“ತಾಯಿಗೆ ಜನ್ಮದಿನದ ಶುಭಾಶಯಗಳು. ಎಲ್ಲರೂ ಖುಷಿಯಾಗಿರಿ, ಶಾಲೆಗೆ ತನಗಾಗಿ ಕಟ್ಟಿರುವ ಶುಲ್ಕವನ್ನು ವಾಪಸ್ ಪಡೆದುಕೊಳ್ಳಿ. ನಿಮ್ಮಿಂದ ನಾನು ದೂರವಾಗುತ್ತಿದ್ದೇನೆ. ನೀವು ನನ್ನನ್ನು ದುಃಖಕ್ಕೆ ತಳ್ಳಿದಿರಿ. ಯಾರೂ ಅಳಬೇಡಿ”: ತಾಯಿಗೆ ಶುಭಾಶಯ ಕೋರಲು ಮೊಬೈಲ್ ಕೊಡದ್ದಕ್ಕೆ ಆತ್ಮಹತ್ಯೆ
ಉಳ್ಳಾಲ : ತಾಯಿಗೆ ಜನ್ಮದಿನದ ಶುಭಾಶಯ ಕೋರಲು ಮೊಬೈಲ್ ನೀಡಿಲ್ಲವೆಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಲಪಾಡಿಯ ದೇವಿನಗರದ ಶಾರದಾ ವಿದ್ಯಾನಿಕೇತನ ಶಾಲೆಯ ಹಾಸ್ಟೆಲ್‌ನಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ರಮೇಶ್ ಮತ್ತು ಮಂಜುಳಾ ದಂಪತಿಯ ಪುತ್ರ ಪೂರ್ವಜ್ (14) ಮೃತ ಬಾಲಕ. ಈತ 9ನೇ ತರಗತಿಯಲ್ಲಿ ಓದುತ್ತಿದ್ದ. ಶನಿವಾರ ಆತನ ತಾಯಿಯ ಜನ್ಮದಿನವಿತ್ತು. ಶಾಲಾ ಆಡಳಿತ ಮಂಡಳಿಯ ನಿಯಮದಂತೆ ಹಾಸ್ಟೆಲ್ ವಾರ್ಡನ್, ಬಾಲಕನಿಗೆ ಮೊಬೈಲ್ ನೀಡಿರಲಿಲ್ಲ. ರಾತ್ರಿ 12 ಗಂಟೆಯವರೆಗೂ ಮಂಕಾಗಿ ಕುಳಿತಿದ್ದ ಬಾಲಕ ಡೆತ್‌ನೋಟ್ ಬರೆದಿಟ್ಟು ಹಾಸ್ಟೆಲ್ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಭಾನುವಾರ ಬೆಳಿಗ್ಗೆ ವಿದ್ಯಾರ್ಥಿಯೊಬ್ಬ ಪೂರ್ವಜ್ ಶವ ನೋಡಿ, ವಾರ್ಡನ್ ಗಮನಕ್ಕೆ ತಂದಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾಸಂಸ್ಥೆ, ಶಾಲಾ ಪ್ರಾಂಶುಪಾಲರು ಹಾಗೂ ಹಾಸ್ಟೆಲ್ ವಾರ್ಡನ್ ವಿರುದ್ಧ ಮಂಜುಳಾ ಸಹೋದರ ಅರುಣ್ ಅವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಶಾಲಾ ಆಡಳಿತ ಮಂಡಳಿಯ ಕಿರುಕುಳದಿಂದ ಪೂರ್ವಜ್ ಆತ್ಮಹತ್ಯೆ ಮಾಡಿದ್ದಾನೆ. ಶಾಲಾ ಸೇರ್ಪಡೆ ವೇಳೆ ವಿದ್ಯಾರ್ಥಿಯ ಚಲನವಲನವನ್ನು ಪೋಷಕರಿಗೆ ತಿಳಿಸುತ್ತೇನೆ ಅಂದಿದ್ದರೂ ಈವರೆಗೆ ಪೂರ್ವಜ್ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ. ಹೆತ್ತವರು ಕರೆ ಮಾಡಿದರೂ ಸಂಭಾಷಣೆಗೆ ಶಾಲಾಡಳಿತ ಮಂಡಳಿ ಅವಕಾಶ ನೀಡುತ್ತಿರಲಿಲ್ಲ’ ಎಂದು ಆರೋಪಿಸಿದ್ದಾರೆ.
ಡೆತ್ ನೋಟ್‌ನಲ್ಲಿ ಏನಿದೆ?: ‘ತಾಯಿಗೆ ಜನ್ಮದಿನದ ಶುಭಾಶಯಗಳು. ಎಲ್ಲರೂ ಖುಷಿಯಾಗಿರಿ, ಶಾಲೆಗೆ ತನಗಾಗಿ ಕಟ್ಟಿರುವ ಶುಲ್ಕವನ್ನು ವಾಪಸ್ ಪಡೆದುಕೊಳ್ಳಿ. ನಿಮ್ಮಿಂದ ನಾನು ದೂರವಾಗುತ್ತಿದ್ದೇನೆ. ನೀವು ನನ್ನನ್ನು ದುಃಖಕ್ಕೆ ತಳ್ಳಿದಿರಿ. ಯಾರೂ ಅಳಬೇಡಿ’ ಎಂದು ಇಂಗ್ಲಿಷ್‌ನಲ್ಲಿ ಬರೆದ ಡೆತ್‌ನೋಟ್ ಪತ್ತೆಯಾಗಿದೆ.
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/HK9U7zQD11W79PK8sGwVCS
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : rudresh.444@gmail.com