ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮರು ಮೌಲ್ಯಮಾಪನ : ಎಂ.ಕೆ. ವಿಕಾಸ್‌ಗೌಡ ರಾಮನಗರ ಜಿಲ್ಲೆಗೆ ಪ್ರಥಮ
ಕನಕಪುರ : ತಾಲ್ಲೂಕಿನ ಮರಳವಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಎಂ.ಕೆ. ವಿಕಾಸ್‌ಗೌಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ 625 ಕ್ಕೆ 625 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಈತ ಮರಳವಾಡಿ ಹೋಬಳಿ ತೋಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೀಗೌಡನದೊಡ್ಡಿ ಗ್ರಾಮದ ಕಾಂತರಾಜು ಮತ್ತು ಇಂದಿರಾ ದಂಪತಿ ಪುತ್ರ.
ದೊಡ್ಡಮರಳವಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ 10 ನೇ ತರಗತಿ ತನಕ ವ್ಯಾಸಂಗ ಮಾಡಿದ್ದಾರೆ. ಇಂಗ್ಲೀಷ್‌ನಲ್ಲಿ ಮಾತ್ರ 98 ಅಂಕ ನೀಡಲಾಗಿತ್ತು. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ. ನಿರೀಕ್ಷೆಯಂತೆ ಇಂಗ್ಲೀಷ್ ನಲ್ಲಿ 2 ಅಂಕ ಗಳಿಸಿ 625 ಕ್ಕೆ 625 ಅಂಕ ಲಭಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ವಿಕಾಸ್‌ಗೌಡ ಅವರನ್ನು ರಾಮನಗರ ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ ಬೋಡ್ಕೆ ಅವರು ತಮ್ಮ ಕಚೇರಿಯಲ್ಲಿ ಗುರುವಾರ ಸನ್ಮಾನಿಸಿ ಗೌರವಿಸಿದರು. ಜಿಲ್ಲಾ ಸಮನ್ವಯ ಅಧಿಕಾರಿ ಮಹೇಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯೋಗೇಶ್, ಬಿಸಿಎಂ ಇಲಾಖೆ ಕಚೇರಿ ಅಧೀಕ್ಷಕಿ ಮಂಜುಳ, ಮರಳವಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ರಾಜಣ್ಣ, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.