ಜೂನ್ 27ರಂದು ಕೆಂಪೇಗೌಡರ ಜಯಂತಿ : ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆ : ಒಕ್ಕಲಿಗರ ಸಂಘದ ಆರೋಪ
ರಾಮನಗರ: ತಾಲ್ಲೂಕು ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಇದೇ 27ರಂದು ನಾಡಪ್ರಭು ಕೆಂಪೇಗೌಡರ 513 ನೇ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿ ಅಧ್ಯಕ್ಷ ಕೆ.ಚಂದ್ರಯ್ಯತಿಳಿಸಿದರು.
‘ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸುವ ಸಂಬಂಧ ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಕೆಂಪೇಗೌಡರಿಗೆ ಆಗುತ್ತಿರುವ ಅವಮಾನವನ್ನು ನೋಡಿಕೊಂಡು ಸಮುದಾಯದಿಂದ ಸುಮ್ಮನಿರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಸಂಘಟನೆಗಳು ಒಗ್ಗೂಡಿ ಜಿಲ್ಲಾಡಳಿತಕ್ಕೆ ಪರ್ಯಾಯವಾಗಿ ಕೆಂಪೇಗೌಡರ ಜಯಂತಿಯನ್ನು ಪಕ್ಷಾತೀತ ಹಾಗೂ ಜ್ಯಾತ್ಯತೀತವಾಗಿ ಒಗ್ಗಟ್ಟಿನಿಂದ ಆಚರಿಸಲು ನಿರ್ಧರಿಸಲಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯ ಸರ್ಕಾರ ಮೊದಲು ಕೆಂಪೇಗೌಡರ ಜಯಂತಿಯನ್ನು ರಾಜ್ಯ ಮಟ್ಟದಲ್ಲಿ ಆಚರಿಸುವುದಾಗಿ ಪ್ರಕಟಿಸಿತ್ತು. ಆನಂತರ ಆಯಾ ಜಿಲ್ಲೆಗಳಲ್ಲಿ ಆಚರಿಸುವುದಾಗಿ ತಿಳಿಸಿತ್ತು. ಆದರೆ, ಇದೀಗ ಮೇಲಿನ ಈ ಎರಡೂ ನಿರ್ಧಾರಗಳನ್ನು ಕೈಬಿಟ್ಟು ರಾಜಧಾನಿ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಜಯಂತಿಯನ್ನು ನಾಮ್ ಕೇ ವಾಸ್ತೆ ಆಚರಿಸುವುದಾಗಿ ಆದೇಶ ಹೊರಡಿಸಿದೆ. ಇದು ಖಂಡನೀಯ ವಿಚಾರವಾಗಿದ್ದು, ಜಿಲ್ಲೆಯವರೇ ಆದ ಉಸ್ತುವಾರಿ ಸಚಿವರು ಈ ಬಗ್ಗೆ ದನಿ ಎತ್ತದಿರುವುದು ದುರದೃಷ್ಟಕರವಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮೇಲಿಂಗು ಮಾತನಾಡಿ, ‘ಕೆಂಪೇಗೌಡರ ಜಯಂತಿ ಪ್ರಯುಕ್ತ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಹಳೇ ಬಸ್ ನಿಲ್ದಾಣದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ ವರೆಗೆ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಗುವುದು. ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮದ ಜೊತೆಗೆ ಜಿಲ್ಲೆಯ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ’ ಎಂದು ಮಾಹಿತಿ ನೀಡಿದರು.
ಒಕ್ಕಲಿಗ ಸಮುದಾಯದ ಮುಖಂಡ ರಾದ ಎ.ಬಿ. ಚೇತನ್ ಕುಮಾರ್, ಕೆ.ರವಿಕುಮಾರ್, ಮಂಚೇಗೌಡ, ಗೌತಮ್ ಗೌಡ, ಗೂಳಿಗೌಡ (ಕುಮಾರ್), ಶಿವಸ್ವಾಮಿ, ಹುಲಿಕೆರೆ ರಾಜಣ್ಣ, ಷಡಕ್ಷರಿ, ಸಿದ್ದರಾಮೇಗೌಡ, ಅರುಣ್, ರವಿ, ಬೋರೇಗೌಡ, ರಾಜು, ಕೂಟಗಲ್ ರವಿ, ರಮೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.