ಎಚ್ ಸಿಎಲ್ ಕ್ರೀಡಾಕೂಟ : ರಾಷ್ಟ್ರಮಟ್ಟಕ್ಕೆ ಇಗ್ಗಲೂರು ಪ್ರೌಢಶಾಲೆ ಮಕ್ಕಳ ಲಗ್ಗೆ

ಚನ್ನಪಟ್ಟಣ : ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುವುದರ ಜೊತೆಗೆ, ತಮ್ಮ ಶಾಲೆಗೆ, ಗ್ರಾಮಕ್ಕೆ, ಗುರು-ಹಿರಿಯರಿಗೆ ಕೀರ್ತಿ ತರಬಹುದು ಎಂಬುದಕ್ಕೆ ನಮ್ಮ ಶಾಲೆಯ ಮಕ್ಕಳು ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ ಎಂದು ಇಗ್ಗಲೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸುನಿಲ್ ಕುಮಾರ್ ಆರ್. ಮೆಚ್ಚುಗೆ ವ್ಯಕ್ತಪಡಿಸಿದರು.
ಎಚ್ ಸಿಎಲ್ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತಾಲ್ಲೂಕಿನ ಗಡಿಗ್ರಾಮ ಇಗ್ಗಲೂರು ಪ್ರೌಢಶಾಲೆ ಮಕ್ಕಳನ್ನು ಅಭಿನಂದಿಸಿ ಅವರು ಮಾತನಾಡಿದರು.
ನಮ್ಮ ವಿದ್ಯಾರ್ಥಿಗಳು ಸತತವಾಗಿ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವಲ್ಲಿ ನನ್ನ ಸಹಪಾಠಿ ಶಿಕ್ಷಕರ ಅವಿರತ ಶ್ರಮವೂ ಕಾರಣವಾಗಿದೆ. ಇದರ ಸದುಪಯೋಗ ಪಡೆದುಕೊಂಡು ಕಿರಿಯ ವಿದ್ಯಾರ್ಥಿಗಳು ಕೂಡ ನಿಮ್ಮ ಹಿರಿಯ ಸಹವರ್ತಿಗಳ ಸ್ಫೂರ್ತಿಯಿಂದ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂದು
ಕಿವಿಮಾತು ಹೇಳಿದರು.
ಇಗ್ಗಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಇ.ತಿ.ಶ್ರೀನಿವಾಸ್ ಮಾತನಾಡಿ, ಪ್ರತಿಷ್ಠಿತ ಎಚ್ ಸಿಎಲ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಇಗ್ಗಲೂರು ಇಲ್ಲಿಯ ಮಕ್ಕಳು ಭಾಗವಹಿಸಿ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ನಮ್ಮ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಜೇತರ ವಿವರ:

ಬಾಲಕರ ವಿಭಾಗದ ವಾಲಿಬಾಲ್ ನಲ್ಲಿ ಪ್ರಥಮ ಸ್ಥಾನ, ಗುಂಡು ಎಸೆತದ ಸ್ಪರ್ಧೆಯಲ್ಲಿ ಸಿದ್ದೇಶ್ ಪ್ರಥಮ, ಬಾಲಕಿಯರ ಬ್ಯಾಡ್ಮಿಂಟನ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಹರ್ಷಿತ ಪ್ರಥಮ, ಬಾಲಕರ ಬ್ಯಾಡ್ಮಿಂಟನ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಸಿದ್ಧರಾಜು ಪ್ರಥಮ, ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರೀತಮ್ ದ್ವಿತೀಯ, ಉದ್ದ ಜಿಗಿತದಲ್ಲಿ ನಂದನ್ ದ್ವಿತೀಯ, ಮದನ್ ತೃತೀಯ ಹಾಗೂ ಉದ್ದ ಜಿಗಿತ ಸ್ಪರ್ಧೆಯಲ್ಲಿ ಹರ್ಷಿತ ದ್ವಿತೀಯ ಬಹುಮಾನಗಳನ್ನು ಗಳಿಸಿಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮುಖ್ಯ ‌ಶಿಕ್ಷಕ ಸುನಿಲ್ ಕುಮಾರ್ ಆರ್, ಸಹ ಶಿಕ್ಷಕರಾದ ಹರೂರು ಚಂದ್ರಶೇಖರ್, ಮಹೇಂದ್ರ ಕುಮಾರ್, ಶಾಲಂ ಶಾಂತಿದಾಸ್, ಅಪ್ಪಾಜಿಗೌಡ, ಎಂ.ಚಂದ್ರಶೇಖರ್, ಪ್ರಸನ್ನ ಕುಮಾರ್, ನಿರ್ಮಲಾ, ವಾಣಿ, ಎಸ್ ಡಿ ಎಂ ಸಿ ಅಧ್ಯಕ್ಷ ನಿರಂಜನಸ್ವಾಮಿ ಹಾಗೂ ಪದಾಧಿಕಾರಿಗಳು, ಗ್ರಾಮಸ್ಥರು ಸಾಧಕ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ
ಅಭಿನಂದಿಸಿದರು.


Leave a Reply

Your email address will not be published. Required fields are marked *