ಜೇನುಗೂಡು ಯುವಕರ ಬಳಗದ ವತಿಯಿಂದ “ಗಿಡನೆಡಿ ಖುಷಿಪಡಿ” ಕಾರ್ಯಕ್ರಮ : ಪರಿಸರ ಪ್ರೇಮಿ ಬಿ.ಟಿ. ರಾಜೇಂದ್ರ ಅವರಿಗೆ ಸನ್ಮಾನ

ರಾಮನಗರ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೇನುಗೂಡು ಯುವಕರ ಬಳಗ ವತಿಯಿಂದ ಮತ್ತು ಬಿಳಗುಂಬ ಯುವಕರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ  “ಗಿಡ ನೆಡಿ ಖುಷಿಪಡಿ” ಎಂಬ ವಿಶೇಷ ಕಾರ್ಯಕ್ರಮವನ್ನು ಭಾನುವಾರ ಬಿಳಗುಂಬದ ಶೀ ಕ್ಷೇತ್ರ ಜಲಸಿದ್ದೇಶ್ವರ ಸ್ವಾಮಿ ಬೆಟ್ಟದ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್ ಮಾತನಾಡಿ ಇತ್ತೀಚಿನ ಯುವಪೀಳಿಗೆ ಪರಿಸರದ ಬಗ್ಗೆ ಕಾಳಜಿ ವಹಿಸದೆ ಕೇವಲ ಮೊಬೈಲ್, ಟಿವಿ ಮತ್ತು ಕೆಲವು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಇದರ ಮಧ್ಯೆ ಜೇನುಗೂಡು ಯುವಕರ ಬಳಗದ ವತಿಯಿಂದ ನಡೆಯುತಿರುವ ಕಾರ್ಯಕ್ರಮ ಶ್ಲಾಘನೀಯ ಎಂದು ತಿಳಿಸಿದರು.

ಆಲ, ನೇರಳೆ, ಹತ್ತಿ, ಸಿಪೇಕಾಯಿ ಇತರ ಹಣ್ಣಿನ ಗಿಡಗಳನ್ನು ನೆಡುವುದರಿಂದ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ತುಂಬಾ ಉಪಯುಕ್ತವಾಗುವುದರ ಜೊತೆಗೆ ಮರಗಳು ಮತ್ತು ಕಾಡುಪ್ರಾಣಿಗಳನ್ನು ಕೂಡ ಉಳಿಸಬಹುದು ಎಂದರು.

ಅಭಿವೃದ್ಧಿಯ ಹೆಸರಿನಲ್ಲಿ  ಗಿಡಮರಗಳನ್ನು ಕಡೆದು ಪ್ರಕೃತಿ ನಾಶ ಮಾಡುತ್ತಿರುವುದು ಮುಂದಿನ ದಿನಗಳಲ್ಲಿ ನಮಗೆ ದೊಡ್ಡ ಶಾಪವಾಗಿ ಕಾಡುತ್ತದೆ, ಪ್ರಕೃತಿ ನಾಶದಿಂದ ನೀರು ಮಲಿನಗೊಂಡು ಜನರಿಗೆ ರೋಗರುಜಿನಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.

ಪರಿಸರ ಪ್ರೇಮಿ ಬಿ.ಟಿ. ರಾಜೇಂದ್ರ ಮಾತನಾಡಿ ಜೂನ್ ತಿಂಗಳಲ್ಲಿ ಪರಿಸರದ ದಿನಾಚರಣೆ ಮಾಡುವ ಉದ್ದೇಶವನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಕೇವಲ ಒಂದು ದಿನಕ್ಕೆ ಪರಿಸರ ದಿನಾಚರಣೆಯನ್ನು ಸೀಮಿತಗೊಳಿಸದೆ ಪ್ರತಿದಿನ ಇದು ನನ್ನ ಕರ್ತವ್ಯ ಎಂದು ಪರಿಭಾವಿಸಿ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ನಾವು ಗಿಡ ನೆಡುವುದಕ್ಕಿಂತ ಹೆಚ್ಚಾಗಿ ನೆಟ್ಟ ಗಿಡಗಳನ್ನು‌ ಸಂರಕ್ಷಿಸುವುದು ಬಹಳ ಮುಖ್ಯ ಆದ್ದರಿಂದ ಗಿಡಗಳ ಸುತ್ತ ಪರದೆ ಹಾಕಿ ವಾರಕ್ಕೊಮ್ಮೆಯಾದರೂ ನೀರನ್ನು ಹಾಕಬೇಕು ಒಂದು ಗಿಡವನ್ನು ಮೂರು ವರ್ಷ ನಾವು ಕಾಪಾಡಿದರೆ ಆ ಒಂದು ಗಿಡ ನಮ್ಮನ್ನು ಮುನ್ನೂರು ವರ್ಷ ಕಾಪಾಡಿಕೊಳ್ಳುತ್ತದೆ ಎಂದರು.

ಜೀವ ವೈವಿಧ್ಯತೆಯಲ್ಲಿ ಆಹಾರದ ಸರಪಣಿಯ ಬಗ್ಗೆ ವಿವರಿಸಿ ನಮ್ಮ ದೇಹಕ್ಕೆ ಆಕ್ಸಿಜೆನ್ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದರು.

ಜೇನುಗೂಡು ಯುವಕರ ಬಳಗದ ಅಧ್ಯಕ್ಷ ಕಿರಣ್ ಬಿಳಗುಂಬ ಮಾತನಾಡಿ ಕೇವಲ ಹೆಸರಿಗೆ ಮಾತ್ರ ಗಿಡ ನೆಡದೆ  ನಮ್ಮ ಸುತ್ತಲಿನ ಪರಿಸರ ಹಸಿರಿನಿಂದ ಕಂಗೊಳಿಸುವ ಜೊತೆಗೆ ನಮ್ಮ ಉಸಿರನ್ನು ಕಾಪಾಡಿಕೊಳ್ಳಲು ನಾವು ಶ್ರಮಿಸಬೇಕು ಎಂದರು.

ನೆಟ್ಟ ಗಿಡಗಳನ್ನು ಬಾಡದಂತೆ ನೋಡಿಕೊಳ್ಳಲು ಮುಂದಿನ ದಿನಗಳಲ್ಲಿ ನಮ್ಮ ಸಂಘದ ವತಿಯಿಂದ ವಿಶೇಷ ಮುತುವರ್ಜಿ ವಹಿಸುತ್ತೇವೆ  ಮತ್ತು ಮುಂದಿನ ದಿನಗಳಲ್ಲಿ ನಾವು ಕೇವಲ ಪರಿಸರ ದಿನಾಚರಣೆಗೆ  ಸೀಮಿತವಾಗದೆ ಪ್ರಾಣಿಸಂಕುಲ ಉಳಿವಿನ ಬಗ್ಗೆ ಮತ್ತು ಗ್ರಾಮದ ನೈರ್ಮಲ್ಯತೆ. ಮಣ್ಣಿನ ಸವಕಳಿಯ ಬಗ್ಗೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪರಿಸರ ಪ್ರೇಮಿ ಎಂದೆ ಹೆಸರುವಾಸಿಯಾಗಿರುವ ಬಿ.ಟಿ. ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ. ಮೋಹನ್ ಕುಮಾರ್, ಉಪಾಧ್ಯಕ್ಷ ಚಂದ್ರಶೇಖರ (ಕೆಂಚೇಗೌಡ),  ಸದಸ್ಯ ಶಾಂತಪ್ಪ, ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಲಕ್ಷ್ಮಿ ನರಸಿಂಹಯ್ಯ,  ಅಂಗಡಿ ಶಿವರಾಜು, ಕುಮಾರ ಆಡಿಟರ್, ಸುರೇಶ್ ಬಿ ಟಿ,   ಶಂಕರ್ ಟಿ, ಅಂಗಡಿ ತಮ್ಮಯ್ಯ ಮತ್ತು ಜೇನುಗೂಡು ಯುವಕರ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮದ ಯುವಕರು ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *