ಅವಿರತ ಆತ್ಮೀಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೃತಪಟ್ಟ ಎಂ. ರವಿ ಕುಟುಂಬಕ್ಕೆ ಆರ್ಥಿಕ ನೆರವು

ರಾಮನಗರ: ರಸ್ತೆ ಅಪಘಾತದಲ್ಲಿ ಇತ್ತೀಚೆಗೆ ಮೃತಪಟ್ಟ ಎಂ.ರವಿ ಅವರ ಮಗಳು ಎಂ.ಶಾಲಿನಿಯ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವೆಂದು 10 ಸಾವಿರ ರೂಪಾಯಿಗಳನ್ನು ಅವಿರತ ಆತ್ಮೀಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ನೀಡಲಾಯಿತು.
ರವಿ ಅವರ ಪತ್ನಿ ಉಮಾ ಹಾಗೂ ಶಾಲಿನಿ ಅವರಿಗೆ ನಗದು ಹಣವನ್ನು ನೀಡಿ ಮಾತನಾಡಿದ ಅವಿರತ ಆತ್ಮೀಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ರತ್ನ ವಳರ್ ಮತಿ ಅವರು, ನಮ್ಮ ಟ್ರಸ್ಟ್ ನ ಇತಿಮಿತಿಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡುತ್ತಾ ಬಂದಿದ್ದೇವೆ ಎಂದರು.


ನಮ್ಮ ಟ್ರಸ್ಟ್ ರಚನೆಯಾಗಿ ನಾಲ್ಕು ವರ್ಷಗಳಾಗಿದೆ. ಈಗಾಗಲೇ ನಮ್ಮ ಟ್ರಸ್ಟ್ ವತಿಯಿಂದ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದೇವೆ. ಕ್ಯಾನ್ಸರ್ ಪೀಡಿತರೊಬ್ಬರಿಗೆ ಆರ್ಥಿಕ ನೆರವು, ಆಸ್ಪತ್ರೆಯಲ್ಲಿದ್ದ ನಮ್ಮ ಸ್ನೇಹಿತನ ಪತಿಗೆ ಹಣ ಸಹಾಯ, ವೃದ್ಧಶ್ರಾಮ ಒಂದಕ್ಕೆ ದವಸ ಧಾನ್ಯಗಳನ್ನು ವಿತರಣೆ ಮಾಡಲಾಗಿದೆ. ಇದರ ಜೊತೆಗೆ ನಮ್ಮ ಟ್ರಸ್ಟ್ ಸದಸ್ಯರೊಬ್ಬರ ಮಗಳು ಅಂತಾರಾಷ್ಟ್ರೀಯ ಕ್ರೀಡಾಪಟು ಆಗಿದ್ದು ಆಕೆಯನ್ನು ಸನ್ಮಾನಿಸಿ ಗೌರವಿಸಲಾಗಿದೆ ಎಂದು ಹೇಳಿದರು.
ವಿಶ್ವವನ್ನೇ ದಂಗು ಬಡಿಸಿದ ಕೊರೊನಾ ಎಂಬ ಮಹಾಮಾರಿಯಿಂದ ನಮ್ಮ ಟ್ರಸ್ಟ್ ನ ಕಾರ್ಯ ಚಟುವಟಿಕೆ ಸಂಪೂರ್ಣ ನಿಂತು ಹೋಗಿತ್ತು. ಇದೀಗ ಮತ್ತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನಮ್ಮ ಟ್ರಸ್ಟ್ ಮುಂದಾಗಿದೆ. ಇಂದು ರವಿ ಅವರ ಮಗಳ ಶಾಲಿನಿ ಸೇರಿದಂತೆ ಪತಿಯನ್ನು ಕಳೆದುಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಪಡುತ್ತಿದ್ದ ದಿ. ಶಂಕರ್ ಮತ್ತು ಮಂಜುಳ ಅವರ ಮಕ್ಕಳಾದ ಯಶಸ್ವಿನಿ ಹಾಗೂ ಧನುಷ್ ಅವರಿಗೂ 10 ಸಾವಿರ ರೂಪಾಯಿಗಳನ್ನು ನೀಡಿದ್ದೇವೆ ಎಂದು ರತ್ನ ತಿಳಿಸಿದರು.
ಪ್ರತಿಷ್ಠಿತ ಅರ್‌ವಿಸಿಇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಇದ್ದ ಸ್ನೇಹಿತರು ತದನಂತರ ಅಂದರೆ ಸರಿ ಸುಮಾರು 25 ವರ್ಷಗಳ ನಂತರ ಕಟ್ಟಿರುವ ಟ್ರಸ್ಟ್ ನಮ್ಮದಾಗಿದೆ. ಕಾನೂನು ನಿಯಮಾವಳಿ ಪ್ರಕಾರ ಟ್ರಸ್ಟ್ ನೋಂದಣಿ ಆಗಿದೆ. ಪ್ರತ್ಯೇಕ ಬ್ಯಾಂಕ್ ಖಾತೆ ಇದೆ. ಟ್ರಸ್ಟ್ ಸದಸ್ಯರೇ ಪ್ರತಿ ತಿಂಗಳು ನಿಗದಿಪಡಿಸಿದ ಹಣವನ್ನು ಜಮೆ ಮಾಡುತ್ತಿದ್ದಾರೆ. ನಮ್ಮ ಟ್ರಸ್ಟ್ ಗೆ ಯಾರು ಬೇಕಾದರೂ ಹಣಕಾಸಿನ ನೆರವು ನೀಡಬಹುದು. ಇದು ಯಾವುದೇ ರೀತಿಯಲ್ಲೂ ದುರುಪಯೋಗವಾಗದೆ ಸಾಮಾಜಿಕ ಕಾರ್ಯಕ್ಕೆ ಸದ್ವಿನಿಯೋಗ ಮಾಡುವುದು ನಮ್ಮ ದೃಢ ಸಂಕಲ್ಪವಾಗಿದೆ ಎಂದರು ಅವರು ಹೇಳಿದರು.
ಅವಿರತ ಆತ್ಮೀಯ ಚಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿ ಎಂ.ಸತೀಶ, ಸಹ ಕಾರ್ಯದರ್ಶಿ ಸುನೀಲ್ ವಿ. ಅರ್ಕಸಾಲಿ, ಸದಸ್ಯರಾದ ಅಬ್ದುಲ್ ವಾಹಿದ್, ಬಿ.ಟಿ.ಶ್ರೀನಿವಾಸ್, ಪ್ರಿಯಾಲತಾ ಇದ್ದರು.

Leave a Reply

Your email address will not be published. Required fields are marked *