ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿಗೆ ಎಂ.ಎಚ್.ರಂಜಿತ್ ಅಧ್ಯಕ್ಷ ; ಧನಲಕ್ಷ್ಮಿ ಉಪಾಧ್ಯಕ್ಷೆ : ಜೆಡಿಎಸ್-ಬಿಜೆಪಿ ಮುಖಂಡರ ಹೋರಾಟದ ಲಾಭ ಪಡೆದ ಕಾಂಗ್ರೆಸ್
ರಾಮನಗರ : ತಾಲೂಕಿನ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಕಾಂಗ್ರೆಸ್ ಬೆಂಬಲಿತ ಎಂ.ಎಚ್.ರಂಜಿತ್ ಅಧ್ಯಕ್ಷರಾಗಿ ಮತ್ತು ಬಿಜೆಪಿ ಬೆಂಬಲಿತ ಧನಲಕ್ಷ್ಮಿ ಉಪಾಧ್ಯಕ್ಷರಾಗಿ ಶನಿವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅದ್ಯಕ್ಷರಾಗಿದ್ದ ಪ್ರಕಾಶ್ ಮತ್ತು ಉಪಾಧ್ಯಕ್ಷರಾಗಿದ್ದ ಶೋಭಾ ಅವರುಗಳ ರಾಜೀನಾಮೆಯಿಂದ ತೆರವಾಗಿದ್ದ ಎರಡು ಸ್ಥಾನಗಳಿಗೆ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಚುನಾವಣೆ ನಡೆಯಿತು. ಚುನಾವಣಾ ಪ್ರಕ್ರಿಯೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ ಎಂ.ಎಚ್.ರಂಜಿತ್, ಮಹದೇವಯ್ಯ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಧನಲಕ್ಷ್ಮಿ, ಗೀತಾ, ಕೆಂಪರಾಜಮ್ಮ ನಾಮಪತ್ರ ಸಲ್ಲಿಸಿದ್ದರು. ಕೊನೆ ಕ್ಷಣದಲ್ಲಿ ಕೆಂಪರಾಜಮ್ಮ ತಮ್ಮ ನಾಮಪತ್ರ ವಾಪಸ್ಸು ಪಡೆದರು.
ನಂತರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಕಾಂಗ್ರೆಸ್ ಬೆಂಬಲಿತ ಎಂ.ಎಚ್.ರಂಜಿತ್ 11 ಮತಗಳು ಮತ್ತು ಉಪಾಧ್ಯಕ್ಷ ಸ್ಥಾನದ ಬಿಜೆಪಿ ಬೆಂಬಲಿತ ಧನಲಕ್ಷ್ಮಿ 11 ಮತಗಳನ್ನು ಪಡೆದು ವಿಜಯಿಶಾಲಿಯಾದರೆ, ಮಹದೇವಯ್ಯ ಮತ್ತು ಗೀತಾ ತಲಾ 9 ಮತಗಳನ್ನು ಪಡೆದು ಪರಾಭವಗೊಂಡರು. ಮಾಯಗಾನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಎಂ.ಎಚ್.ರಂಜಿತ್, ಉಪಾಧ್ಯಕ್ಷರಾಗಿ ಧನಲಕ್ಷ್ಮಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಎಪಿಎಂಸಿ ಕಾರ್ಯದರ್ಶಿ ತಾಸಿಮ್ ಮಿಕತ್‍ಖಾನ್ ಘೋಷಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯತಿಯ ಒಟ್ಟು 21 ಸದಸ್ಯ ಬಲವಿದ್ದು, 20 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಓರ್ವ ಸದಸ್ಯ ಎಂ.ಜೆ.ರಾಜಶೇಖರ್ ಗೈರಾಗಿದ್ದರು. ಚುನಾವಣೆ ವೇಳೆ ಹೆಚ್ಚಿನ ಪೋಲೀಸ್ ಮತ್ತು ಕೆಎಸ್‍ಆರ್‍ಪಿ ತುಕಡಿಯೊಂದಿಗೆ ಬಂದೂಬಸ್ತು ಮಾಡಲಾಗಿತ್ತು. ಸ್ಥಳದಲ್ಲಿ ಗ್ರಾಮಾಂತರ ವೃತ್ತ ಆರಕ್ಷಕ ನಿರೀಕ್ಷಕ ನರಸಿಂಹಮೂರ್ತಿ ಮೊಕ್ಕಂ ಹೂಡಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಲಾಭ:
ಸ್ಥಳೀಯ ಸಂಸ್ಥೆ ಚುನಾವಣೆ ಬಂದಂತೆಂದರೆ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿ ರಾಜಕೀಯವಾಗಿ ಪ್ರತಿಷ್ಟೆಯ ಕಣವಾಗಿ ನಿಲ್ಲುತ್ತದೆ. ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು ಗ್ರಾಮ ಪಂಚಾಯಿತಿ ಅದ್ಯಕ್ಷ ಗದ್ದುಗೆ ತಮ್ಮ ಬೆಂಬಲಿತರಿಗೆ ಸಿಗುವಂತೆ ರಣತಂತ್ರ ರೂಪಿಸುತ್ತಾರೆ. ಆದರೆ ಕಳೆದ ಒಂದು ವರ್ಷದ ಹಿಂದೆ ಪಂಚಾಯಿತಿಯಲ್ಲಿ ಬಿಡದಿ ಗ್ರೇಟರ್ ಸ್ಮಾರ್ಟ್‍ಸಿಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವರದರಾಜು ತಮ್ಮ ಬಿಜೆಪಿ ಬೆಂಬಲಿಗರನ್ನು ಆಯ್ಕೆ ಮಾಡಿಕೊಳ್ಳುವ ಮುಖೇನ ಕಾಂಗ್ರೆಸ್ ಸದಸ್ಯರೊಂದಿಗೆ ಮೈತ್ರಿ ನಡೆಸಿ ಅಧ್ಯಕ್ಷ ಗದ್ದುಗೆಯನ್ನು ಕಾಂಗ್ರೆಸ್ ಬೆಂಬಲಿತ ಪ್ರಕಾಶ್‍ಗೆ ನೀಡಿದ್ದರು.
ರಾಜಕೀಯ ಬೆಳವಣಿಗೆಯಲ್ಲಿ ಶನಿವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಿ.ನಾಗರಾಜು ಅವರು ಹೊಡಿದ ರಾಜಕೀಯ ಬಾಣದಿಂದ ಕಾಂಗ್ರೆಸ್‍ಗೆ ಲಾಭವಾಗಿದ್ದು, ಪಿ.ನಾಗರಾಜು ಅವರ ಬೆಂಬಲದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಗೀತಾ ಸಹ ಸೋಲುಂಡಿದ್ದಾರೆ. ಬಿಜೆಪಿ ಮುಖಂಡರು ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಮುಖಭಂಗ ಅನುಭವಿಸಿದ್ದಾರೆ. ಆದರೂ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿದ್ದು, ಇದರಿಂದ ಬಿಜೆಪಿಯ ವರದರಾಜು ಅವರಿಗೆ ಸ್ವಲ್ಪ ಹಿನ್ನಡೆಯಾದಂತಾಗಿದೆ.
ಒಟ್ಟಾರೆ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ರಾಜಕೀಯ ಹೈಡ್ರಾಮಾದಲ್ಲಿ ಅಧ್ಯಕ್ಷ ಅಧಿಕಾರ ಗದ್ದುಗೆ ಹಿಡಿಯಲು ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ನಡುವಿನ ಪ್ರಬಲ ಹೋರಾಟಗಳ ನಡುವೆ ಕಾಂಗ್ರೆಸ್ ತನ್ನ ನಾಜುಕು ರಾಜಕೀಯದಲ್ಲಿ ಅಧ್ಯಕ್ಷ ಗದ್ದುಗೆ ಹಿಡಿದು ನಗೆ ಬೀರಿದೆ ಎಂಬುದು ತೆರೆದ ಸತ್ಯವಾಗಿದ್ದು, ಈ ಹಿಂದೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಪ್ರಕಾಶ್ ಅದ್ಯಕ್ಷ ಗದ್ದುಗೆ ಹಿಡಿಯುವಲ್ಲಿ ಸಫಲರಾಗಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಬೆಂಬಲಿತ ರಂಜಿತ್ ಅಧ್ಯಕ್ಷ ಗದ್ದುಗೆ ಅಲಂಕರಿಸಿದ್ದಾರೆ.

ವರದಿ : ಪಾದ್ರಳ್ಳಿ ರಾಜು, ಮೊ : 9448745536