ಲಭ್ಯವಿರುವ ಸರ್ಕಾರಿ ಜಮೀನನ್ನು ಗುರುತಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ನಿವೇಶನ ರಹಿತರಿಗೆ ನಿವೇಶನ ನೀಡಲು ಕ್ರಮ ವಹಿಸಿ : ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್
ರಾಮನಗರ: ಜಿಲ್ಲೆಯಲ್ಲಿ ನಗರ ವ್ಯಾಪ್ತಿಯ 5 ಕಿ.ಮೀ ಒಳಗೆ ಲಭ್ಯವಿರುವ ಸರ್ಕಾರಿ ಜಮೀನನ್ನು ಗುರುತಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ನಿವೇಶನ ರಹಿತರಿಗೆ ನಿವೇಶನ ನೀಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಅವಿನಾಶ ಮೆನನ್ ರಾಜೇಂದ್ರನ್ ತಿಳಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ಪ್ರತಿಬಂಧ ಕಾಯ್ದೆ 1989- 2015 ರ ಅನುಷ್ಠಾನ ಸಂಬಂಧ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಜನರಿಗೂ ನಿವೇಶನವನ್ನು ಗುರುತಿಸಿ ಹಂಚಿಕೆ ಮಾಡುವಂತೆತಿಳಿಸಿದರು.
ಪೌಡಿ ದುರಸ್ತಿ ದಾಖಲಾತಿಗಳನ್ನು ಸಾರ್ವಜನಿಕರಿಗೆ ಇನ್ನು ಮುಂದೆ ಶೀಘ್ರವಾಗಿ ಸಿಗುವಂತೆ ಮಾಡಲಾಗುವುದು, ದಾಖಲೆಗಳ ಕೊರತೆ ಇದ್ದಲ್ಲಿ ಸರಿಪಡಿಸಿ ನೀಡಲಾಗುವುದು ಎಂದರು.
ಕೆ.ಎಸ್.ಆರ್.ಟಿ.ಸಿ, ಎಪಿಎಂಸಿ, ನಗರಸಭೆ, ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಮಳಿಗೆಗಳನ್ನು ಸಿಎಂಸಿ ಅಥವಾ ಲೊಕೋಪಯೋಗಿ ಇಲಾಖೆ ನಿಗದಿಪಡಿಸುವ ದರಗಳನ್ವಯ ನೀಡಬೇಕು. ಈ ಮಳಿಗೆಗಳನ್ನು ಹಂಚಿಕೆ ಮಾಡುವಾಗ ಮೀಸಲಾತಿಯನ್ನು ಅನುಸರಿಸಿ, ಲಾಟರಿ ಮೂಲಕ ಮಳಿಗೆಗಳನ್ನು ವಿತರಿಸಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟು 827 ಹಳ್ಳಿಗಳಿದ್ದು ಇವುಗಳಲ್ಲಿ 12 ಹಳ್ಳಿಗಳನ್ನು ಹೊರತುಪಡಿಸಿದರೆ ಉಳಿದ ಹಳ್ಳಿಗಳಲ್ಲಿ ಸ್ಮಶಾನ ಜಮೀನು ಲಭ್ಯವಿದೆ. ಇನ್ನು ಎಲ್ಲಿಯಾದರೂ ಸ್ಮಶಾನಕ್ಕೆ ಜಮೀನು ಅವಶ್ಯವಿದ್ದಲ್ಲಿ ಒದಗಿಸಲಾಗುವುದು ಎಂದರು. ಸ್ಮಶಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಜನಕ್ಕೆ ಜಾಗ ನೀಡಬೇಕು. ಜಾಗ ನೀಡಲು ನಿರಾಕರಿಸುವವರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗುವುದು ಎಂದು ತಿಳಿಸಿದರು.
ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ, ಬುದ್ದ ವಿಹಾರ ನಿರ್ಮಾಣ, ಮಹರ್ಷಿ ವಾಲ್ಮೀಕಿ ಭವನ ನಿರ್ಮಿಸಲು ನಿವೇಶನವನ್ನು ಗುರುತಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ 813 ದೇವಸ್ಥಾನಗಳಿದ್ದು ಅವುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಉದ್ಯೋಗ ನೀಡಬೇಕು. ದೇವಾಲಯ ಪ್ರವೇಶ ಮಾಡಲು ಮುಕ್ತ ಅವಕಾಶವಿರುವುದಾಗಿ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸುವಂತೆ ತಿಳಿಸಿದರು.
ಕನಕಪುರ ತಾಲ್ಲೂಕು ಸಿಂಗಸಂದ್ರ ಗ್ರಾಮದಲ್ಲಿ ಸುಮಾರು 600 ಮಂದಿ ಪರಿಶಿಷ್ಟ ಜಾತಿಯವರು ವಾಸಿಸುತ್ತಿದ್ದು ಅವರಿಗೆ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಕ್ರಷರ್ ನಿರ್ವಹಣೆಯಲ್ಲಿ ಗುತ್ತಿಗೆ ನೀಡುವುದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಅವಕಾಶ ಕಲ್ಪಿಸುವಂತೆ ತಿಳಿಸಿದರು. ಚನ್ನಪಟ್ಟಣ ತಾಲ್ಲೂಕು ಹಾಗೂ ಹಾರೋಹಳ್ಳಿ ವ್ಯಾಪ್ತಿಯಲ್ಲಿ ಎರಡು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಒಬ್ಬ ಅಧಿಕಾರಿಯನ್ನು ನೇಮಿಸುವಂತೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಂತೋಷ್ ಬಾಬು ಮಾತನಾಡಿ, ಪ್ರತಿ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರಗಳನ್ನು ಪ್ರಕಟಣಾ ಫಲಕ ಅಳವಡಿಸಿ ನೀಡಲಾಗುವುದು. ಪ್ರತಿ ತಿಂಗಳು ಪೊಲೀಸ್ ಠಾಣೆಯಲ್ಲಿ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಜಿ.ಪಂ. ಸಿಇಒ ದಿಗ್ವಿಜಯ್ ಬೋಡ್ಕೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗೀಶ್, ರಾಮನಗರ ನಗರಸಭೆ ಆಯುಕ್ತ ನಂದಕುಮಾರ್, ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಮುಂಖಡರುಗಳು ಹಾಜರಿದ್ದರು.