ಬಲಿಗೆ ಕಾದಿರುವ ತಾಣಗಳು : ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ
ಕನಕಪುರ : ‘ಕ್ವಾರಿ ಮಾಡುವವರು ಹಣ ಮಾಡಿಕೊಂಡು ಹೋಗುತ್ತಾರೆ. ಅದರಿಂದ ಸರ್ಕಾರಕ್ಕೆ ಹಣ ಬರುತ್ತೆ, ಆದರೆ ಅವರು ತಮಗೆ ಇಷ್ಟಬಂದ ರೀತಿಯಲ್ಲಿ ಗಣಿಗಾರಿಕೆ ಮಾಡಿ ನೂರಾರು ಅಡಿಗಳಷ್ಟು ಹಾಳ ಮಾಡಿ ಅದನ್ನು ಮುಚ್ಚದೆ ಹೋಗುತ್ತಾರೆ. ಈ ರೀತಿಯಾಗಿ ಮಾಡಿರುವುದರಿಂದ ಕಸಬಾ ವ್ಯಪ್ತಿಯಲ್ಲಿ ನಡೆದಿರುವ ಕ್ವಾರಿಗಳು 100 ಕ್ಕೂ ಹೆಚ್ಚು ಅಡಿ ಆಳದಲ್ಲಿದ್ದು ನೀರು ತುಂಬಿಕೊಂಡಿವೆ. ಗಣಿಗಾರಿಕೆ ಮಾಡದೆ ನಿಲ್ಲಿಸಿರುವ ಕ್ವಾರಿಗಳ ಮುಚ್ಚಿಸದೆ, ಭದ್ರತೆಯನ್ನು ಮಾಡದೆ ಬಿಟ್ಟಿರುತ್ತಾರೆ’ ಎಂದು ಗಣಿ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಮೇರೆಗೆ ಕಸಬಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಕ್ವಾರಿಗಳು 100ಕ್ಕೂ ಹೆಚ್ಚು ಅಡಿಗಳಷ್ಟು ಆಳವಾಗಿದ್ದು ಅದರಲ್ಲಿ ನೀರು ತುಂಬಿಕೊಂಡಿದೆ. ಇದರಲ್ಲಿ ತುಂಬಿರುವ ನೀರು ಎಂತಹ ಬೇಸಿಗೆಯಲ್ಲೂ ಕಡಿಮೆಯಾಗುವುದಿಲ್ಲ. ಇಲ್ಲಿ ನೀರು ಇರುವುದರಿಂದಲೆ ಈಜಾಡಲು, ಪಾರ್ಟಿ ಮಾಡಲು ಹುಡುಗರು ಹೋಗುತ್ತಾರೆ. ಅಂತಹ ಸಂದರ್ಭದಲ್ಲಿ ಸಾವು ನೋವುಗಳು ಸಂಭವಿಸಿವೆ, ವರ್ಷದಲ್ಲಿ ಇಲ್ಲಿ ನಾಲ್ಕೈದು ಸಾವುಗಳು ಸಂಭವಿಸುತ್ತಿವೆ. ಜಾನುವಾರುಗಳು, ಜನಗಳು ಅದೆಷ್ಟು ಬಿದ್ದು ಸತ್ತಿದ್ದಾರೋ ಗೊತ್ತಿಲ್ಲ ಎನ್ನುತ್ತಿದ್ದಾರೆ.