುತ್ರಿ ಡಿ.ಎಂ.ಪ್ರೀತಿ ಅವರಿಗೆ ರೇವಂತ್ ಎಂಬ ಪುತ್ರನಿದ್ದಾನೆ.
ಸಣ್ಣ ವಯಸ್ಸಿನ ಮಗನ ಲಾಲನೆ-ಪಾಲನೆ ಜೊತೆಗೆ ಪ್ರೀತಿ ಅವರು ಯಾವುದೇ ಸಮಯದಲ್ಲಿ ಪೊಲೀಸ್ ಇಲಾಖೆ, ಆಟೋ ಚಾಲಕರು, ಆಂಬ್ಯುಲೆನ್ಸ್ ಕಡೆಯಿಂದ ಹಾಗೂ ತಮ್ಮದೇ ಆದ ಮೂಲಗಳಿಂದ ಅನಾಥ ಶವಗಳ ಸಂಸ್ಕಾರಕ್ಕೆ ಕರೆದರೂ ಹಸನ್ಮುಖಿಯಾಗಿಯೇ ಹಾಜರಾಗುತ್ತಾರೆ.

ಅನಾಥ ಶವಗಳ ಸಂಸ್ಕಾರ ಸೇವೆ ಮತ್ತು ಅನಾಥರ ಸೇವೆಗಾಗಿ ಅಮ್ಮನ ಮಡಿಲು ಆಶ್ರಮ ಸ್ಥಾಪಿಸುವ ಮೂಲಕ ಸಮಾನ ಮನಸ್ಕರೊಡನೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹಲವು ಸಂಘಟನೆಗಳಲ್ಲಿ ಸೇವೆ :
ಪ್ರಜಾ ಪರಿವರ್ತನಾ ವೇದಿಕೆಯ ರಾಮನಗರ ಜಿಲ್ಲಾಧ್ಯಕ್ಷರಾಗಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ, ರಾಮನಗರ ತಾಲ್ಲೂಕು ಸ್ತ್ರೀ ಶಕ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆಯಾಗಿ ಹೀಗೆ ಹಲವಾರು ಸಂಘ- ಸಂಸ್ಥೆಗಳಲ್ಲಿ ಮಹಿಳಾ ಸಬಲೀಕರಣದ ವಿಚಾರವಾಗಿ ಸಾಕಷ್ಟು ಸೇವೆಯನ್ನು ಪ್ರೀತಿ ಅವರು ಸಲ್ಲಿಸಿದ್ದಾರೆ.
ಮೂರು ತಿಂಗಳಲ್ಲಿ ಎಂಟು ಶವ ಸಂಸ್ಕಾರ :
ಕಳೆದ ಮೂರು ತಿಂಗಳಲ್ಲಿ ಎಂಟು ಅನಾಥಶವಗಳ ಸಂಸ್ಕಾರ ಮಾಡಿರುವ ಕುರಿತು ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡ ಪ್ರೀತಿ ಅವರು, ಮುಖ್ಯವಾಗಿ ಪೊಲೀಸ್ ಇಲಾಖೆಯವರ ಸಹಕಾರದಿಂದಾಗಿ ಪ್ರಮುಖವಾಗಿ ಅನಾಥ ಶವಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ.
ಉಳಿದಂತೆ, ಆಟೋ, ಆ್ಯಂಬುಲೆನ್ಸ್ ಚಾಲಕರು ಹಾಗೂ ನನ್ನ ಸೇವೆಯ ಬಗ್ಗೆ ಗೊತ್ತಿರುವ ಜನ ಸಾಮಾನ್ಯರಿಂದಲೂ ನಮಗೆ ಮಾಹಿತಿ ಗೊತ್ತಾಗುತ್ತದೆ. ಆಸ್ಪತ್ರೆಯೊಂದರಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುವ, ಸಮಾಜ ಸೇವಕಿ, ಆಪ್ತ ಗೆಳತಿ ಸೌಮ್ಯ, ಸ್ವತಃ ಪ್ರಗತಿಪರ ಕೃಷಿಕರೂ ಆಗಿರುವ ಕರ್ನಾಟಕ ರೈತಸಂಘ-ಹಸಿರುಸೇನೆ ರಾಜ್ಯಾಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್ ಸೇರಿದಂತೆ ಅನೇಕ ಸಮಾನ ಮನಸ್ಕರು ನನ್ನ ಸೇವೆಗೆ ಬೆನ್ನೆಲುಬಾಗಿ ನಿಂತು ಸಹಕಾರ ನೀಡುತ್ತಾರೆ.
ಅನಾಥ ಶವಗಳ ಸಂಸ್ಕಾರ ಹಾಗೂ ಅಮ್ಮನ ಮಡಿಲು ಅನಾಥಶ್ರಮದ ಸೇವೆ ಜೊತೆಗೆ, ಕೌಟುಂಬಿಕ ಆಪ್ತ ಸಮಾಲೋಚನೆ, ಸತಿ-ಪತಿ, ಅತ್ತೆ-ಸೊಸೆ, ಬಾಲ್ಯ ವಿವಾಹ ಹಾಗೂ ಮಕ್ಕಳ ಸಮಸ್ಯೆಗಳ ಬಗ್ಗೆಯೂ ಆಪ್ತ ಸಮಾಲೋಚನೆ ಮೂಲಕ ಕುಟುಂಬ ವ್ಯವಸ್ಥೆಯನ್ನು ಸದೃಢಗೊಳಿಸುವ ದಿಕ್ಕಿನಲ್ಲಿ ಸಮಾನ ಮನಸ್ಕರೊಡಗೂಡಿ ಸೇವೆ ಮಾಡುತ್ತಿದ್ದೇವೆ ಎನ್ನುತ್ತಾರೆ ಪ್ರೀತಿ.
ಡಿ.ಎಂ. ಪ್ರೀತಿ ಅವರ ಸಂಪರ್ಕ ಸಂಖ್ಯೆ : 89719 59199