ನಾಳೆ (ಜೂನ್ 11) ಜಾನಪದ ಲೋಕದಲ್ಲಿ ಕೆಂಪಮ್ಮ ಅಬ್ಬೂರು–ಕಾಳೇಗೌಡ ನಾಗವಾರ ಅವರ ಸರಳ ಮದುವೆ ಐವತ್ತರ ನೆನಪಿನ ಕಾರ್ಯಕ್ರಮ

ರಾಮನಗರ : ಕೆಂಪಮ್ಮ ಅಬ್ಬೂರು–ಕಾಳೇಗೌಡ ನಾಗವಾರ ಅವರ ಸರಳ ಮದುವೆ ಐವತ್ತರ ನೆನಪಿನ ಅಂಗವಾಗಿ ಜೂನ್ 11ರಂದು ಬೆಳಿಗ್ಗೆ 10.30ಕ್ಕೆ ರಾಮನಗರದ ಜಾನಪದ ಲೋಕದಲ್ಲಿ ‘ಸರಳ ಮದುವೆಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವ’ ಒಂದು ಅವಲೋಕನ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಗ್ರಹಾರ ಕೃಷ್ಣಮೂರ್ತಿ, ಮಂಗಲಾ ಅಪ್ಪಾಜಿಕೊಪ್ಪ, ಗೀತಾ ಸ್ವಾಮಿ ಆನಂದ್, ರಾಜೇಂದ್ರಪ್ರಸಾದ್, ಎಚ್.ಎಸ್. ರೇಣುಕಾರಾಧ್ಯ, ಕೇಶವರೆಡ್ಡಿ ಹಂದ್ರಾಳ, ಜಗದೀಶ್ ಕೊಪ್ಪ, ಮಂಜುನಾಥ ಅದ್ದೆ, ಸಾದಿಕ್ ಪಾಶಾ, ವಿವೇಕ್ ಕಾರಿಯಪ್ಪ–ಜೂಲಿ ಕಾರಿಯಪ್ಪ, ಚುಕ್ಕಿ ನಂಜುಂಡಸ್ವಾಮಿ– ಲೂಕಾ ಮೊಂತನಾರಿ ಭಾಗವಹಿಸಲಿದ್ದಾರೆ.
50ನೇ ವಸಂತದ ಸಂಭ್ರಮ :
ಸಂಪ್ರದಾಯಗಳ ಕಟ್ಟುಪಾಡುಗಳನ್ನು ಮೀರಿ, ಮೂಢನಂಬಿಕೆ ಧಿಕ್ಕರಿಸಿ ಮತ್ತು ದಲಿತರೊಬ್ಬರ ಪೌರೋಹಿತ್ಯದಲ್ಲಿ ಸರಳವಾಗಿ ಮದುವೆಯಾದ ಇಲ್ಲಿನ ರಾಮಕೃಷ್ಣನಗರ ಕೆ. ಬ್ಲಾಕ್ ನ ಈ ದಂಪತಿ, ವೈವಾಹಿಕ ಜೀವನದ 50ನೇ ವಸಂತದ ಸಂಭ್ರಮದಲ್ಲಿದ್ದಾರೆ.
ಐದು ದಶಕಗಳ ಹಿಂದೆ ಅವರಿಟ್ಟ ಆದರ್ಶದ ಹೆಜ್ಜೆಯ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಪ್ರಗತಿಪರರು, ಯುವಜನರು ‘ಆ’ ಮದುವೆಯ ಚಿತ್ರಗಳನ್ನು ಹಂಚಿಕೊಂಡು ಮೆಚ್ಚು ಗೆಯ ಪೋಸ್ಟ್ ಗಳನ್ನು ಹಾಕಿದ್ದಾರೆ. ಆ ದಂಪತಿಯೇ ಕೆಂಪಮ್ಮ–ಲೋಹಿಯಾವಾದಿಯೂ ಆಗಿರುವ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ. ಅನಗತ್ಯ ಆಚರಣೆಗಳಿಂದ ವಿಮೋಚನೆ ಬಯಸಿ ಆ ಕಾಲದಲ್ಲೇ ಹೊಸ ಪ್ರಯೋಗದಿಂದ ಗಮನ ಸೆಳೆದವರು. ಅವರು ಹಚ್ಚಿದ್ದ ವೈಚಾರಿತೆಯ ಹಣತೆ ಸಾವಿರಾರು ಯುವಕ–ಯುವತಿಯರಿಗೆ ದಾರಿದೀಪವಾಯಿತು.
ಈ ದಂಪತಿಯು ತಮ್ಮಿಬ್ಬರು ಪುತ್ರರು ಮತ್ತು ಪುತ್ರಿಯ ಮದುವೆಯನ್ನೂ ಸರಳ ಮತ್ತು ಜಾತಿಯ ಸಂಕೋಲೆಯಿಂದ ಹೊರತಂದು ನೆರವೇರಿಸಿದ್ದಾರೆ. ಆ ಮದುವೆಗಳೆಲ್ಲವನ್ನೂ ಮನೆಯಲ್ಲೇ ಮಾಡಿರುವುದು ವಿಶೇಷ.

ಮೂಢಸಂಪ್ರದಾಯ ವಿರೋಧಿ ಸಮ್ಮೇಳನದಲ್ಲಿ ಮದುವೆ :
ಮೌಢ್ಯ, ಆಡಂಬರದ ಮದುವೆಗೆ ಸಾಲ ಮಾಡುವುದು ಮೊದಲಾದ ಭಾರತೀಯ ಸುಡು ವಾಸ್ತವಗಳು ಗೊತ್ತಾಗಿತ್ತು. ಉಪನ್ಯಾಸಕನಾಗಿದ್ದ ನನಗೆ, ನಗರದ ಬದಲಿಗೆ ಹಳ್ಳಿಯಲ್ಲೇ ಕ್ರಾಂತಿ ಮಾಡಬೇಕು ಎನ್ನುವ ಹಂಬಲವಿತ್ತು. ಪೌರೋಹಿತ್ಯ ವಹಿಸಿಕೊಳ್ಳಲು ಒಪ್ಪಿದ್ದ ದಲಿತ ಅಧ್ಯಾಪಕ ಮಿತ್ರ ಸಿಂಗ್ರಯ್ಯ ಅವರನ್ನು ಕೆಲವರು ಹೆದರಿಸಿದ್ದರು. ನನ್ನನ್ನೂ ನಿಂದಿಸಿದ್ದರು. ಇದರಿಂದ ಅವರು ಹಿಂದೆ ಸರಿದರು. ಆಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ.ಎಚ್. ರಂಗನಾಥ್ ಅವರೇ ಪೌರೋಹಿತ್ಯ ವಹಿಸಿದರು. ಚನ್ನಪಟ್ಟಣ ತಾಲ್ಲೂಕಿನ ನಮ್ಮೂರು ನಾಗವಾರದಲ್ಲಿ ನಡೆದ ‘ಮೂಢಸಂಪ್ರದಾಯ ವಿರೋಧಿ ಸಮ್ಮೇಳನ’ದಲ್ಲಿ ಮದುವೆಯಾದೆವು. ಯಾವ ಮುಹೂರ್ತವನ್ನೂ ನೋಡಲಿಲ್ಲ’ ಎಂದು ಮೆಲುಕು ಹಾಕಿದರು.
ದುಂದು ವೆಚ್ಚಕ್ಕೆ ಬದಲಾಗಿ ಜನೋಪಯೋಗಿ ಕಾರ್ಯಕ್ಕೆ ಹಣ ಕೊಡಬೇಕೆಂಬ ಧ್ಯೇಯ ಅನುಸರಿಸಿ ನಾಗವಾರದಲ್ಲಿ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ 500 ರೂ. ನೀಡಿದೆವು. ಮದುವೆ ನಂತರ ದೇವಸ್ಥಾನಕ್ಕೆ ಹೋಗಲಿಲ್ಲ ಎಂದರು.
ಪೂರಕ ಮಾಹಿತಿ : ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಎಂ. ಮಹೇಶ್ ಅವರು ಬರೆದಿರುವ ವಿಶೇಷ ವರದಿ.

Leave a Reply

Your email address will not be published. Required fields are marked *