ರಾಮನಗರ ವಿಧಾನಸಭಾ ಕ್ಷೇತ್ರ : ಸಮರ್ಥ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಗೆ ಒತ್ತಾಯ : ಇಕ್ಬಾಲ್ ಹುಸೇನ್ ಪಕ್ಷದ ಕಾರ್ಯಕರ್ತರಲ್ಲಿಯೇ ಗುಂಪುಗಾರಿಕೆ ನಡೆಸುವ ಮೂಲಕ ಪಕ್ಷದ ಹಿನ್ನಡೆಗೆ ಕಾರಣರಾಗುತ್ತಿದ್ದಾರೆ : ನರಸಿಂಹಮೂರ್ತಿ

ಮನಗರ : ಮುಂದಿನ‌ ವಿಧಾಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕಾದರೆ ಕೂಡಲೆ‌ ಸಮರ್ಥ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕೆಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಪ್ರಧಾನ ಕಾರ್ಯದರ್ಶಿ ಬಸವನಪುರ ನರಸಿಂಹಮೂರ್ತಿ ಪಕ್ಷದ ವರಿಷ್ಠರನ್ನು ಒತ್ತಾಯಿಸಿದರು.

ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹದಿನೆಂಟು‌ ವರ್ಷಗಳಿಂದ ಕಾಂಗ್ರೆಸ್ ಪಕ್ಷ ಅಸ್ತಿತ್ವ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರತಿ ಚುನಾವಣೆಯಲ್ಲಿಯೂ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಇದನ್ನು ತಪ್ಪಿಸಲು ಕೂಡಲೆ ವರಿಷ್ಠರು ಸೂಕ್ತ ಅಭ್ಯರ್ಥಿ ಘೋಷಿಸಬೇಕಾಗಿದೆ ಎಂದರು.

2004 ರಲ್ಲಿ ಕುಮಾರಸ್ವಾಮಿ ಅವರು ಸ್ಪರ್ಧಿಸಿ ಗೆದ್ದ ನಂತರ ಪಕ್ಷವನ್ನು ಸದೃಢಗೊಳಿಸಲು ಸಾಧ್ಯವಾಗುತ್ತಿಲ್ಲ. ಒಂದು ಚುನಾವಣೆಯಲ್ಲಿ ಮಮತಾ ನಿಚ್ಚಾನಿ ಅವರನ್ನು ಕಣಕ್ಕಿಳಿಸಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲಬೇಕಾಯಿತು. ನಂತರ ಮರಿದೇವರು ಪಕ್ಷ ಕಟ್ಟಿ ಅವರು ಸಹ ಸೋಲನ್ನು ಕಂಡು ಅಕಾಲಿಕವಾಗಿ ಮರಣ ಹೊಂದಿದರು. ಇದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿತು. ಇದೀಗ ಕಳೆದ ಬಾರಿ ಅಭ್ಯರ್ಥಿಯಾಗಿ‌ ಸೋಲನ್ನು‌ ಕಂಡಿರುವ ಇಕ್ಬಾಲ್ ಹುಸೇನ್ ಅವರು ಪಕ್ಷದ ಕಾರ್ಯಕರ್ತರಲ್ಲಿಯೇ ಗುಂಪುಗಾರಿಕೆ ನಡೆಸುವ ಮೂಲಕ ಪಕ್ಷದ ಹಿನ್ನಡೆಗೆ ಕಾರಣರಾಗುತ್ತಿದ್ದಾರೆ ಎಂದು ದೂರಿದರು.

ಕಳೆದ ಚುನಾವಣೆಯಲ್ಲಿ ಇಕ್ಬಾಲ್ ಹುಸೇನ್ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದ್ದರಿಂದ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಗಿದೆ. ಪಕ್ಷದಲ್ಲಿ ಎರಡು, ಮೂರು ಗುಂಪುಗಳಾಗಿವೆ. ಇದನ್ನು ತಪ್ಪಿಸಿ ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಿಸಬೇಕಾಗಿದೆ. ಈ ಬಗ್ಗೆ ಸಂಸದರು‌ ಮತ್ತು ಕೆಪಿಸಿ ಅಧ್ಯಕ್ಷರ ಗಮನಕ್ಕೆ ತರಲಾಗಿದೆ ಎಂದರು.

ಇಕ್ಬಾಲ್ ಹುಸೇನ್ ಅವರಿಗೆ ತಮ್ಮ ಗೆಲುವು ಕಷ್ಟಸಾಧ್ಯ‌ ಎಂಬುದರ ಬಗ್ಗೆ‌ ಅರಿವಿದ್ದು, ಅವರೆ ಸ್ವ ಪ್ರೇರಣೆಯಿಂದ ತಮ್ಮ ಅಭ್ಯರ್ಥಿ ಸ್ಥಾನವನ್ನು ತ್ಯಾಗ ಮಾಡಬೇಕಾಗಿದೆ. ಅಲ್ಲದೆ ಬಿಡಡದಿಯಲ್ಲಿ ನಡೆದ ಕಾಂಗ್ರೆಸ್ ಚಿಂತನ ಮಂಥನ ಸಭೆಗೆ ಕೆಲವು ನಿಷ್ಠಾವಂತ ಕಾರ್ಯಕರ್ತರನ್ನು ಕರೆಯಬಾರದೆಂದು ಇಕ್ಬಾಲ್ ಹುಸೇನ್ ಅವರು ತಾಖೀತು ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇಂತಹ ಬೆಳವಣಿಗೆಗಳು‌ ಪಕ್ಷದ ಅಭಿವೃದ್ಧಿ ದೃಷ್ಠಿಯಿಂದ ಒಳ್ಳೆಯದಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *