ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎಂ.ಎಚ್. ರಂಜಿತ್ ಅಧಿಕಾರ ಸ್ವೀಕಾರ : ಅಧಿಕಾರಿಗಳು-ಜನಪ್ರತಿನಿಧಿಗಳು ಹೊಂದಾಣಿಕೆಯಿಂದ ಕೆಲಸ ಮಾಡಿ : ಪಿ. ನಾಗರಾಜ್
ರಾಮನಗರ : ಗ್ರಾಮ ಪಂಚಾಯಿತಿಗೆ ಸಾರ್ವಜನಿಕರು ಆಗಮಿಸಿದಾಗ ಅವರಿಗೆ ಸ್ಪಂದಿಸುವ ಕೆಲಸ ಮಾಡಿ ಎಂದು ಕೆಎಂಪ್ ಮಾಜಿ ಅಧ್ಯಕ್ಷ ಪಿ.ನಾಗರಾಜು ಕಿವಿಮಾತು ಹೇಳಿದರು.
ತಾಲೂಕಿನ ಕಸಬಾ ಹೋಬಳಿ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನಡೆದ ನೂತನ ಅದ್ಯಕ್ಷರ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಹೊಂದಾಣಿಕೆಯಾಗಿ ಸಾರ್ವಜನಿಕರ ಕೆಲಸಗಳನ್ನು ಮಾಡಿದಾಗ ಮಾತ್ರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದರು.
ಅಧಿಕಾರದಲ್ಲಿ ಇರುವ ಸಮಯ ಮುಖ್ಯವಾಗುವುದಿಲ್ಲ. ಬದಲಿಗೆ ಸಿಕ್ಕ ಅವಧಿಯಲ್ಲಿ ಏನು ಕೆಲಸ ಮಾಡಿದೆ ಎಂಬುದು ಬಹಳ ಮುಖ್ಯವಾಗುತ್ತದೆ. ಆಗಾಗಿ ಸದಸ್ಯರು ಸಭೆಗಳಲ್ಲಿ ಉತ್ತಮ ನಿರ್ಣಯ ಕೈಗೊಂಡು ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರದ ಸವಲತ್ತುಗಳನ್ನು ಅರ್ಹ ಪಲಾನುಭವಿಗಳಿಗೆ ತಲುಪಿಸಿ ಎಂದು ಸಲಹೆ ನೀಡಿದರು.

ನೂತನ ಗ್ರಾಮ ಪಂಚಾಯಿತಿ ಅದ್ಯಕ್ಷ ಎಂ.ಎಚ್. ರಂಜಿತ್ ಮಾತನಾಡಿ ನನಗೆ ವಹಿಸಿರುವ ಜವಬ್ದಾರಿಯನ್ನು ಎಲ್ಲ ಸದಸ್ಯರ ಸಹಕಾರ ಪಡೆದು ಸಮರ್ಪಕವಾಗಿ ನಿರ್ವಹಿಸುವ ಕೆಲಸ ಮಾಡುತ್ತೇನೆ. ನಾನು ಅದ್ಯಕ್ಷನಾಗಿ ಆಯ್ಕೆಯಾಗಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್ ಮೂರ್ತಿ, ಶ್ರೀನಿವಾಸ್, ನಾಗರಾಜು, ಕೆಂಪರತ್ನಮ್ಮ, ನಾಗರತ್ನ ಮುಖಂಡರಾದ ಕೆಂಪನಹಳ್ಳಿ ಮಂಜು, ಶಿವಸ್ವಾಮಿ, ಪರಮಶಿವಯ್ಯ, ಚನ್ನಪ್ಪ, ರಾಮಚಂದ್ರು, ರೇವಣ್ಣ, ರೇಣುಕಪ್ಪ, ಕುಮಾರ್, ಮಂಜಣ್ಣ, ಹರೀಶ್, ಪಿಡಿಓ ಕಲಾವತಿ, ಸಿಬ್ಬಂದಿಗಳು ಸೇರಿದಂತೆ ನೂರಾರು ಮುಖಂಡರು ಭಾಗವಹಿಸಿದ್ದರು.
ಇದೇ ವೇಳೆ ಕೆಎಂಎಪ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಪಿ.ನಾಗರಾಜು ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯರು ರೇಷ್ಮೆ ಹಾರ ಹಾಕಿ ಅಭಿನಂದಿಸಿದರು.

ವರದಿ : ಪಾದ್ರಳಿ ರಾಜು, ಮೊ: 94487 45536