ಮಳವಳ್ಳಿಯ ಕೀರ್ತಿನಗರ ಹಿಂದೊಮ್ಮೆ ನೀಲಗಾರ ಪರಂಪರೆಯಿಂದ ಕೀರ್ತಿಗಳಿಸಿತ್ತು ; ಈಗ ನಾನೊಬ್ಬನೇ ಹಳೆಯ ತಲೆಮಾರಿನವನಾಗಿ ಉಳಿದುಕೊಂಡಿರುವೆ : ಗುರುಬಸವಯ್ಯ ನೀಲಗಾರರು
ರಾಮನಗರ : ಇಲ್ಲಿನ ಜಾನಪದ ಲೋಕದಲ್ಲಿ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗುರುಬಸವಯ್ಯ ನೀಲಗಾರರು ಅಪರೂಪದ ಗಣಪತಿರಾಜನ ಕಥೆಯ ಬಿಡಿ ಭಾಗವನ್ನು ಹಾಡಿದರು. ತಮ್ಮ ವಂಶಪರಂಪರೆ ಬಗ್ಗೆ ಮಾತನಾಡುತ್ತಾ ಅವರು ನಾವು ಆಂಬಳೆ ತಳ; ಮಳವಳ್ಳಿ ಕುಳ. ಮಳವಳ್ಳಿಯ ಕೀರ್ತಿನಗರ ಹಿಂದೊಮ್ಮೆ ನೀಲಗಾರ ಪರಂಪರೆಯಿಂದ ಕೀರ್ತಿಗಳಿಸಿತ್ತು. ಈಗ ನಾನೊಬ್ಬನೇ ಹಳೆಯ ತಲೆಮಾರಿನವನಾಗಿ ಉಳಿದುಕೊಂಡಿರುವೆ ಎಂದರು.

ನಮ್ಮಣ್ಣನ ಮಗ ಗುರುರಾಜು ಮೈಸೂರು ಭಾಗದಲ್ಲಿ ಹೆಸರುವಾಸಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ಗುರುಬಸವಯ್ಯ ನೀಲಗಾರರು ಮತ್ತು ತಂಡದವರು ಅರ್ಜುನ ಜೋಗಿ ಕಥೆ, ಮಲೆಮಾದೇಶ್ವರನ ಕಥೆ, ಮಂಟೆಸ್ವಾಮಿಯ ಕಥೆಯ ಬಿಡಿ ಭಾಗಗಳನ್ನು ರಸವತ್ತಾಗಿ ಹಾಡಿದರು. ಮೈಸೂರು ಗುರುರಾಜು, ಬಸವರಾಜು ಸಿ, ಬಸವರಾಜು ಹಾಡಿಗೆ ಮೇಳದೊಂದಿಗೆ ದನಿಗೂಡಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಮೆನೇಜಿಂಗ್ ಟ್ರಸ್ಟಿನ ಆದಿತ್ಯ ನಂಜರಾಜ್, ಶಾಂತಿನಿಕೇತನ ಪದವಿ ಕಾಲೇಜಿನ ಉಪನ್ಯಾಸಕ ಟಿ.ಪಿ. ಕೃಷ್ಣಯ್ಯ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಸು.ತ. ರಾಮೇಗೌಡ, ಚನ್ನಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯ್ ರಾಂಪುರ, ಜಾನಪದ ಲೋಕದ ಕ್ಯುರೇಟರ್ ಡಾ.ಯು.ಎಂ. ರವಿ, ರಂಗ ಸಹಾಯಕ ಎಸ್. ಪ್ರದೀಪ್ ಇದ್ದರು.
ಶ್ರೀ ಗುರುಬಸವಯ್ಯ ನೀಲಗಾರರು ಕಿರು ಪರಿಚಯ :
ಧಾರ್ಮಿಕ ವೃತ್ತಿಗಾಯಕ ಪರಂಪರೆಗೆ ಸೇರಿದ ನೀಲಗಾರರು ಮಂಟೇಸ್ವಾಮಿಯ ಗುಡ್ಡರು. ನಾಡತಂಬೂರಿಯನ್ನು ಮೀಟುತ್ತಾಢಕ್ಕೆ, ಗಗ್ಗರ, ತಾಳಗಳನ್ನು ನುಡಿಸುತ್ತಾ ಹಾಡತೊಡಗಿದರೆ ಎಂತಹ ಅರಸಿಕನೂ ತಲೆದೂಗುತ್ತಾನೆ. ಅನೇಕ ಪವಾಡಗಳನ್ನು ಮೆರೆದು ಒಕ್ಕಲುಗಳನ್ನು ಮಾಡಿದ ಮಹಾಪುರುಷ ಮಂಟೇಸ್ವಾಮಿ ನೀಲಗಾರರ ಆರಾಧ್ಯದೈವ. ಮಂಟೇಸ್ವಾಮಿಯಗುಡ್ಡರೆಂದು ಕರೆಸಿಕೊಳ್ಳುವ ನೀಲಗಾರರು ಮಂಟೇಸ್ವಾಮಿ ಮಹಿಮೆಯನ್ನು ಪ್ರಸಾರ ಮಾಡುತ್ತಾ ಮಂಟೇಸ್ವಾಮಿ ಪೂಜಾರಾಧನೆಗಳಲ್ಲಿ ಸದಾದೈವದ ಸೇವೆಯಲ್ಲಿ ನಿರತರಾಗಿರುತ್ತಾರೆ. ಇಂತಹ ಪರಂಪರೆಯಲ್ಲಿ ಬೆಳೆದು ಬಂದ ಉತ್ಕøಷ್ಟ ನೀಲಗಾರ ಸಂಪ್ರದಾಯದ ಗಾಯಕ ಶ್ರೀ ಗುರುಬಸವಯ್ಯ. ತಾತಶ್ರೀ ಪೆದ್ದೋಡಿರಾಚಯ್ಯ, ತಂದೆಶ್ರೀ ಶಿವರಿ ಮಂಚಯ್ಯ ಪ್ರಸಿದ್ಧ ನೀಲಗಾರರು. ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಕೀರ್ತಿನಗರದಲ್ಲಿ ತಾಯಿ ಸಿದ್ಧಮ್ಮನ ಪುತ್ರನಾಗಿ 1932ರಲ್ಲಿ ಜನಿಸಿದರು. ವಂಶಪರಂಪರೆಯಿಂದ ಬಂದ ಕಲೆಯನ್ನು ತನ್ನ ಹದಿನೈದನೆ ವಯಸ್ಸಿನಿಂದ ಕಲಿತು ಹಾಡುವುದನ್ನು ಆರಂಭಿಸಿದರು.
ಮೈಸೂರು ಆಕಾಶವಾಣಿ, ಮೈಸೂರು ದಸರಾ ಸೇರಿದಂತೆ ಸುತ್ತೇಳು ಊರುಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು, ಮಂಟೇಸ್ವಾಮಿ ಭಕ್ತರ ಪೂಜನೀಯ ಸ್ಥಳಗಳಾದ ಕಪ್ಪಡಿ, ಕುರುಬನ ಕಟ್ಟೆ, ಬಪ್ಪನಪುರ, ಚಿಕ್ಕಲ್ಲೂರು, ಹೊನ್ನಾಕನಹಳ್ಳಿ ಜಾತ್ರೆಗಳಲ್ಲಿ ಇವರ ತಂಡ ಪ್ರತಿವರ್ಷ ಹಾಡಿನ ಸೇವೆಯನ್ನು ಮಾಡುತ್ತಿದ್ದಾರೆ. ತಮ್ಮ ಹಾಡಿಗೆ ದನಿಗೂಡಿಸುವಸಹ ಕಲಾವಿದರಾದ ಯತಿರಾಜು, ಬಸವರಾಜು, ಜಯರಾಜು ತಂಬೂರಿ, ಡಕ್ಕೆ, ಗಗ್ಗರ, ತಾಳ ಹಿಡಿದು ಕಥನ ಕಾವ್ಯಗಳಿಗೆ ಮೆರಗು ನೀಡುತ್ತಾರೆ. ಇವರಿಗೆಇಬ್ಬರು ಮಕ್ಕಳಿದ್ದು ಕಲೆ ಕಲಿಯಲಿಲ್ಲ ಎಂಬ ಕೊರಗು.
ಮೈಸೂರುಗುರುರಾಜು ಇವರು ಪರಂಪರೆಯ ಪ್ರಸಿದ್ಧ ಗಾಯಕರು. ಧರೆಗೆದೊಡ್ಡೋರು, ರಾಚಪ್ಪಾಜಿ ಪವಾಡ, ಚನ್ನಬಸವಣ್ಣನ ಕಥೆ, ಗಣಪತಿರಾಜನ ಕಥೆ, ಶಿವನಾರಾಯಣ ಕಥೆ, ಚನ್ನಿಗರಾಮನ ಕಥೆ, ಮೈದಾಳರಾಮನ ಕಥೆ, ಪಿರಿಯಾಪಟ್ಟಣ ಕಾಳಗ, ನಂಜುಂಡೇಶ್ವರನ ಕಥೆಗಳನ್ನು ನಿರರ್ಗಳವಾಗಿ ಕಥೆಗೊಂದುರಾತ್ರಿಯಂತೆ ಹಾಡುವ ಅಸಾದಾರಣ ಕಲಾವಿದ.
“ಹಾಯ್ ರಾಮನಗರ” ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/HK9U7zQD11W79PK8sGwVCS
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : rudresh.444@gmail.com