ರಾಮನಗರ ಜಿಲ್ಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪ್ರಾರಂಭ
ರಾಮನಗರ : ಜಿಲ್ಲೆಯ ಐದು ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ಪ್ರಾರಂಭವಾಗಿದೆ. ಗುರುವಾರ ಹಾಗೂ ಶುಕ್ರವಾರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ.
ಎಂಜಿನಿಯರಿಂಗ್, ಫಾರ್ಮಸಿ, ಪಶು ವೈದ್ಯಕೀಯ ಮೊದಲಾದ ವೃತ್ತಿಪರ ಕೋರ್ಸುಗಳ ಪ್ರವೇಶದ ಅರ್ಹತೆಗಾಗಿ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈ ವರ್ಷ 2,208 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಈಚೆಗೆ ಪರೀಕ್ಷಾ ಅಕ್ರಮಗಳದ್ದೇ ಹೆಚ್ಚು ಸುದ್ದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಯನ್ನು ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಗುತ್ತಿದೆ.
ಎರಡು ಅವಧಿ: ದಿನಕ್ಕೆ ಎರಡು ಅವಧಿಯಂತೆ ಒಟ್ಟು ನಾಲ್ಕು ಪರೀಕ್ಷೆಗಳು ನಡೆಯಲಿವೆ. ಗುರುವಾರ ಬೆಳಿಗ್ಗೆ 10.30ರಿಂದ 10.30ರಿಂದ 11.50ರ ತನಕ ಜೀವ ವಿಜ್ಞಾನ, ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಬೆಳಿಗ್ಗೆ ಭೌತ ವಿಜ್ಞಾನ ಹಾಗೂ ಮಧ್ಯಾಹ್ನ ರಸಾಯನ ವಿಜ್ಞಾನ ಪರೀಕ್ಷೆ ನಡೆಯಲಿದೆ.
ಈ ಬಾರಿ ನೀಟ್ ಮಾದರಿಯಲ್ಲಿಯೇ ಸಿಇಟಿ ಪರೀಕ್ಷೆ ಸಹ ನಡೆಯಲಿದ್ದು, ಅಕ್ರಮ ತಡೆಗಟ್ಟುವ ಸಲುವಾಗಿ ಕೆಲ ವೊಂದು ನಿರ್ಬಂಧಗಳನ್ನು ವಿಧಿಸ ಲಾಗಿದೆ. ವಿದ್ಯಾರ್ಥಿಗಳು (ಗಂಡು, ಹೆಣ್ಣು) ಅರ್ಧತೋಳಿನ ಬಟ್ಟೆ ಧರಿಸಿರ ಬೇಕು. ಸಾಕ್ಸ್, ಶೂ ಧರಿಸಿ ಪರೀಕ್ಷೆ ಬರೆಯುವಂತಿಲ್ಲ. ಕೈ ಗಡಿಯಾರ, ಕ್ಯಾಲ್ಕುಲೇಟರ್, ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಗೆ ನಿಷೇಧ ಹೇರಲಾಗಿದೆ.
ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಕೋವಿಡ್ ಲಕ್ಷಣಗಳು ಕಂಡುಬಂದರೆ ಅಂತಹ ವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು, ಪೊಲೀಸರನ್ನು ನಿಯೋಜಿಸಲಾಗಿದೆ.
ಪರೀಕ್ಷಾ ಕೇಂದ್ರಗಳು :
ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಒಟ್ಟು ಐದು ಪರೀಕ್ಷಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ರಾಮನಗರದಲ್ಲಿ ಬಾಲಕರ ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜು, ಶಾಂತಿಕೇತನ ಸಮೂಹ ಶಿಕ್ಷಣ ಸಂಸ್ಥೆ, ಯೂನಿವರ್ಸಲ್ ಕಾಲೇಜು ಹಾಗೂ ಚನ್ನಪಟ್ಟಣದಲ್ಲಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿದೆ.